ಶಿವರಾಜ್ ಕುಮಾರ್ ನಟನೆ, ನಿರ್ಮಾಣದ “ಭೈರತಿ ರಣಗಲ್’ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದೆ. ಆದರೆ, ಈ ಘೋಷಣೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ “ಈ ಸ್ಪರ್ಧೆ ಬೇಕಿತ್ತಾ?’ ಎಂಬಂತಹ ಕಾಮೆಂಟ್‌ಗಳು ಓಡಾಡುತ್ತಿದ್ದವು. ಅದಕ್ಕೆ ಕಾರಣ ಆಗಸ್ಟ್ 15ರಂದು ಪರಭಾಷೆಯ ಎರಡು ದೊಡ್ಡ ಸಿನಿಮಾಗಳು ಕೂಡಾ ಬಿಡುಗಡೆಯಾಗುತಿರುವುದು.
ಅಜಯ್ ದೇವಗನ್ ನಟನೆಯ “ಸಿಂಗಂ ಅಗೇನ್’ ಚಿತ್ರ ಹಾಗೂ ಅಲ್ಲು ಅರ್ಜುನ್ ನಟನೆಯ “ಪುಷ್ಪ-2′ ಚಿತ್ರಗಳು ಕೂಡಾ ಆ.15ರಂದೇ ತೆರೆಕಾಣಲಿದೆ. ಹೀಗಾಗಿ ಮೂರು ಸ್ಟಾರ್ ಚಿತ್ರಗಳು ಒಂದೇ ದಿನ ತೆರೆಕಾಣಬೇಕೇ ಎಂಬ ಚರ್ಚೆಗಳು ಆರಂಭವಾಗಿದ್ದವು. ಇದಕ್ಕೆ ನಟ ಶಿವರಾಜ್ ಕುಮಾರ್ ಉತ್ತರಿಸಿದ್ದಾರೆ.
“ಇಲ್ಲಿ ನಾವು ಯಾರ ಜೊತೆಯೂ ಸ್ಪರ್ಧೆಗೆ ಇಳಿದಿಲ್ಲ. ಎಲ್ಲರಿಗೂ ರಜಾದಿನಗಳು ಮುಖ್ಯ. ರಜಾ ಇದ್ದಾಗ ಜನ ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ನಂಬಿಕೆ. ಅದನ್ನು ಚೆನ್ನಾಗಿ ಬಳಸಿಕೊಳ್ಳಬೇಕೆಂದು ಪ್ರತಿಯೊಂದು ತಂಡಗಳು ಕಾಯುತ್ತಿವೆ. ನಾವು ಕೂಡಾ ಅದೇ ಕಾರಣಕ್ಕಾಗಿ ಆ.15ರಂದು ಬರುತ್ತಿರುವುದು. “ಘೋಸ್ಟ್’ ಬಿಡುಗಡೆ ಸಮಯದಲ್ಲೂ ಹೀಗೇ ಆಯಿತು. ಅಂತಿಮವಾಗಿ ಯಾವ ಚಿತ್ರ ಚೆನ್ನಾಗಿರುತ್ತದೋ, ಜನ ಅದನ್ನು ನೋಡುತ್ತಾರೆ’ ಎನ್ನುತ್ತಾರೆ.
ಈಗಾಗಲೇ “ಭೈರತಿ ರಣಗಲ್’ ಶೇ 70ರಷ್ಟು ಚಿತ್ರೀಕರಣ ಮುಗಿದಿದ್ದು, ಇನ್ನು 25ರಿಂದ 30 ದಿನಗಳ ಚಿತ್ರೀಕರಣ ಬಾಕಿ ಇದೆಯಂತೆ.
ಚಿತ್ರದ ಬಗ್ಗೆ ಮಾತನಾಡುವ ಶಿವಣ್ಣ, “ಭೈರತಿ ರಣಗಲ್’ನ ಸಣ್ಣ ಕಥೆಯನ್ನು ಇಲ್ಲಿ ಬೆಳೆಸಲಾಗಿದೆ. ಯಾಕೆ ಅವನು ಭೈರತಿ ರಣಗಲ್ ಆಗುತ್ತಾನೆ. ಜನರಿಗೆ ಯಾಕೆ ಅವನ್ನು ಕಂಡರೆ ಅಷ್ಟು ಪ್ರೀತಿ ಎಂದು ಹೇಳಲಾಗಿದೆ. ಹೆಚ್ಚು ಆಡಂಬರವಿಲ್ಲದೆ, ಸರಳವಾಗಿ ಈ ವಿಷಯವನ್ನು ಹೇಳಲಾಗಿದೆ. ಇಲ್ಲಿ ಎಷ್ಟು ಮಾತು ಬೇಕೋ, ಅಷ್ಟಿದೆ. ನರ್ತನ್ ತುಂಬಾ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ.
ನರ್ತನ್ ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. “ಮಫ್ತಿ’ ಚಿತ್ರದಲ್ಲಿನ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಲಿದೆಯಂತೆ. ಮುಖ್ಯವಾಗಿ ಶಿವರಾಜ್‌ಕುಮಾರ್ ಅವರ ಕಾಸ್ಟೂಮ್, ಅದರ ಹಿನ್ನೆಲೆ, ಶಿವಣ್ಣ ಗ್ಯಾಂಗ್‌ಸ್ಟರ್ ಆಗಿದ್ದು ಹೇಗೆ, ಬ್ಲಾಕ್ ಡ್ರೆಸ್ ಯಾಕೆ ಸೇರಿದಂತೆ ಹಲವು ಅಂಶಗಳಿಗೆ ಇಲ್ಲಿ ಉತ್ತರ ಸಿಗಲಿದೆ ಎನ್ನುವುದು ನರ್ತನ್ ಮಾತು.