ಶತಕದ ಸಿನೆಮಾವನ್ನು ಕಂಡ ಕೋಸ್ಟಲ್‌ವುಡ್‌ಗೆ ಸರಕಾರದಿಂದ ಇದೀಗ ಒಂದಿಷ್ಟು ಚೇತರಿಕೆ ನೀಡುವ ಭರವಸೆ ವ್ಯಕ್ತವಾಗಿದೆ. ತುಳು ಸಿನೆಮಾಗಳ ಭವಿಷ್ಯದ ದೃಷ್ಟಿಯಿಂದ ಸಬ್ಸಿಡಿ ಪ್ರಮಾಣವನ್ನು ‘ಹೆಚ್ಚಿನ ಸಿನೆಮಾಕ್ಕೆ ಹೆಚ್ಚಿನ ಸಬ್ಸಿಡಿ’ ಎಂಬ ನೀತಿಗೆ ಸರಕಾರ ಮನಸ್ಸು ಮಾಡಿದಂತಿದೆ. ಜತೆಗೆ ತುಳು ಸಿನೆಮಾಕ್ಕೆ ಇನ್ನಷ್ಟು ಶಕ್ತಿ ನೀಡುವ ಉದ್ದೇಶದಿಂದ ‘ತುಳು ಫಿಲ್ಮ್ ಇನ್‌ಸ್ಟಿಟ್ಯೂಟ್’ ಒಂದನ್ನು ಮಂಗಳೂರಿನಲ್ಲಿ ಆರಂಭಿಸುವ ಬಗ್ಗೆಯೂ ಸುಳಿವು ದೊರೆತಿದೆ.
ಇತ್ತೀಚಿಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜನೆಗೊಂಡಿದ್ದ ಶತಚಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಯು.ಟಿ.ಖಾದರ್ ಅವರು ಈ ಎರಡೂ ವಿಚಾರವನ್ನು ಪ್ರಸ್ತಾವಿಸಿದ್ದು, ಮುಖ್ಯಮಂತ್ರಿಗಳ ಜತೆಗೆ ಶೀಘ್ರ ಚರ್ಚಿಸಿ, ಮುಂದಡಿ ಇಡಲಾಗುವುದು ಎಂಬ ಭರವಸೆ ನೀಡಿದ್ದಾರೆ. ಈ ಮೂಲಕ ಕೋಸ್ಟಲ್‌ವುಡ್ ಲೋಕದಲ್ಲಿ ಹೊಸ ನಿರೀಕ್ಷೆಯೊಂದು ಗರಿಗೆದರಿದಂತಾಗಿದೆ.
ಸಿನೆಮಾ ಮಾಡುವ ಸಂದರ್ಭದಲ್ಲಿ ಕೆಲವೊಂದಿಷ್ಟು ಲೆಕ್ಕಾಚಾರಗಳನ್ನು ಮಾಡಿಕೊಂಡೇ ನಿರ್ಮಾಪಕ ಹೆಜ್ಜೆ ಇಡುತ್ತಾನೆ. ಸಣ್ಣ ಬಜೆಟ್ ಸಿನೆಮಾವಾದರೆ ಸಬ್ಸಿಡಿ ಸೇರಿದಂತೆ ಎಲ್ಲ ಮೂಲವನ್ನು ಲೆಕ್ಕ ಹಾಕಿಕೊಂಡು ಸಿನೆಮಾ ಮಾಡಲು ಮುಂದಾಗುವವರು ಕೆಲವರಿದ್ದಾರೆ. ಸದ್ಯ ಕನ್ನಡ ಸೇರಿದಂತೆ ಪ್ರಾದೇಶಿಕ ಸಿನೆಮಾ ಎಲ್ಲ ಒಳಗೊಂಡು ಒಟ್ಟು 125 ಸಿನೆಮಾಕ್ಕೆ ಸಬ್ಸಿಡಿ ರಾಜ್ಯ ಸರಕಾರದಿಂದ ದೊರೆಯುತ್ತಿದೆ. ಇದರಲ್ಲಿ 5 ಮಾತ್ರ ಪ್ರಾದೇಶಿಕ ಭಾಷೆಯ ಸಿನೆಮಾಗಳಿಗೆ ಸಬ್ಸಿಡಿ ಲಭಿಸುತ್ತಿದೆ. (ಸಾಮಾನ್ಯ ಪಟ್ಟಿಯನ್ನು ಹೊರತುಪಡಿಸಿ)ಅಂದರೆ ತುಳು, ಕೊಂಕಣಿ, ಬ್ಯಾರಿ, ಲಂಬಾಣಿ, ಕೊಡವ ಸಿನೆಮಾಗಳು ಇದರಲ್ಲಿಯೇ ಬರುವುದನ್ನು ಲೆಕ್ಕಹಾಕಿದರೆ, ಪ್ರತೀ ವರ್ಷ 20ರಷ್ಟು ಬಿಡುಗಡೆ ಆಗುವ ತುಳು ಭಾಷೆಯ ಸಿನೆಮಾಕ್ಕೆ ಸಿಗುವ ಸಬ್ಸಿಡಿ ಬಹಳಷ್ಟು ಕಡಿಮೆ ಎಂದೇ ಹೇಳಬಹುದು.
ಸದ್ಯ 10 ಲಕ್ಷ ರೂ. ಸಬ್ಸಿಡಿ ದೊರೆಯುತ್ತಿದೆ. ಇದನ್ನು 20 ಲಕ್ಷ ರೂ.ಗೆಏರಿಸಬೇಕು ಹಾಗೂ ಪ್ರಾದೇಶಿಕ ಸಿನೆಮಾಗಳ ಸಂಖ್ಯೆಯನ್ನು 25ಕ್ಕೆ ಏರಿಸಬೇಕು ಎಂಬ ಬೇಡಿಕೆ ಸದ್ಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಟೇಬಲ್‌ಗೆ ಬಂದಿತ್ತು. ಇದೀಗ ಸಚಿವರು ಹೇಳಿಕೆ ಈ ಫೈಲ್‌ಗೆ ಮುಕ್ತಿ ನೀಡುವಲ್ಲಿ ಶಕ್ತಿ ನೀಡಬಹುದು ಎಂಬ ನಿರೀಕ್ಷೆ ಸಿನೆಮಾ ನಿರ್ಮಾಪಕರದ್ದು.
ತುಳು ಸಿನೆಮಾ ಲೋಕದಲ್ಲಿ ಸದ್ಯ ಸಾವಿರಾರು ಜನ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಎಲ್ಲರೂ ನುರಿತರು ಎಂದು ಹೇಳುವಂತಿಲ್ಲ. ನಿನ್ನೆ ಮೊನ್ನೆ ಬಂದವರೂ ಇದ್ದಾರೆ. ಏನು-ಎತ್ತ ಎಂಬ ಬಗ್ಗೆ ಲವಲೇಶವೂ ಗೊತ್ತಿಲ್ಲದವರಿದ್ದಾರೆ. ಕುಡ್ಲದ ಜನರ ಟೇಸ್ಟ್ ಗಮನಿಸದ ಎಷ್ಟೋ ಜನರು ಇಂಡಸ್ಟ್ರಿಯಲ್ಲಿ ದುಡಿಯುತ್ತಿದ್ದಾರೆ. ಅವರಿಗೆಲ್ಲ ಟ್ರೈನಿಂಗ್ ಕೊಟ್ಟು ತುಳುನಾಡಿಗೆ ಬೇಕಾದಂತಹ ಸಿನೆಮಾ ಮಾಡುವ ಬಗ್ಗೆ ಪ್ಲ್ಯಾನ್ ಮಾಡಿದರೆ ಹೇಗೆ? ಹೊಸ ನಿರ್ದೇಶಕರು ಕೂಡ ಒಂದಿಷ್ಟು ಹೊಸ ಟಿಪ್ಸ್‌ಗಳನ್ನು ಪಡೆದರೆ, ಹೊಸ ನಟ-ನಟಿಯರು ಕೂಡ ಒಂದಿಷ್ಟು ಟ್ರೈನಿಂಗ್ ಪಡೆದು ಸಿನೆಮಾ ಮಾಡಿದರೆ ಇನ್ನಷ್ಟು ಬದಲಾವಣೆ ಕಾಣಬಹುದು ಎಂಬ ಲೆಕ್ಕಾಚಾರದಲ್ಲಿ ತುಳು ಫಿಲ್ಮ್ ಇನ್‌ಸ್ಟಿಟ್ಯೂಟ್ ಮೂಡಿಬಂದರೆ ಉತ್ತಮ ಎಂಬುದು ಸದ್ಯ ಈಗ ಕೇಳಿಬಂದಿರುವ ಸಂಗತಿ. ಪಿಲಿಕುಳದಲ್ಲಿ ಇಂತಹ ಸಂಸ್ಥೆ ಸ್ಥಾಪನೆ ಬಗ್ಗೆ ಸರಕಾರಕ್ಕೆ ಇಚ್ಛಾಶಕ್ತಿಯಿದೆ. ಕಾಯೋಣ. ಎಲ್ಲಿ? ಏನು? ಹೇಗೆ? ಎಂಬುದನ್ನು ನೋಡಿಕೊಂಡು ಬದಲಾವಣೆ ಆಗುವುದಾದರೆ ಇಂಡಸ್ಟ್ರಿ ಬೆಳೆಯಲು ಸಾಧ್ಯ.
ಇಷ್ಟಿದ್ದರೂ, ಕರಾವಳಿಯಲ್ಲಿ ತುಳು ಸಿನೆಮಾಗಳು ಥಿಯೇಟರ್‌ಗಾಗಿ ಹೋರಾಡುವ ಪರಿಸ್ಥಿತಿ ಕಂಡರೆ ಅಯ್ಯೋ ಅನಿಸುತ್ತಿದೆ. ಮಂಗಳೂರಿನಲ್ಲಿ ಇರುವ ಒಂದೆರಡು ಥಿಯೇಟರ್‌ಗಳು ಲಕ್ಷಕ್ಕಿಂತಲೂ ಮಿಗಿಲಾಗಿ ಬಾಡಿಗೆ ಕೇಳಿದರೆ, ಮಲ್ಟಿಪ್ಲೆಕ್ಸ್ ತುಳು ನಿರ್ಮಾಣ ಪಕರಿಗೆ ಕಷ್ಟವಾಗುತ್ತಿದೆ. ಹೊರಗಿನ ಕೆಲವು ಥಿಯೇಟರ್‌ಗಳು ಹಣವನ್ನೇ ನಿರ್ಮಾಪಕರಿಗೆ ನೀಡುತ್ತಿಲ್ಲ. ಇಂತಹ ಮೂಲಸಮಸ್ಯೆಯೂ ಪರಿಹಾರವಾಗ ಬೇಕಾದ ಅಗತ್ಯತೆ ಇದೆ.