Advertisement

53ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಪಣಜಿ ಸಜ್ಜು; ಇಂದಿನಿಂದ 28ರ ವರೆಗೆ 280 ಸಿನೆಮಾಗಳ ಪ್ರದರ್ಶನ

11:57 AM Nov 20, 2022 | ಅರವಿಂದ ನಾವಡ |

ಪಣಜಿ : ಪ್ರವಾಸೋದ್ಯಮಕ್ಕೆ ಹೆಸರಾದ ಗೋವಾದ ರಾಜಧಾನಿ ಪಣಜಿಯಲ್ಲಿ‌ 53 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಊಊಐ) ದ ಕ್ಷಣಗಣನೆ ಆರಂಭವಾಗಿದೆ.

Advertisement

ಹಿಂದಿನ ಕೆಲವು ವರ್ಷಗಳಿಗಿಂತ ಈ ವರ್ಷ ಕೊಂಚ ವಿಭಿನ್ನವಾಗಿ ಸಿದ್ಧಗೊಳ್ಳುತ್ತಿರುವ ಎಂಟರ್‌ಟೈನ್‌ ಮೆಂಟ್‌ ಸೊಸೈಟಿ ಆಫ್ ಗೋವಾದ ಆವರಣ ಹಾಗೂ ಪಣಜಿಯ ಮುಖ್ಯ ರಸ್ತೆಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಕೃತಕ ನಿರ್ಮಿತ ವರ್ಣರಂಜಿತ ನವಿಲುಗಳ ಸಂಭ್ರಮ ಉತ್ಸವಕ್ಕೆ ಹೊಸ ಹುಮ್ಮಸ್ಸು ತುಂಬತೊಡಗಿವೆ. ನ್ಯಾಷನಲ್‌ ಫಿಲ್ಮ್ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ (ಎನ್‌ಎಫ್ಡಿಸಿ) ಉತ್ಸವದ ನೇತೃತ್ವ ವಹಿಸಿದೆ. ವಿವಿಧ ಇಲಾಖೆಗಳೂ ಎನ್‌ಎಫ್ಡಿಸಿ ಜತೆಗೆ ಕೈ ಜೋಡಿಸಿವೆ. ಹಲವು ರಾಜ್ಯ ಹಾಗೂ ದೇಶಗಳಿಂದ ಈಗಾಗಲೇ ಸಿನಿ ಆಸಕ್ತರು ಆಗಮಿಸತೊಡಗಿದ್ದಾರೆ.

ಈ ದಿನ (ರವಿವಾರ-ನ.20) ಸಂಜೆ ಪಣಜಿಯ ಡಾ. ಶ್ಯಾಮ ಪ್ರಸಾದ ಮುಖರ್ಜಿ ಒಳಾಂಗಣ ಸಭಾಂಗಣದಲ್ಲಿ ಸಂಜೆ 4 ಕ್ಕೆ ಚಿತ್ರೋತ್ಸವದ ಉದ್ಘಾಟನೆ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲರಾದ ಪಿ.ಎಸ್‌. ಶ್ರೀಧರನ್‌, ಕೇಂದ್ರ ಸಚಿವರಾದ ಅನುರಾಗ್‌ ಠಾಕೂರ್‌, ಮುರುಗನ್‌, ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮತ್ತಿತರರು ಪಾಲ್ಗೊಳ್ಳುವರು. ಬಾಲಿವುಡ್‌ ನಟರಾದ ಅಜಯ್‌ ದೇವಗನ್‌ ಹಾಗೂ ಸುನಿಲ್‌ ಶೆಟ್ಟಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಕಲಾವಿದರಾದ ಮೃಣಾಲ್‌ ಠಾಕೂರ್‌, ವರುಣ್‌ ಧವನ್‌. ಕೆಥರೇನ್‌ ಥೆರೇಸಾ, ಸಾರಾ ಆಲಿಖಾನ್‌, ಕಾರ್ತಿಕ್‌ ಆರ್ಯನ್‌ ಹಾಗೂ ಅಮೃತಾ ಖನ್ವಿಲ್ಕರ್‌ ಪಾಲ್ಗೊಳ್ಳುವರು.

ಈ ಬಾರಿ 79 ದೇಶಗಳ 280 ಕ್ಕೂ ಹೆಚ್ಚು ಚಲನಚಿತ್ರಗಳು ಸಿನಿಮಾ ಸಂಸ್ಕೃತಿಯನ್ನು ಉಣಬಡಿಸಲಿವೆ. ಸುಮಾರು 7 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕ್ರಿಸ್ಟೋಪ್‌ ಜಾನುಸ್ಸಿ, ಲಾವ್‌ ಡಿಯಾಜ್‌, ನದಾವ್‌ ಲಾಪಿಡ್‌, ಮ್ಯಾಡಿ ಹ್ಯಾಸನ್‌, ನಟಾಲಿಯಾ ಲೋಪೆಜ್‌ ಮತ್ತಿತರರೂ ಸೇರಿದಂತೆ ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಿನಿಮಾ ಕ್ಷೇತ್ರದ ಮಹನೀಯರು ಉತ್ಸವದಲ್ಲಿ ಪಾಲ್ಗೊಳ್ಳುವರು. ಉತ್ಸವದಲ್ಲಿ ಮಣಿರತ್ನಂ, ಎ.ಆರ್‌. ರೆಹಮಾನ್‌, ಪರೇಶ್‌ ರಾವಲ್‌, ಅನುಪಮ್‌ ಖೇರ್‌, ಅಕ್ಷಯ್‌ ಖನ್ನಾ, ಮನೋಜ್‌ ಬಾಜಪೇಯಿ, ನವಾಜುದ್ದೀನ್‌ ಸಿದ್ದಿಕಿ, ಶೇಖರ್‌ ಕಪೂರ್‌, ರಾಣಾ ದಗ್ಗುಬಟ್ಟಿ, ಕೃತಿ ಸನೋನ್‌, ಪ್ರಭುದೇವ ಮತ್ತಿತರರು ಭಾಗವಹಿಸುವ ಸಾಧ್ಯತೆ ಇದೆ.

Advertisement

ಹಳ್ಳಿ ಹಳ್ಳಿಗಳಲ್ಲೂ ಚಿತ್ರ ಪ್ರದರ್ಶನ

ಈ ಬಾರಿ ಗೋವಾದ ಹಳ್ಳಿ ಹಳ್ಳಿಗಳಿಗೂ ಆಯ್ದ ಚಲನಚಿತ್ರಗಳ ಪ್ರದರ್ಶನಕ್ಕೆ ಕಾರವಾನ್‌ ಗಳನ್ನು ಸಿದ್ಧಪಡಿಸಲಾಗಿದೆ. ಈ ಮೂಲಕ ಉತ್ಸವದ ಸಂಭ್ರಮವನ್ನು ಹಳ್ಳಿಗಳಿಗೂ ವಿಸ್ತರಿಸುವುದು ಹಾಗೂ ಆ ಮೂಲಕ ಸಿನಿಮಾ ಸಂಸ್ಕೃತಿಯನ್ನು ವಿಸ್ತರಿಸುವುದು ಆಯೋಜಕರ ಉದ್ದೇಶ. ಅದರೊಂದಿಗೆ ಪ್ರವಾಸೋದ್ಯಮ ಹಾಗೂ ಚಿತ್ರೋದ್ಯಮ ಬೆಳೆಸುವ ಆಶಯವೂ ಇದರ ಹಿಂದಿದೆ. ಇದಲ್ಲದೇ, ಮೊದಲ ಬಾರಿಗೆ ಸ್ಥಳೀಯ ಸಂಸ್ಕೃತಿಯ ಹಿರಿಮೆಯನ್ನು ಸಿನಿಮಾ ಆಸಕ್ತರಿಗೆ ವಿವರಿಸುವ ಪ್ರಯತ್ನವೂ ನಡೆದಿದೆ. ಅದರ ಅಂಗವಾಗಿ ಗೋವಾದ ಸಾಂಸ್ಕೃತಿಕ ಸಂಭ್ರಮದ ಶಿಗೊ¾àತ್ಸವ, ಗೋವಾ ಕಾರ್ನಿವಲ್‌ ಸಹ ಆಯೋಜಿಸಲಾಗಿದೆ.

ಆಸ್ಟ್ರಿಯಾದ ಡಯಟರ್‌ ಬರ್ನರ್‌ ನಿರ್ದೇಶನದ ಆಲ್ಮಾ ಮತ್ತು ಆಸ್ಕರ್‌ ಚಿತ್ರ ಉತ್ಸವದ ಉದ್ಘಾಟ    ನಾ ಚಿತ್ರವಾದರೆ, ಪೊಲೀಷ್‌ ಭಾಷೆಯ ಚಿತ್ರ ನಿರ್ದೇಶಕ ಕ್ರಿಸ್ಟೋಪ್‌ ಜಾನುಸ್ಸಿಯವರ ಪಫೆìಕ್ಟ್ ನಂಬರ್‌ ಸಮಾರೋಪ ಚಿತ್ರವಾಗಿದೆ. ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡದ ಪೃಥ್ವಿ ಕೊಣನೂರು ನಿರ್ದೇಶನದ ಹದಿನೇಳೆಂಟು ಉದ್ಘಾಟನಾ ಚಿತ್ರ. ಈ ಚಿತ್ರವಲ್ಲದೇ ಕೃಷ್ಣೇಗೌಡರ ನಾನು ಕುಸುಮ, ಕಥೇತರ ವಿಭಾಗದಲ್ಲಿ ಬಸ್ತಿ ದಿನೇಶ್‌ ಶೆಣೈಯವರ ಮಧ್ಯಂತರ ಚಿತ್ರವೂ ಸೇರಿದಂತೆ 25 ಕಥಾ ಹಾಗೂ 19 ಕಥೇತರ ಚಿತ್ರಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. 183 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಲನಚಿತ್ರಗಳು ಉತ್ಸವದ ಭಾಗವಾಗಿವೆ. ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತೆ ಆಶಾ ಪರೇಖ್‌ ಅವರ ಮೂರು ಚಲನಚಿತ್ರಗಳೂ ಪ್ರದರ್ಶನಗೊಳ್ಳಲಿದ್ದು, ಮಧುರ್‌ ಭಂಡಾರಕರ್‌ ಅವರ ಹೊಸ ಸಿನಿಮಾ ಇಂಡಿಯಾ ಲಾಕ್‌ಡೌನ್‌ ನ ವಿಶ್ವ ಪೂರ್ವ ಪ್ರದರ್ಶನ ಉತ್ಸವದಲ್ಲಿ ಕಾಣಲಿದೆ. ಇದಲ್ಲದೇ ಆಸ್ಕರ್‌ ಪ್ರಶಸ್ತಿಗೆ ನಾಮಾಂಕಿತವಾಗಿರುವ ಗುಜರಾತಿ ಚಿತ್ರ ಚಲ್ಲೊ ಶೋ ಸಹ ವಿಶೇಷ ಪ್ರದರ್ಶನ ಆಯೋಜಿತವಾಗಿದೆ.

ಮಣಿಪುರಿ ಸಿನಿಮಾದ ಸುವರ್ಣ ಮಹೋತ್ಸವವನ್ನು ಆಚರಿಸಲು 10 ಮಣಿಪುರಿ ಭಾಷೆಯ ಕಥಾ ಹಾಗೂ ಕಥೇತರ ಚಿತ್ರಗಳ ವಿಭಾಗ ರೂಪಿಸಲಾಗಿದೆ. ಇದರೊಂದಿಗೆ 15 ಭಾರತೀಯ ಹಾಗೂ 5 ಅಂತಾರಾಷ್ಟ್ರೀಯ ಸಿನಿಮಾ ದಿಗ್ಗಜರಿಗೆ ಶ್ರದ್ಧಾಂಜಲಿ ಸಲ್ಲಿಸಲಿದೆ. ಭಾರತೀಯ ರಾಷ್ಟ್ರೀಯ ಚಲನಚಿತ್ರ ಸಂಗ್ರಹಾಲಯದಲ್ಲಿನ ಸಂಗ್ರಹದ ಪ್ರಸಿದ್ಧ ಹಳೆಯ ಭಾರತೀಯ ಚಿತ್ರಗಳ ಪ್ರದರ್ಶನಕ್ಕೂ ವೇದಿಕೆ ಚಿತ್ರ ಮಂದಿರ ಸಜ್ಜಾಗಿದೆ.

ಸತ್ಯಜಿತ್‌ ರೇ ಶತಮಾನೋತ್ಸವ ಪ್ರಶಸ್ತಿಯನ್ನು ಸ್ಪ್ಯಾನಿಷ್‌ ನಿರ್ದೇಶಕ ಕಾರ್ಲೋಸ್‌ ಸೌರಾ ಅವರಿಗೆ ನೀಡಲಾಗುತ್ತಿದೆ. ಇದರೊಂದಿಗೆ ಕಂಟ್ರಿ ಫೋಕಸ್‌ ನಡಿ ಫ್ರೆಂಚ್‌ ಭಾಷೆಯ 8 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಗೋವಾ ವಿಭಾಗದಡಿ 8 ಚಿತ್ರಗಳಿವೆ.

ಫಿಲ್ಮ್ ಬಜಾರ್‌

ಎನ್‌ಎಫ್ಡಿಸಿಯ ಫಿಲ್ಮ್ ಬಜಾರ್‌ ಗೂ ಹೊಸ ಕಳೆ ಬಂದಿದೆ. ಕಾನ್‌ ನಂಥ ಸಿನಿಮೋತ್ಸವಗಳಲ್ಲಿ ಕಾಣುವಂತೆ 42 ದೇಶಗಳ ಪೆವಿಲಿಯನ್‌ಗಳು ಫಿಲ್ಮ್ ಬಜಾರ್‌ನಲ್ಲೂ ಕಾಣಿಸಿಕೊಳ್ಳಲಿವೆ. ಇದೇ ಮೊದಲ ಬಾರಿಗೆ ಬಜಾರ್‌ನ ದಿ ವ್ಯೂವಿಂಗ್‌ ರೂಮ್‌ ನಲ್ಲಿ ಸಂರಕ್ಷಿಸಿದ ಹಳೆಯ ಮೇರು ಚಿತ್ರಗಳು ಪ್ರದರ್ಶನಗೊಳ್ಳುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next