ಬೆಂಗಳೂರು: ಸರಕಾರ ಬೆಂಗಳೂರಿನಲ್ಲಿಯೇ ಫಿಲ್ಮ್ ಸಿಟಿ ನಿರ್ಮಾಣ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ| ಸಿ.ಎನ್.ಅಶ್ವತ್ಥನಾರಾಯಣ ಅವರು ಭರವಸೆ ನೀಡಿದರು.
ರವಿವಾರ ಭಾರತೀಯ ವಿದ್ಯಾಭನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಟ ಅಂಬರೀಷ್ ಅವರಿಗೆ ಮರಣೋತ್ತರವಾಗಿ 2019ನೇ ಸಾಲಿನ ಪದ್ಮಭೂಷಣ ಡಾ| ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು. ಅಂಬರೀಷ್ ಅವರ ಪರವಾಗಿ ಅವರ ಪತ್ನಿ ಸುಮಲತಾ ಅಂಬರೀಷ್ ಅವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ|ಸಿ.ಎನ್.ಅಶ್ವತ್ಥನಾರಾಯಣ ಅವರು ಸರಕಾರ ಈಗಾಗಲೇ ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ ಬೆಂಗಳೂರಿನ ಮೂರ್‍ನಾಲ್ಕು ಕಡೆಗಳಲ್ಲಿ ಸ್ಥಳ ಪರಿಶೀಲನೆ ಮಾಡಿದೆ. ಆದರೆ ಜಾಗದ ತಕರಾರುಗಳಿದ್ದು ಇದನ್ನು ಹೋಗಲಾಡಿಸಿ ಮುಂದಿನ ದಿನಗಳಲ್ಲಿ ನಗರದಲ್ಲಿಯೇ ಫಿಲ್ಮ್ ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಫಿಲ್ಮ್ ಸಿಟಿ ನಿರ್ಮಾಣದ ಸಂಬಂಧ ಸಿಎಂ ಯಡಿಯೂರಪ್ಪ ಅವರ ಜತೆ ಚರ್ಚೆ ನಡೆಸಲಾಗಿದೆ. ದೊಡ್ಡ ಕಂಪೆನಿಗಳು ಕೂಡ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಮುಂದೆ ಬಂದಿವೆ ಎಂದರು.
ಸರಕಾರವು ಕೂಡ ಸಿನೆಮಾ ರಂಗಕ್ಕೆ ಪೂರಕವಾಗಿಯೇ ಕೆಲಸ ಮಾಡುತ್ತಿದೆ. ಹಾಲಿವುಡ್ ಸಿನೆಮಾ ಸಹಿತ ಹಲವು ಭಾಷೆಗಳ ಚಿತ್ರಗಳು ಬೆಂಗಳೂರಿನಲ್ಲಿರುವ ಫಿಲ್ಮ್ ಇನ್‌ಸ್ಟಿಟ್ಯೂಷನ್‌ಗಳಲ್ಲೇ ನಿರ್ಮಾಣವಾಗುತ್ತಿವೆ. ಸಿನೆಮಾ ತಂತ್ರಜ್ಞಾನಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ ಎಂದರು.
ಚಿತ್ರ ನಟನೆ ಜತೆಗೆ, ಮಾನವೀಯ ಗುಣಗಳಿಂದಾಗಿ ಅಂಬರೀಷ್ ಅವರು ಈಗಲೂ ಕನ್ನಡಿಗರ ಮನ -ಮನೆಯಲ್ಲಿ ನೆಲೆಸಿದ್ದಾರೆ. ಅವರು ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದೆ ರಾಜಕೀಯ ರಂಗದಲ್ಲೂ ಹೆಸರು ಮಾಡಿದ್ದರು ಎಂದವರು ಹೇಳಿದರು.
ಇದೇ ವೇಳೆ ಮಾತನಾಡಿದ ಸುಮಲತಾ ಅಂಬರೀಷ್, ಈ ಪ್ರಶಸ್ತಿಯನ್ನು ಕನ್ನಡ ಚಿತ್ರರಂಗಕ್ಕೆ ಮತ್ತು ಅಂಬರೀಷ್ ಅವರ ಅಭಿಮಾನಿಗಳಿಗೆ ಅರ್ಪಿಸುತ್ತೇನೆ ಎಂದರು.