ಕೋವಿಡ್ ಲಾಕ್‌ಡೌನ್‌ನಿಂದ ಎಲ್ಲ ಥಿಯೇಟರ್, ಮಲ್ಟಿಫ್ಲೆಕ್ಸ್ ಗಳು ಮಾರ್ಚ್ ಎರಡನೇ ವಾರದಿಂದಲೇ ಬಂದ್ ಆಗಿವೆ. ಇದರಿಂದ ಫೆಬ್ರವರಿ – ಮಾರ್ಚ್ ತಿಂಗಳಿನಲ್ಲಿ ರಿಲೀಸ್ ಆಗಿರುವ ಅನೇಕ ಸಿನಿಮಾಗಳಿಗೆ ತೊಂದರೆಯಾಗಿದೆ.
ಥಿಯೇಟರ್ ಗಳಲ್ಲಿ, ಮಲ್ಟಿಫ್ಲೆಕ್ಸ್ ನಲ್ಲಿ ಕಲೆಕ್ಷನ್ಸ್ ಇಲ್ಲದೆ, ನಿರ್ಮಾಪಕರು ಸಾಕಷ್ಟುಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವು ಸಿನಿಮಾಗಳಿಗೆ ರಿಲೀಸ್‌ಗೆ ಖರ್ಚು ಮಾಡಿರುವ ಹಣ ಕೂಡ ವಾಪಸ್ ಬಂದಿಲ್ಲ. ಹೀಗಾಗಿ ಈ ತಿಂಗಳು ಸರ್ಕಾರ ಥಿಯೇಟರ್, ಮಲ್ಟಿಫ್ಲೆಕ್ಸ್ ಗಳು ತೆರೆಯಲು ಅನುಮತಿ ನೀಡಿದರೆ, ಫೆಬ್ರವರಿ – ಮಾರ್ಚ್ ತಿಂಗಳಿನಲ್ಲಿ ರಿಲೀಸ್ ಆಗಿರುವ ಅನೇಕ ಸಿನಿಮಾಗಳ ಪ್ರದರ್ಶನಕ್ಕೆ ಮೊದಲ ಆದ್ಯತೆ ನೀಡುವಂತೆ ಪ್ರದರ್ಶಕರಿಗೆ ತಿಳಿಸಲಾಗುವುದು’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ.
ಸೆಪ್ಟೆಂಬರ್ ಕೊನೆಯೊಳಗೆ ಸರ್ಕಾರ ಥಿಯೇಟರ್, ಮಲ್ಟಿಫ್ಲೆಕ್ಸ್‌ಗಳಲ್ಲಿ ಚಿತ್ರಗಳ ಪ್ರದರ್ಶನಕ್ಕೆ ಅನುಮತಿ ಕೊಡಬಹುದು ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ. ಅನೇಕ ಚಿತ್ರಗಳ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಕೂಡ ಚಿತ್ರಗಳ ಪ್ರದರ್ಶನಕ್ಕೆ ಒಂದಷ್ಟು ಪೂರ್ವ ತಯಾರಿ ಆರಂಭಿಸಿದ್ದಾರೆ. ಇದೇ ವೇಳೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, “ಈಗಾಗಲೇ ಹಲವುಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಆದಷ್ಟು ಬೇಗ ಥಿಯೇಟರ್, ಮಲ್ಟಿಫ್ಲೆಕ್ಸ್‌ಗಳೂ ಓಪನ್ ಆಗಬಹುದು ಎಂಬ ನಿರೀಕ್ಷೆಯೂ ಚಿತ್ರರಂಗದಲ್ಲಿದೆ. ಹಾಗೇನಾದರೂ ಈ ತಿಂಗಳು ಥಿಯೇಟರ್, ಮಲ್ಟಿಫ್ಲೆಕ್ಸ್‌ಗಳು ಓಪನ್ ಆದರೆ ಈ ವರ್ಷದ ಫೆಬ್ರವರಿ – ಮಾರ್ಚ್ ತಿಂಗಳಿನಲ್ಲಿ ರಿಲೀಸ್ ಆಗಿರುವ ಸಿನಿಮಾಗಳ ಪ್ರದರ್ಶನಕ್ಕೆ ಮೊದಲುಅವಕಾಶ ಕಲ್ಪಿಸಿಕೊಡುವ ಯೋಚನೆ ಇದೆ. ಇದರಿಂದ ಆ ಸಿನಿಮಾಗಳ ನಿರ್ಮಾಪಕರಿಗೆ ಒಂದಷ್ಟು ಅನುಕೂಲವಾಗಲಿ ಎಂಬುದು ನಮ್ಮ ಉದ್ದೇಶ’ ಎಂದಿದ್ದಾರೆ.
ಒಟ್ಟಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂಥದ್ದೊಂದು ನಿರ್ಧಾರವನ್ನು ಜಾರಿ ಮಾಡಿದರೆ, ಸಹಜವಾಗಿಯೇ ಫೆಬ್ರವರಿ- ಮಾರ್ಚ್ ತಿಂಗಳಿನಲ್ಲಿ ರಿಲೀಸ್ ಆಗಿರುವ ಅನೇಕ ಚಿತ್ರಗಳ ನಿರ್ಮಾಪಕರಿಗೆ ಒಂದಷ್ಟು ಸಹಾಯವಾಗುತ್ತದೆ ಎಂಬ ಅಭಿಪ್ರಾಯ ಚಿತ್ರರಂಗದಲ್ಲಿ ವ್ಯಕ್ತವಾಗುತ್ತಿದೆ.