ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಚುನಾವಣೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣಾ ಅರ್ಹತೆ ನಿರ್ಧರಿಸುವ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಚುನಾವಣಾ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ನಿರ್ಮಾಪಕ ಸಾ.ರಾ.ಗೋವಿಂದು, ಜಯಸಿಂಹ ಮುಸುರಿ, ಕೆ.ಎಂ.ವೀರೇಶ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಅರ್ಜಿ ಆಲಿಸಿದ ನ್ಯಾಯಪೀಠ, ಅರ್ಜಿಯು ವಿಚಾರಣೆಗೆ ಸ್ವೀಕಾರಾರ್ಹವೇ, ಇಲ್ಲವೇ ಎಂಬ ಬಗ್ಗೆ ಮೊದಲು ನಿರ್ಧರಿಸಲಾಗುವುದು ಎಂದು ಹೇಳಿ, ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತು.
ಅರ್ಜಿದಾರರ ಪರ ವಕೀಲರು, ಕಳೆದ ಮೇ 28ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆಗೆ ನಡೆದಿದೆ. ಇಡೀ ಚುನಾವಣೆಯನ್ನು ಕಾನೂನುಬಾಹಿರವಾಗಿ ನಡೆಸಲಾಗಿದೆ. ಜೊತೆಗೆ ಅಕ್ರಮಗಳನ್ನು ಎಸಗಲಾಗಿದೆ, ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ದೂರಿದರು.
ಮತದಾರರ ಪಟ್ಟಿಯನ್ನು ಸರಿಯಾಗಿ ಪ್ರಕಟಿಸಿಲ್ಲ, ಮತದಾನಕ್ಕೆ ಬಂದವರ ಬಳಿ ನಿಯಮದಂತೆ ಸಹಿ ಹಾಕಿಸಿಕೊಳ್ಳಬೇಕು, ಅದರಲ್ಲೂ ಅಕ್ರಮ ಎಸಗಲಾಗಿದೆ. ಮತದಾನಕ್ಕೆ ಬಂದವರ ಗುರುತಿನ ಚೀಟಿಗಳನ್ನೇ ಪರಿಶೀಲಿಸಿಲ್ಲ. ಇಡೀ ಚುನಾವಣಾ ಪ್ರಕ್ರಿಯೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೈಲಾಗೆ ವಿರುದ್ಧವಾಗಿ ನಡೆಸಲಾಗಿದೆ.
ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಆಗಸ್ಟ್ ನಲ್ಲಿ , ಅರ್ಜಿ ಇತ್ಯರ್ಥವಾಗುವವರೆಗೆ ಕೆಎಫ್ ಸಿಸಿ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ಹೊರಡಿಸಿತ್ತು.
ವಾಣಿಜ್ಯ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಾ.ಮಾ.ಹರೀಶ್ 781 ಮತಗಳನ್ನು ಪಡೆದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು, ಪರಾಜಿತ ಅಭ್ಯರ್ಥಿ ಸಾ.ರಾ.ಗೋವಿಂದು 371 ಮತಗಳನ್ನು ಗಳಿಸಿದ್ದರು.