ಬಾಲಿವುಡ್ ನಟಿ ಹಿನಾ ಖಾನ್ ಅವರು ತನಗೆ ಸ್ತನ ಕ್ಯಾನ್ಸರ್ (Breast Cancer) ಇದೆಯೆಂದು ಹೇಳಿಕೊಂಡಿದ್ದಾರೆ. ತಾನು ಅದನ್ನು ಧೈರ್ಯವಾಗಿಯೇ ಎದುರಿಸಿ ಬೇಗ ಗುಣಮುಖರಾಗಿ ಬರುತ್ತೇನೆ ಎಂದು ಹೇಳಿದ್ದಾರೆ.
ಅಭಿಮಾನಿಗಳ ಹಿನಾ ಖಾನ್(Hina Khan) ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿಯೆಂದು ಹಾರೈಸಿದ್ದಾರೆ. ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುವ ದೇಶಗಳಲ್ಲಿ ಭಾರತದ ಹೆಸರೂ ಕೂಡ ಮುಂಚೂಣಿಯಲ್ಲಿದೆ. ಕಳೆದ ಕೆಲ ವರ್ಷಗಳಲ್ಲಿ 30ರ ವಯಸ್ಸು ದಾಟಿದ ಮಹಿಳೆಯರು ಸ್ತನ ಕ್ಯಾನ್ಸರ್ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ.
ಪ್ರತಿ 28 ಭಾರತೀಯ ಮಹಿಳೆಯರಿಗೆ 1 ಬಾರಿ ಸ್ತನ ಕ್ಯಾನ್ಸರ್ ಎದುರಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಸ್ತನ ಕ್ಯಾನ್ಸರ್ ನ ಅಪಾಯವು 30 ರ ಹರೆಯಕ್ಕೆ ಪ್ರವೇಶಿಸಿದ ತಕ್ಷಣ ಪ್ರಾರಂಭವಾಗುತ್ತದೆ ಮತ್ತು ಆಕೆಯು 50 ಮತ್ತು 60 ಗಳನ್ನು ಮೀರಿದ ನಂತರ ಅದು ಕೊನೆಗೊಳ್ಳುತ್ತದೆ ಎಂದು ಒಮೆಗಾ ಆಸ್ಪತ್ರೆಯ ವರದಿಯೊಂದು ತಿಳಿಸಿದೆ.
ಆತಂಕಕಾರಿ ಸಂಗತಿಯೆಂದರೆ ಸ್ತನ ಕ್ಯಾನ್ಸರ್‌ನಿಂದ ಹೆಚ್ಚು ಸಾವನ್ನಪ್ಪುವ ದೇಶಗಳ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
2022 ರ ಅಂತ್ಯದ ವೇಳೆಗೆ ಐದು ವರ್ಷಗಳ ಅವಧಿಯಲ್ಲಿ 5.25 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಇಂಡಿಯಾ ಟಿವಿಯ ವರದಿ ತಿಳಿಸಿದೆ.
ಕಳೆದ ದಶಕದಲ್ಲಿ, 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಂಭವವು ಶೇಕಡಾ 3 ರಿಂದ 8 ಕ್ಕೆ ಏರಿದೆ. ಅನುವಂಶಿಕ ರೂಪಾಂತರಗಳಿಂದ ಅನಾರೋಗ್ಯಕರ ಜೀವನಶೈಲಿಯವರೆಗೆ, ಹದಿಹರೆಯದವರು ಎಂದಿಗಿಂತಲೂ ಹೆಚ್ಚು ಸ್ತನ ಕ್ಯಾನ್ಸರ್ ಗೆ ಗುರಿಯಾಗುತ್ತಿದ್ದಾರೆ.
ಸ್ತನ ಕ್ಯಾನ್ಸರ್ ಬಗ್ಗೆ ಮುಕ್ತವಾಗಿ ಮಾತಾಡಿ ಆ ಬಗ್ಗೆ ಜಾಗ್ರತೆಯನ್ನು ವಹಿಸಲು ಸಲಹೆ – ಸೂಚನೆ ನೀಡುವವರು ತೀರಾ ಕಡಿಮೆ. ಬಣ್ಣದ ಲೋಕದ ಖ್ಯಾತ ನಟಿಯರಿಗೆ ಸ್ತನ ಕ್ಯಾನ್ಸರ್ ಕಾಡಿದೆ. ಈ ಬಗ್ಗೆ ನಟಿಯರು ಧ್ವನಿ ಎತ್ತಿ ಇತರರಿಗೆ ಧೈರ್ಯವನ್ನು ತುಂಬಿದ್ದಾರೆ.
ತಾಹಿರಾ ಕಶ್ಯಪ್ (Tahira Kashyap): ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ತಮಗೆ ಸ್ತನ ಕ್ಯಾನ್ಸರ್ ವಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. 2018 ರಲ್ಲಿ ಅವರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿತು. 2019 ರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು. 0 ಸ್ಟೇಜ್ ನಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಸ್ತನಛೇದನ ಪ್ರಕ್ರಿಯೆಗೆ ಒಳಗಾಗಿ ಕ್ಯಾನ್ಸರ್ ನಿಂದ ಗೆದ್ದು ಬಂದಿದ್ದರು. ಆಗ ಅವರಿಗೆ 35 ವರ್ಷ ವಯಸ್ಸಾಗಿತ್ತು.
ಮಹಿಮಾ ಚೌಧರಿ (Mahima Chaudhry): ಬಾಲಿವುಡ್ ನಟಿ ಮಹಿಮಾ ಚೌಧರಿ ಅವರಿಗೆ 2021ರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಮೊದಲಿಗೆ ಅವರಿಗೆ ಇದರ ಬಗ್ಗೆ ಅರಿವಿರಲಿಲ್ಲ. ಸಾಮಾನ್ಯ ಚೆಕ್ ಅಪ್ ಗೆಂದು ಹೋಗಿದ್ದಾಗ ಅವರಿಗೆ ವರ್ಷದಿಂದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಇದಾದ ಬಳಿಕ ವರ್ಷಗಳ ಹೋರಾಡಿ ಆರಂಭಿಕ ಹಂತಗಳಲ್ಲೇ ಕ್ಯಾನ್ಸರ್ ನಿಂದ ಗೆದ್ದು ಬಂದಿದ್ದರು.
ಮಮ್ತಾಜ್ (Mumtaz): 2002 ರಲ್ಲಿ ತನ್ನ 52ನೇ ವಯಸ್ಸಿನಲ್ಲಿ ಹಿರಿಯ ನಟಿ ಮಮ್ತಾಜ್ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಮುಮ್ತಾಜ್ ರೋಗದೊಂದಿಗೆ ಹೋರಾಡಿ ನೂರಾರು ಸ್ತನ ಕ್ಯಾನ್ಸರ್ ರೋಗಿಗಳಿಗೆ ಸ್ಫೂರ್ತಿ ಆಗಿದ್ದರು. ವರದಿಗಳ ಪ್ರಕಾರ ಮುಮ್ತಾಜ್ ಆರು ಕೀಮೋಥೆರಪಿಗಳನ್ನು ಮತ್ತು ಒಟ್ಟು 35 ರೇಡಿಯೇಷನ್ ಚಿಕಿತ್ಸೆಗಳಿಗೆ ಒಳಗಾಗಿದ್ದರು.
ಹಂಸ ನಂದಿನಿ (Hamsa Nandini): ಟಾಲಿವುಡ್ ನಟಿ ಹಂಸ ನಂದಿನಿ ಅವರಿಗೆ ಸ್ತನ ಕ್ಯಾನ್ಸರ್ ಇರುವುದು 2021 ರಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಗಡ್ಡೆಯೊಂದು ಪತ್ತೆಯಾಗಿತ್ತು. ಅದನ್ನು ಸರ್ಜರಿ ಮೂಲಕ ತೆಗೆಯಲಾಗಿತ್ತು. ಇದಾದ ನಂತರ ಟೆಸ್ಟ್ ಮಾಡಿಸಿದಾಗ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ತಿಂಗಳುಗಟ್ಟಲೇ ಸಂಕಷ್ಟದ ಸಮಯದಲ್ಲಿ ಹೋರಾಡುತ್ತಾ, ಗುಣಮುಖನಾಗುತ್ತೇನೆ ಎನ್ನುವ ವಿಶ್ವಾಸದಲ್ಲಿ ಅವರು ನಗುಮುಖದಿಂದಲೇ ಕಾಯಿಲೆಯನ್ನು ಎದುರಿಸಿದರು. ಕೊನೆಗೂ ಅವರ ಸ್ತನ ಕ್ಯಾನ್ಸರ್ ಗುಣಮುಖವಾಯಿತು. ಇದಾದ ಬಳಿಕ ಅವರು ಅನೇಕರಿಗೆ ಈ ಬಗ್ಗೆ ಅರಿವು ಮೂಡಿಸಿದ್ದಾರೆ.
ಛವಿ ಮಿತ್ತಲ್ (Chhavi Mittal): ಖ್ಯಾತ ಕಿರುತೆರೆ ನಟಿ ಛವಿ ಮಿತ್ತಲ್ ಅವರಿಗೆ ಸ್ತನ ಕ್ಯಾನ್ಸರ್ ಇರುವುದು 2022 ರ ಏಪ್ರಿಲ್ ನಲ್ಲಿ ಪತ್ತೆಯಾಗಿತ್ತು. ಜಿಮ್ ಮಾಡುವಾಗ ಅವರಿಗೆ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ಈ ವೇಳೆ ವೈದ್ಯರು ಅವರಿಗೆ ಎಆರ್ ಐ ಸ್ಕ್ಯಾನ್ ಮಾಡಲು ಸಲಹ ನೀಡಿದ್ದರು. ಸ್ಕ್ಯಾನ್ ಬಳಿಕ ಅವರ ಸ್ತನದಲ್ಲಿ ಗಡ್ಡೆಯೊಂದು ಇರುವುದು ಪತ್ತೆಯಾಗಿತ್ತು. ಇದಾದ ಬಳಿಕ ಅವರು ಚಿಕಿತ್ಸೆ ಪಡೆಯಲು ಆರಂಭಿಸಿದ್ದರು. ಸುದೀರ್ಘ ಅವಧಿಯ ಕಾಲ ಹೋರಾಡಿದ ಬಳಿಕ ಅವರು ಕೊನೆಗೂ ಕ್ಯಾನ್ಸರ್ ಗೆದ್ದು ಬಂದಿದ್ದರು. ಇಂದಿಗೂ ಅವರು ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.
ಗೌತಮಿ: ಸೌತ್ ನಟಿ ಗೌತಮಿ ಅವರಿಗೆ 2005ರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗಿತ್ತು. ದಿಟ್ಟವಾಗಿ ಇದನ್ನು ಎದುರಿಸಿದ ಅವರು ವೈದ್ಯರ ಸಲಹೆಯನ್ನು ಪಾಲಿಸಿ, ಕೊನೆಗೂ ಕ್ಯಾನ್ಸರ್ ಗೆದ್ದು ಬಂದಿದ್ದರು.