Advertisement

ಸೌಂದರ್ಯ ನೆನಪು: ‘ಸೌಮ್ಯ’ ದುರಂತ ಸಾವಿಗೆ 16ವರ್ಷ, ಅಕಾಲಕ್ಕೆ ಕಣ್ಮರೆಯಾದ ಅದ್ಭುತ ಪ್ರತಿಭೆ

09:24 AM Apr 18, 2020 | Mithun PG |

ಬೆಂಗಳೂರು: ಕನ್ನಡ ಸೇರಿದಂತೆ ದಕ್ಷಿಣ ಬಾರತೀಯ ಭಾಷೆಗಳ ಚಿತ್ರರಂಗದಲ್ಲಿ ಅಪಾರ ಖ್ಯಾತಿ ಗಳಿಸಿದ್ದ ನಟಿ ಸೌಂದರ್ಯ ನಮ್ಮನ್ನಗಲಿ ಇಂದಿಗೆ (ಏ. 17) ಹದಿನಾರು  ವರ್ಷಗಳಾದವು. ಆದರೂ ಅವರು ಅಭಿನಯಿಸಿರುವ ಸಿನಿಮಾಗಳ ಮೂಲಕ ಇನ್ನೂ ಅಭಿಮಾನಿಗಳ ಮನದಲ್ಲಿ ಚಿರಪರಿಚಿತರಾಗಿದ್ದಾರೆ. ಚಿತ್ರನಟಿ, ನಿರ್ಮಾಪಕಿಯಾಗಿಯೂ ಬೆಳೆದು ಸಾಧನೆ ಶಿಖರವೇರಿದ್ದ ನಟಿ ತಮ್ಮ ಸರಳತೆಗೆ ಸಹ ಹೆಸರಾಗಿದ್ದರು. ಇಂತಹ ಮೇರು ನಟಿ ವಿಮಾನ ದುರಂತದಲ್ಲಿ ಅಕಾಲ ಮೃತ್ಯುವಿಗೀಡಾದದ್ದು ಮಾತ್ರ ಅವರ  ಅಭಿಮಾನಿಗಳಿಗೆ ಮರೆಯಲಾಗದ ನೋವನ್ನುಂಟುಮಾಡಿತ್ತು.

Advertisement

ನಟಿ ಸೌಂದರ್ಯ ಹೆಸರಿನಂತೆ ಸುರದ್ರೂಪಿ ಹೆಣ್ಣು ಮಗಳು. ಜುಲೈ 18, 1972ಲ್ಲಿ ಹುಟ್ಟಿದ ಸೌಂದರ್ಯ ವೈದ್ಯೆಯಾಗಬೇಕೆಂದಿದ್ದವರು ಆಕಸ್ಮಿಕವಾಗಿ ಚಲನಚಿತ್ರರಂಗ ಪ್ರವೇಶಿಸಿದ್ದರು. ‘ಸೌಮ್ಯ’ಈಕೆಯ ಮೂಲ ಹೆಸರಾಗಿದ್ದು ತಮ್ಮ ಹಲವು ಚಿತ್ರಗಳಲ್ಲಿ ಇದೇ ಹೆಸರನ್ನು ಬಳಸಿಕೊಂಡಿದ್ದಾರೆ.

ತೂಗುವೆ ಕೃಷ್ಣನ, ಸಿಪಾಯಿ, ನಾನು ನನ್ನ ಹೆಂಡ್ತೀರು, ಶ್ರೀ ಮಂಜುನಾಥ, ಆರ್ಯಭಟ, ದೋಣಿಸಾಗಲಿ, ಆಪ್ತಮಿತ್ರ  ಸೇರಿ ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ತೆಲುಗು, ತಮಿಳು, ಮಲಯಾಳಗಳಲ್ಲಿ ಸಹ ಬಹು ಬೇಡಿಕೆಯ ನಟಿಯಾಗಿದ್ದರು.

ಗಿರೀಶ್ ಕಾಸರವಳ್ಳಿಯವರ ‘ದ್ವೀಪ’ ಚಿತ್ರದ ಮೂಲಕ ನಿರ್ಮಾಪಕಿಯಾಗಿಗೂ ಗುರುತಿಸಿಕೊಂಡು. ಈ ಚಿತ್ರಕ್ಕೇ ಕೇಂದ್ರ ಸರ್ಕಾರದ ‘ಸ್ವರ್ಣಕಮಲ’ ಪ್ರಶಸ್ತಿ ಲಭಿಸಿತ್ತು. ಅದರ ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರದ ಉತ್ತಮ ಚಿತ್ರ ಪ್ರಶಸ್ತಿ ಮತ್ತು ಉತ್ತಮ ನಟಿ ಪ್ರಶಸ್ತಿ ಕೂಡಾ ಸೌಂದರ್ಯ ಅವರಿಗೆ ಸಿಕ್ಕಿದೆ. ದೋಣಿ ಸಾಗಲಿ ಚಿತ್ರದಲ್ಲಿ ಸೌಂದರ್ಯ ಅವರ ಅದ್ಭುತ ನಟನೆಗೆ ರಾಜ್ಯ ಸರ್ಕಾರ ಶ್ರೇಷ್ಠ ನಟಿ ಪ್ರಶಸ್ತಿ ನೀಡಿತ್ತು.

ಇನ್ನು ಸೌಂದರ್ಯ  ಡಾ. ಎಸ್. ಎಲ್. ಭೈರಪ್ಪನವರ ಶ್ರೇಷ್ಠ ಕಾದಂಬರಿ  ‘ಗೃಹಭಂಗ’ ವನ್ನು ಕಿರುತೆರೆಯಲ್ಲಿ ಧಾರಾವಾಹಿಯಾಗಿ ಮೂಡಿಸಿದ್ದರು. ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ  ಈ ಧಾರಾವಾಹಿ ದೂರದರ್ಶನದಲ್ಲಿ ಮೂಡಿಬಂದ ಮಹತ್ವದ ಧಾರಾವಾಹಿಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ.

Advertisement

ಆಪ್ತಮಿತ್ರ ಚಿತ್ರ ಸೌಂದರ್ಯ ಅವರ ಕಡೆಯ ಚಿತ್ರವಾಗಿದ್ದು ಅದರಲ್ಲಿನ “ನಾಗವಲ್ಲಿ” ಪಾತ್ರ ಎಂದೆಂದಿಗೂ ಮರೆಯಲಾಗದ್ದು. ಡಾ. ವಿಷ್ಣುವರ್ಧನ್ , ಸೌಂದರ್ಯ ಮತ್ತು ಅವಿನಾಶ್, ದ್ವಾರಕೀಶ್ ಮೊದಲಾದವರು ನಟಿಸಿದ್ದ ಈ ಚಿತ್ರದಲ್ಲಿ ಸೌಂದರ್ಯ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 16 ವರ್ಷದ ಸಿನಿ ಬದುಕಿನಲ್ಲಿ 102 ಚಿತ್ರಗಳಲ್ಲಿ ನಟಿಸಿದ್ದರು.

ಸಾಮಾಜಿಕ ಕಾಳಜಿ ಹೊಂದಿದ್ದ ನಟಿ ಸೌಂದರ್ಯ ತಾವು ಹುಟ್ಟಿದ ಬಂಗಾರಪೇಟೆ ತಾಲೂಕಿನ ಗಂಜಿಗುಂಟೆ ಗ್ರಾಮದ ಶಾಲೆಗಾಗಿ ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದರು. ಇಂದಿಗೂ ಆ ಶಾಲಾ ಕಟ್ಟಡದ ಮೇಲೆ ನಟಿ ಸೌಂದರ್ಯ ಹೆಸರು ಶಾಶ್ವತವಾಗಿ ಉಳಿದಿದೆ.

2004ರ ಏಪ್ರಿಲ್ 17ರಂದು ಬೆಂಗಳೂರಿನ ಜಕ್ಕೂರು ವಿಮಾನ ನೆಲೆಯಿಂದ ಆಂಧ್ರ ಪ್ರದೇಶಕ್ಕೆ ಚುನಾವಣಾ ಪ್ರಚಾರ ಸಲುವಾಗಿ ಹೊರಟಾಗ ವಿಮಾನ ಪತನವಾಗಿ ಸಜೀವ ದಹನವಾಗಿದ್ದರು. ಈ ದುರಂತದ ವೇಳೆ ನಟಿ ಸೌಂದರ್ಯ ಹಾಗೂ ಅವರ ಅಣ್ಣ ಅಮರನಾಥ್ ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next