ಗಂಗಾವತಿ: ದೇಶದ ಶೈಕ್ಷಣಿಕ ಕ್ಷೇತ್ರದ ಅದೋಗತಿ, ಧರ್ಮ, ಜಾತಿ ಆಧಾರಿತ ಶಿಕ್ಷಣ ವ್ಯವಸ್ಥೆ ಹಾಗೂ ರಾಜಕೀಯ ಸನ್ನಿವೇಶದ ಕುರಿತು ಕರ್ನಾಟಕ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಏ.28 ರ ಭಾನುವಾರ ಬೆಳ್ಳಿಗ್ಗೆ 10 ಗಂಟೆಗೆ ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶ ಗಂಗಾವತಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮಾವೇಶದಲ್ಲಿ ಚಿತ್ರನಟ ಹಾಗೂ ಪ್ರಗತಿಪರ ಚಿಂತಕ ಪ್ರಕಾಶ ರೈ ಆಗಮಿಸಲಿದ್ದು ಸರ್ವರೂ ಆಗಮಿಸುವಂತೆ ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೈಜೆಷನ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹ್ಮದ್ ಪೀರ್ ಲಟಿಗೇರಿ ತಿಳಿಸಿದರು.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ. ಹೆಂಡ-ಜಾತಿ ಹೆಸರಿನ ಮೇಲೆ ಆಗುವ ಚುನಾವಣೆಯಿಂದ ಜನರನ್ನು ಜಾಗೃತಿಗೊಳಿಸಿ ಸಂವಿಧಾನ ಉಳಿಸುವ ಜಾತ್ಯಾತೀತಗೆ ಆದ್ಯತೆ ನೀಡುವವರಿಗೆ ಮತ ಹಾಕಿ ಎಂದು ಹೇಳಿದರು.
ಶಿಕ್ಷಣ ವ್ಯಾಪಾರೀಕರಣವಾಗಿದೆ. ಬಡವರು ಉನ್ನತ ಶಿಕ್ಷಣ ಪಡೆಯುವಂತಿಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಟಿಪ್ಪು ಬಗ್ಗೆ ಅನೇಕ ವಿದ್ವಾಂಸರು ಬೆಳಕು ಚೆಲ್ಲಿದರೂ ಅನಗತ್ಯ ಆತನ ಒಂದೆರಡು ತಪ್ಪುಗಳನ್ನೇ ಎತ್ತಿ ಹಿಡಿದು ಒಳ್ಳೆಯ ಕೆಲಸಗಳನ್ನು ಮರೆಮಾಚುವ ಐತಿಹಾಸಿಕ ತಪ್ಪುಗಳನ್ನು ಕೆಲವರು ಮಾಡುತ್ತಿದ್ದಾರೆ ಎಂದರು.
ಒಂದು ಸಮುದಾಯದ ಒಬ್ಬ ವ್ಯಕ್ತಿ ಮಾಡಿದ ದುಷ್ಕೃತ್ಯಕ್ಕೆ ಇಡೀ ಸಮಾಜವನ್ನೇ ಹೊಣೆ ಮಾಡುವುದು ಸರಿಯಲ್ಲ. ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ, ಸ್ಕಾಲರ್‌ಶಿಪ್, ಫೆಲೋಶಿಪ್ ಗಳನ್ನು ಹಂತಹಂತವಾಗಿ ನಿಲ್ಲಿಸುತ್ತಾ ಬರಲಾಗುತ್ತಿದೆ. ಪರೀಕ್ಷಾ ಶುಲ್ಕಾ, ಬೋಧನಾ ಶುಲ್ಕಗಳ ಸಬ್ಸಿಡಿಯನ್ನು ದಿನೇ ದಿನೇ ಕಡಿಮೆ ಮಾಡಲಾಗುತ್ತಿದೆ. ಬಡವರ ಪರ ಇರುವ ಜನಪ್ರತಿನಿಧಿಗಳನ್ನು ಬೆಂಬಲಿಸುವಂತೆ ಸಮಾವೇಶದಲ್ಲಿ ಕರೆ ನೀಡಲಾಗುತ್ತಿದೆ ಎಂದು ಹೇಳಿದರು.
ಒಟ್ಟು ಹದಿನಾಲ್ಕು ಜಿಲ್ಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಸಮಾವೇಶದಲ್ಲಿ ವಿಸ್ತ್ರತ ಚರ್ಚೆ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದುರುಗೇಶ್, ಅಬ್ದುಲ್ ಖುದ್ದೂಸ್, ಆಸೀಫ್ ಅಲಿ, ನಾಸೀರ್ ಆಹ್ಮದ್, ಪಗ್ರತಿ ಇದ್ದರು.