ಕಲಬುರಗಿ: ಮುಂದಿನ ಎರಡು ವರ್ಷದೊಳಗೆ 16000 ಪೊಲೀಸ್ ಪೇದೆಗಳ ಹಾಗೂ 630 ಪಿಎಸ್ಐಗಳ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಈಗಾಗಲೇ 6000 ಪೇದೆಗಳ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಕುರಿತು ಹೈಕೋರ್ಟ್ ಗೂ ಮಾಹಿತಿ ಸಲ್ಲಿಸಲಾಗಿದೆಯಲ್ಲದೇ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ವಿವರಣೆ ನೀಡಿದರು.
ಪೊಲೀಸ್ ಇಲಾಖೆ ಸುಧಾರಣೆಗೆ ದೃಢ ಹೆಜ್ಜೆ ಇಡಬೇಕಾಗಿದೆ. ಹೀಗಾಗಿ ಬರುವ ಬಜೆಟ್‌ದಲ್ಲಿ ಹೆಚ್ಚಿನ ಅನುದಾನ ಇಡಲಾಗುವುದು. ಪ್ರಮುಖವಾಗಿ ಸೈಬರ್ ಕ್ರೈಂ ಪಡೆಯನ್ನು ಬಲಪಡಿಸಬೇಕಾಗಿದೆ. ಇದನ್ನು ತಾಂತ್ರಿಕವಾಗಿ ಮತ್ತಷ್ಟು ಸುಧಾರಿಸಲಾಗುವುದು ಎಂದರು.
ಮುಂದಿನ ಎರಡು ಮೂರು ವರ್ಷದೊಳಗೆ ಪೊಲಿಸ್ ರ ಶೇ 60ರಷ್ಟು ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಇದೇ ವೇಳೆ ಗೃಹ ಸಚಿವರು ತಿಳಿಸಿದರು.
ಔರಾದಕರ್ ವರದಿ ಜಾರಿಗೆ ಸರ್ಕಾರ ಬದ್ಧವಿದೆ. ಈ ಕುರಿತು ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು. ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಜೈಲರ್ ಸಿಬ್ಬಂದಿಗಳನ್ನು ಹೊರಗಿಡಲಾಗಿತ್ತು. ಆದರೆ ತಾವು ಬಂದ ಮೇಲೆ ಎರಡು ಸುತ್ತಿನ ಸಭೆ ನಡೆಸಿ ಇವರನ್ನೂ ಸೇರಿಸಲಾಗಿದೆ ಎಂದು ತಿಳಿಸಿದರು.
ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ರಾಜಕೀಯ ಗೊಂದಲ ಮೂಡಿರುವುದು ಸಹಜ. ಇದು ಯಾವ ನಿಟ್ಟಿನಲ್ಲಿ ಬಗೆಹರಿಯುತ್ತದೆ ಎಂಬುದು ನೋಡೋಣ ಎಂದರು.
ಸಂಸದ ಡಾ. ಉಮೇಶ್ ಜಾಧವ್, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮುಖಂಡರಾದ ಬಸವರಾಜ ಇಂಗಿನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.