Advertisement

ಕೃಷಿ ಹೊಂಡ-ಚೆಕ್‌ ಡ್ಯಾಂಗಳು ಭರ್ತಿ

09:52 AM Jun 29, 2019 | Suhan S |

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸುರಿದ ಮಳೆಯಿಂದಾಗಿ ರೈತರ ಜಮೀನಿನಲ್ಲಿ ಮತ್ತು ಪಕ್ಕದಲ್ಲಿ ನಿರ್ಮಿಸಿರುವ ಕೃಷಿ ಹೊಂಡ ಹಾಗೂ ಚೆಕ್‌ ಡ್ಯಾಂಗಳು ತುಂಬಿವೆ. ಇದು ರೈತ ಸಮುದಾಯದಲ್ಲಿ ಹೊಸ ಭರವಸೆ ಮೂಡಿಸಿದೆ.

Advertisement

ಗಜೇಂದ್ರಗಡ ತಾಲೂಕಿನಲ್ಲಿ ನದಿ ಮೂಲಗಳು ಇಲ್ಲದ ಪರಿಣಾಮ ಮಳೆಯೇ ಆಶ್ರಯವಾಗಿದೆ. ಈ ಮಳೆ ಕೈಕೊಟ್ಟರೆ ಮುಂಗಾರು ಸಂಪೂರ್ಣ ನಾಶವಾಗುತ್ತದೆ. ಇನ್ನು 1200ಕ್ಕೂ ಹೆಚ್ಚು ಅಡಿ ಅಳಕ್ಕೆ ಇಳಿದ ಅಂತರ್ಜಲಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ನೀರು ಸಿಕ್ಕರೂ 6-7 ತಿಂಗಳಲ್ಲೇ ಮತ್ತೆ ಒಣಗಿದ ಉದಾಹರಣೆಗಳು ಸಾಕಷ್ಟು. ಇದು ರೈತರಲ್ಲಿ ನಿರಾಸೆಯ ಕಾರ್ಮೋಡ ಮತ್ತಷ್ಟು ಕವಿಯುವಂತೆ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ತಾಲೂಕಿನ ಜನತೆಗೆ ಈಚೆಗೆ ಸುರಿದ ಮಳೆಯಿಂದಾಗಿ ನಿಟ್ಟುಸಿರು ಬಿಡುವುದಲ್ಲದೇ ರೈತರಿಗೆ ವರವಾದ ಕೃಷಿ ಹೊಂಡ ಮತ್ತು ಚೆಕ್‌ ಡ್ಯಾಂಗಳು ಮೈದುಂಬಿಕೊಂಡಿರುವುದು ಅನ್ನದಾತನ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿವೆ.

ರೈತರ ಜಮೀನಿನಲ್ಲಿ ನಿರ್ಮಿಸಿರುವ ಕೃಷಿ ಹೊಂಡಗಳು ಸಂಪೂರ್ಣವಾಗಿ ತುಂಬಿದ್ದು, ನೀರು ಶೇಖರಣೆಯಾಗಿದೆ. ಜೊತೆಗೆ ಜಮೀನಿನ ಪಕ್ಕದಲ್ಲಿ ನಿರ್ಮಿಸಲಾದ ಚೆಕ್‌ಡ್ಯಾಂಗಳಲ್ಲಿಯೂ ನೀರು ಸಂಗ್ರಹವಾಗಿದ್ದು, ಎಲ್ಲಿ ನೋಡಿದರೂ ಚೆಕ್‌ ಡ್ಯಾಂಗಳು ತುಂಬಿದ ದೃಶ್ಯ ಕಂಡ ಅನ್ನದಾತರು ಸಂತುಷ್ಟರಾಗುತ್ತಿದ್ದಾರೆ.

ವರವಾದ ಚೆಕ್‌ ಡ್ಯಾಂ ನಿರ್ಮಾಣ: ಹಿಂದಿನ ಶಾಸಕರ ಅಧಿಕಾರವಧಿಯಲ್ಲಿ ರೋಣ ಮತಕ್ಷೇತ್ರದಲ್ಲಿ 76ಕ್ಕೂ ಅಧಿಕ ಚೆಕ್‌ ಡ್ಯಾಂಗಳು ನಿರ್ಮಿಸಲಾಗಿದ್ದು, ಗಜೇಂದ್ರಗಡ ಭಾಗದಲ್ಲಿ 14 ಚೆಕ್‌ ಡ್ಯಾಂ, 4 ಬ್ಯಾರೇಜ್‌ ಮತ್ತು 1 ಬ್ರೀಜ್‌ ನಿರ್ಮಾಣ ಮಾಡಿದ್ದು, ಇದೀಗ ಮಳೆಗಾಲ ಸಂದರ್ಭದಲ್ಲಿ ಹರಿದು ಹೋಗುವ ನೀರನ್ನು ಸಂಗ್ರಹಿಸಿಡುವ ಮೂಲಕ ರೈತರಿಗೆ ಅನುಕೂಲಕರವಾಗಿದೆ.

ತಾಲೂಕಿನಲ್ಲಿ ಮಳೆರಾಯನ ಆಗಮನ ಶುರುವಾಗಿದ್ದು, ಈಚೆಗೆ ಸುರಿದ ಮಳೆಗೆ ಬಹುತೇಕ ಚೆಕ್‌ ಡ್ಯಾಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಆದರೆ ಜನಪ್ರತಿನಿಧಿಗಳು ಮಾತ್ರ ಈವರೆಗೂ ಬಾಗೀನ ಅರ್ಪಿಸದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಸಣ್ಣ ನೀರಾವರಿ ಇಲಾಖೆಯಿಂದ 1 ಕೋಟಿ, 50 ಲಕ್ಷ ರೂ. ಹೀಗೆ ಒಂದೊಂದು ಚೆಕ್‌ ಡ್ಯಾಂ, ಬ್ಯಾರೆಜ್‌ಗೆ ವೆಚ್ಚ ಮಾಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಕೋಟ್ಯಂತರ ರೂ. ಅನುದಾನ ವ್ಯಯಿಸಿ ಹತ್ತಾರು ಚೆಕ್‌ ಡ್ಯಾಂ ನಿರ್ಮಿಸಿರುವುದು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಇದೊಂದು ಅಡಿಪಾಯವಾಗಿದೆ ಎನ್ನುವುದು ಕೃಷಿ ತಜ್ಞರ ಮಾತು.

ಗೋಗೇರಿ, ರಾಜೂರ, ಕುಂಟೋಜಿ, ರಾಮಾಪುರ, ಸೂಡಿ, ದ್ಯಾಮುಣಸಿ, ಗುಳಗುಳಿ, ಇಟಗಿ, ನಿಡಗುಂದಿ, ಅಬ್ಬಿಗೇರಿ, ಮುಶಿಗೇರಿ, ಲಕ್ಕಲಕಟ್ಟಿ, ಹೊಸಳ್ಳಿ ಪಂಚಾಯಿತಿ ಸೇರಿದಂತೆ ಅನೇಕ ಕಡೆ ಚೆಕ್‌ ಡ್ಯಾಂ ನಿರ್ಮಾಣ ಮಾಡಲಾಗಿದೆ. ದ್ಯಾಮುಣಸಿ ಬಳಿಸೇತುವೆ ನಿರ್ಮಾಣವನ್ನು ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಕೈಗೊಳ್ಳಲಾಗಿದೆ.

 

•ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next