ಕೊಪ್ಪಳ: ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಕೈಗೊಂಡಿದ್ದ ಹಿರೇಹಳ್ಳದ ಸ್ವಚ್ಛತಾ ಅಭಿಯಾನಕ್ಕೆ ನಾಡಿನೆಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೇ, ಇತ್ತೀಚೆಗೆ ಸುರಿದ ಮಳೆಯಿಂದ 3 ಹಳ್ಳಗಳಲ್ಲಿ ಜೀವಜಲ ತುಂಬಿಕೊಂಡಿದೆ. ಶ್ರೀಗಳ ಸಾರ್ಥಕತೆ ಕಾಯಕ ರೈತರಿಗೆ ನಿಜಕ್ಕೂಮರು ಜೀವ ನೀಡಿದಂತಾಗಿದೆ.
ಕೊಪ್ಪಳ ಜಿಲ್ಲೆ ಪದೇ ಪದೇ ಬರಕ್ಕೆ ತುತ್ತಾಗಿ ರೈತ ಸಮೂಹ ವೇದನೆ ವ್ಯಕ್ತಪಡಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟವೂ ತಳಪಾಯ ಸೇರುತ್ತಿದ್ದು, ಕೊಳವೆಬಾವಿಯಲ್ಲೂ ಹನಿ ನೀರು ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ರೈತರ ಬಾಳಿಗೆ ಬೆಳಕಾಗಿ ಬಂದ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಕಳೆದ ಮಾರ್ಚ್ 1ರಂದು ಹಿರೇಹಳ್ಳದ 26 ಕಿಲೋ ಮೀಟರ್ ಉದ್ದ ಸ್ವಚ್ಛ ಮಾಡಿ ಜೀವಜಲ ತುಂಬಿಸುವ ಮಹಾನ್ ಕಾರ್ಯಕ್ಕೆ ಮುಂದಾಗಿದ್ದರು. ಶ್ರೀಗಳಿಗೆ ನಾಡಿನೆಲ್ಲೆಡೆಯಿಂದ ಸಹಕಾರ ಸಿಕ್ಕಿತ್ತು. ಜಿಲ್ಲೆಯ ಹಾಗೂ ಹಳ್ಳದ ಸುತ್ತಲಿನ ಹಲವು ಗ್ರಾಮಗಳ ರೈತರು ಸಹ ಕೈ ಜೋಡಿಸಿದ್ದರು.
ಹಗಲಿರುಳೆನ್ನದೇ ಶ್ರೀಗಳು ಮಠದ ಕಾರ್ಯಗಳನ್ನೂ ಬದಿಗೊತ್ತಿ ಹಳ್ಳದಲ್ಲಿ ವರ್ಷಾನು ವರ್ಷ ತುಂಬಿಕೊಂಡಿದ ಕಸ, ತ್ಯಾಜ ಸೇರಿದಂತೆ ಮುಳ್ಳಿನ ಕಂಟಿಗಳ ತೆರವು ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದರು. ಪ್ರತಿ ದಿನವೂ ಹಳ್ಳದಲ್ಲಿ ಸುತ್ತಲಿನ ಗ್ರಾಮಸ್ಥರನ್ನು ಕಟ್ಟಿಕೊಂಡು ಹಳ್ಳ ಸ್ವಚ್ಛತಾ
ವಿಧಾನ, ಕಾರ್ಯ ವೈಖರಿ, ಪ್ರಗತಿ ವೀಕ್ಷಿಸುತ್ತಿದ್ದರು. ಕೋಳೂರು ಹಳ್ಳದಲ್ಲಿ ತಾವೇ ಇಳಿದು ಹರಿಗೋಲಿನಲ್ಲಿ ಅಂತರಗಂಗೆ ಸೇರಿ ತ್ಯಾಜ್ಯ ತೆರವು ಮಾಡುವ ಮೂಲಕ ಸಾಮಾನ್ಯ ಜನತೆಗೂ ಕಾಯಕಕ್ಕೆ ಪ್ರೇರಣೆ ಜತೆಗೆ ಸ್ಫೂರ್ತಿ ನೀಡಿದ್ದರು. ಶ್ರೀಗಳ ಮಹಾನ್ ಕಾರ್ಯ ಸ್ಥಳಕ್ಕೆ ನಾಡಿನ ರಾಜಕಾರಣಿಗಳು ಸೇರಿದಂತೆ ಜಲ ತಜ್ಞರು, ನೀರಾವರಿ ಅಧಿಕಾರಿಗಳು ಭೇಟಿ ನೀಡಿ ಇದು ದೇವರು ಮಾಡುವ ಕೆಲಸ ಎನ್ನುವ ಮಾತನ್ನಾಡಿ ಅಭಿಯಾನದ ಬಗ್ಗೆ ಮೂಕ ವಿಸ್ಮಿತರಾಗಿದ್ದರು.
ಶ್ರೀಗಳು ಕೈಗೊಂಡ ದೂರದೃಷ್ಟಿ ಯೋಜನೆ, ಕಾಯಕ, ಸರಳತೆ, ಒಗ್ಗೂಡುವಿಕೆ ಶ್ರಮಕ್ಕೆ ಬೆರಳೆಣಿಕೆ ತಿಂಗಳಲ್ಲಿ ಪ್ರತಿಫಲ ದೊರೆತಿದೆ. ತಾಲೂಕಿನ ಕೋಳೂರು, ಬೂದಿಹಾಳ ಹಾಗೂ ಡೊಂಬರಳ್ಳಿ ಹಳ್ಳಗಳು ನೀರಿಗೆ ಭರ್ತಿಯಾಗಿವೆ. ಇದರೊಟ್ಟಿಗೆ ಸುತ್ತಲಿನ ಸಣ್ಣಪುಟ್ಟ ಹಳ್ಳದಲ್ಲೂ ನೀರು ಸಂಗ್ರಹವಾಗಿದೆ. ಇನ್ನೂ ರೈತರ ಕೊಳವೆಬಾವಿಗಳಲ್ಲೂ ನೀರು ಬರುತ್ತಿದೆ. ಈ ಹಳ್ಳಗಳಲ್ಲಿ ತುಂಬಿದ್ದ ತ್ಯಾಜ್ಯವೆಲ್ಲ ಸ್ವಚ್ಛವಾಗಿದ್ದು, ನೀರು ಸಂಗ್ರಹವಾಗಿದ್ದನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂಬ ಮಾತು ಸುತ್ತಲಿನ ರೈತರಿಂದ ಸಂತಸದ ಮಾತು ವ್ಯಕ್ತವಾಗಿದೆ. ಶ್ರೀಗಳು ಕೈಗೊಂಡ ಕಾರ್ಯದಿಂದ ಈಗ ನಮ್ಮ ಜೀವನೋಪಾಯಕ್ಕೆ ದಾರಿಯಾಗಿದೆ. ನಮ್ಮ ಬೆಳೆಗಳಿಗೆ ನೀರು ಹರಿಯುತ್ತಿದೆ. ಹಳ್ಳದ ನೀರು ನಮ್ಮ ಜೀವನ ಉಳಿಸಿದೆ ಎನ್ನುವ ಧನ್ಯತಾ ಮಾತುಗಳನ್ನಾಡುತ್ತಿದ್ದಾರೆ. ಈ ಮೊದಲು ಮಳೆಯಾಗುತ್ತಿದ್ದರೂ ಹಳ್ಳದಲ್ಲಿ ಅತ್ಯಧಿಕವಾಗಿ ಮುಳ್ಳಿನ ಗಿಡ, ಕಸ ಬೆಳೆದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿರಲಿಲ್ಲ. ಆದರೆ ಶ್ರೀಗಳು ಸ್ವಚ್ಛತಾ ಕಾರ್ಯಕ್ಕೆ ಕೈ ಹಾಕಿದ್ದರಿಂದ ಹಳ್ಳವೆಲ್ಲ ಸ್ವಚ್ಛವಾಗಿ ಸುಂದರ ತಾಣವಾಗಿ ನಮಗೆ ಗೋಚರವಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಯಾವ ಸರ್ಕಾರಗಳೂ ಮಾಡದಂತ ಮಹಾನ್ ಕಾರ್ಯವನ್ನು ಶ್ರೀಗಳು ಮಾಡಿದ್ದು, ರೈತರ ಬದುಕಿಗೆ ದಾರಿಯಾಗಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಅಂತಹ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಆದರೂ ಸ್ವಲ್ಪ ಮಳೆಗೆ ನೀರು ಹರಿದು ಹಳ್ಳಗಳು ತುಂಬಿಕೊಂಡಿದ್ದು, ಸುತ್ತಲಿನ ಸಾವಿರಾರು ರೈತರಿಗೆ ಶ್ರೀಗಳು ಜೀವನಕ್ಕೆ ದಾರಿಮಾಡಿಕೊಟ್ಟಂತಾಗಿದೆ. ಇದಕ್ಕಿಂತ ಜೀವನದಲ್ಲಿ ಸಾರ್ಥಕತೆ ಬದುಕು ಮತ್ತೂಂದಿಲ್ಲ ಎನ್ನುವುದು ಸತ್ಯದ ಮಾತು.
•ದತ್ತು ಕಮ್ಮಾರ