ಗದಗ: ವೈದ್ಯರಲ್ಲಿ ಸಂವಹನ ಕೊರತೆಯಿಂದಾಗಿ ರೋಗಿಗಳು ಮತ್ತು ವೈದ್ಯರ ನಡುವಿನ ಅಂತರ ಬೆಳೆಯುತ್ತಿದೆ. ರೋಗಿಗಳಿಗೆ ಔಷಧೋಪಚಾರ ನೀಡುವುದರೊಂದಿಗೆ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಮೂಲಕ ತ್ವರಿತಗತಿಯಲ್ಲಿ ಗುಣಮುಖರನ್ನಾಗಿಸಬೇಕು ಎಂದು ಬೆಂಗಳೂರು ನಿಮ್ಹಾನ್ಸ್‌ನ ನಿವೃತ್ತ ಮನೋವೈದ್ಯ ಡಾ| ಸಿ.ಆರ್. ಚಂದ್ರಶೇಖರ ಸಲಹೆ ನೀಡಿದರು.
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮನೋವೈದ್ಯ ವಿಭಾಗದಿಂದ ನಗರದ ಜಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವೈದ್ಯಕೀಯ ಕಾರ್ಯಾಗಾರ ಹಾಗೂ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದಾಗಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ವೃತ್ತಿ ಕೌಶಲ ಹಾಗೂ ರೋಗಿಗಳೊಂದಿಗೆ ಸಂವಹನ ಕಡಿಮೆಯಾಗುತ್ತಿದೆ. ರೋಗಿಗಳಿಂದಲೇ ಕಾಯಿಲೆಗಳ ಗುಣಲಕ್ಷಣ ಅರಿತುಕೊಂಡು ಔಷಧೀಯ ಚೀಟಿ ಬರೆಯುವ ಪ್ರವೃತ್ತಿ ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.
ರೋಗಿಗಳಿಗೆ ಔಷಧೋಪಚಾರಕ್ಕಿಂತ ಅವರ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಆಗಬೇಕಿದೆ. ಇದರಿಂದ ಮಾನಸಿಕವಾಗಿ ಕುಗ್ಗಿರುವ ರೋಗಿಗಳಲ್ಲಿ ಹೊಸ ಭರವಸೆ ಮೂಡಿಸುವುದರೊಂದಿಗೆ ಶೀಘ್ರಗತಿಯಲ್ಲಿ ಅವರನ್ನು ಗುಣಪಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ರೋಗಿಗಳ ಕೌನ್ಸೆಲಿಂಗ್ ಎಂಬುದು ಚಿಕಿತ್ಸೆಗಿಂತ ಪರಿಣಾಮಕಾರಿ ಆಗುತ್ತದೆ. ಅಲ್ಲದೇ, ಆಧುನಿಕ ಜೀವನ ಶೈಲಿಯಿಂದಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಕಾಯಿಲೆಗಳು ಗಂಭೀರ ಸ್ವರೂಪ ಪಡೆದುಕೊಳ್ಳದಂತೆ ರೋಗಿಗಳ ಕೌನ್ಸೆಲಿಂಗ್ ಮೂಲಕ ಪ್ರಾಥಮಿಕ ಹಂತದಲ್ಲೇ ಹತೋಟಿಗೆ ತರಲು ಮನೋವೈದ್ಯರು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಮ್ಸ್ ಕಾಲೇಜಿನ ಉಪನ್ಯಾಸಕ ಪ್ರೊ| ಡಾ| ಎಸ್.ಎಸ್. ಹರಸೂರ ಮಾತನಾಡಿ, ವೈದ್ಯಕೀಯ ವೃತ್ತಿ ಎಂಬುದು ಸೇವೆಯಾಗಬೇಕೇ ಹೊರತು, ಉದ್ಯಮವಾಗಿ ಬದಲಾಗಬಾರದು. ಆದರೆ, ಶೇ. 2ರಷ್ಟು ಉದ್ಯಮವಾಗಿ ಬೆಳೆದಿದ್ದರೂ ತನ್ನ ಸೇವಾ ಮನೋಭಾವನೆಯಿಂದ ದೂರ ಸರಿದಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಸೇವಾ ಮನೋಭಾವವಿದೆ ಎಂಬುದಕ್ಕೆ ನಾಡಿನ ಸರಕಾರಿ ಆಸ್ಪತ್ರೆಗಳ ಕಾರ್ಯನಿರ್ವಹಣೆಯೇ ಉತ್ತಮ ಉದಾಹರಣೆಯಾಗಿವೆ. ಒತ್ತಡದ ಜೀವನದಲ್ಲಿ ಸಿಲುಕಿರುವ ನಮಗೆ ನಾನಾ ಕಾಯಿಲೆಗಳು ಕಾಡುತ್ತಿವೆ. ಅವುಗಳನ್ನು ಆರಂಭಿಕ ಹಂತದಲ್ಲೇ ನಿವಾರಿಸಲು ಕುಟುಂಬ ವೈದ್ಯ ಪದ್ಧತಿ ರೂಢಿಸಿಕೊಳ್ಳಬೇಕು. ಇದನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲು ವೈದ್ಯರು ಶ್ರಮಿಸಬೇಕು ಎಂದರು.
ಬಳಿಕ ಡಾ| ಗಿರೀಶ ಬಾಬು, ಡಾ| ಅನಿಲ ಕಾಕುಂಜೆ, ಡಾ| ಬಿ.ಎಂ. ಸುರೇಶ, ಡಾ| ಶ್ರೀನಿವಾಸ ಟಿ.ಆರ್., ಡಾ| ರಜನಿ ಮತ್ತು ಡಾ| ಮಂಜುನಾಥರವರು ವೈದ್ಯಕೀಯ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಜಿಮ್ಸ್ ನಿರ್ದೇಶಕ ಡಾ| ಪಿ.ಎಸ್. ಭೂಸರಡ್ಡಿ, ದಿಮ್ಹಾನ್ಸ್ ಧಾರವಾಡದ ನಿರ್ದೇಶಕ ಡಾ| ಮಹೇಶ ದೇಸಾಯಿ, ಭಾರತೀಯ ವೈದ್ಯಕೀಯ ಮಂಡಳಿ ಕರ್ನಾಟಕ ಶಾಖೆ ಅಧ್ಯಕ್ಷ ಡಾ| ಮಧುಸುಧನ ಕರಿಗಾನೂರ, ಭಾರತೀಯ ವೈದ್ಯಕೀಯ ಮಂಡಳಿ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ| ಅಭಯ ಮಠಕರ್, ಡಾ| ಅರುಣಕುಮಾರ ಸಿ., ಡಾ| ಜಿತೇಂದ್ರ ಮುಗಳಿ, ಡಾ| ಶಿವಾನಂದ ಹಟ್ಟಿ, ಡಾ| ಶ್ರೀನಿವಾಸ ದೇಶಪಾಂಡೆ, ಡಾ| ರವೀಂದ್ರ ಪಿ.ಎನ್, ಡಾ| ರಾಜು ಜಿ.ಎಂ. ಇದ್ದರು.
ಜಿಮ್ಸ್‌ನ ವೈದ್ಯರು ಸೇರಿದಂತೆ 200ಕ್ಕೂ ಹೆಚ್ಚು ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.