ಸಮರ್ಪಕವಾಗಿ ಮಳೆಯಾಗದಿದ್ದರೂ ಕೃಷ್ಣೆ ಉಗಮಸ್ಥಾನ ಮಹಾಬಳೇಶ್ವರ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿದ ಪರಿಣಾಮ ಇಲ್ಲಿನ ಲಾಲ್‌ಬಹಾದ್ದೂರ್ ಶಾಸ್ತ್ರೀ ಜಲಾಶಯ ಮಂಗಳವಾರ ಸಂಪೂರ್ಣ
ಭರ್ತಿಯಾಗಿದೆ. 519.60 ಮೀ. ಎತ್ತರ, ಗರಿಷ್ಠ 123.081 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಮಂಗಳವಾರ 35,672 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹವಾಗಿದ್ದು, ಜಲಚರಗಳಿಗಾಗಿ 17.650 ಟಿಎಂಸಿ ಮೀಸಲಿರಿಸಿ, ಉಳಿದ 105.431 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಬಹುದಾಗಿದೆ. ಕಳೆದ ವರ್ಷವೂ ಇದೇ ದಿನ ಜಲಾಶಯ ಭರ್ತಿಯಾಗಿತ್ತು.
ಮುಂದುವರಿದ ವರುಣನ ಅವಕೃಪೆ
ಬೆಂಗಳೂರು: ರಾಜ್ಯಾದ್ಯಂತ ವರುಣನ ಅವಕೃಪೆ ಮುಂದುವರಿದಿದ್ದು, ಇದೇ ವಾತಾವರಣ ಮುಂದುವರಿದರೆ ಆಗಸ್ಟ್‌ನಲ್ಲಿ ಕೂಡ ವಾಡಿಕೆ ಮಳೆಯಾಗುವುದು ಅನುಮಾನ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ ಮತ್ತು ಜುಲೈನಲ್ಲಿ ರಾಜ್ಯದಲ್ಲಿ ಉತ್ತಮ ಮುಂಗಾರು ಮಳೆ ಆಗಬೇಕಿತ್ತು. ಆದರೆ, ನಿರೀಕ್ಷೆ ಹುಸಿಯಾಯಿತು. ಆಗಸ್ಟ್ ಮೊದಲ ವಾರದಲ್ಲೂ ಇದೇ ವಾತಾವರಣ ಮುಂದುವರೆದಿದೆ. ಈ ಸ್ಥಿತಿ ಮುಂದುವರಿದರೆ, ಆಗಸ್ಟ್‌ನಲ್ಲಿ ಕೂಡ ಮಳೆ ಕೊರತೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್. ಎಂ. ಮೆಟ್ರಿ ತಿಳಿಸಿದ್ದಾರೆ. ಮುಂಗಾರು ಮಾರುತಗಳು ಸದ್ಯಕ್ಕೆ ಕ್ಷೀಣಗೊಂಡಿದ್ದು, ಆಗಸ್ಟ್ 5 ಮತ್ತು 6ರಂದು ಕರಾವಳಿ ಭಾಗದಲ್ಲಿ ಮಾತ್ರ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನಲ್ಲಿ ಚದುರಿದಂತೆ ಅಥವಾ ಹಗುರವಾದ ಮಳೆ ನಿರೀಕ್ಷಿಸಲಾಗಿದೆ.
ಸಾಮಾನ್ಯವಾಗಿ ಅವಧಿಯಲ್ಲಿ ಅರಬ್ಬಿ ಸಮುದ್ರದ ಆಚೆಗೆ ವಾಯುಭಾರ ಕುಸಿತ ಉಂಟಾಗಬೇಕಿತ್ತು. ಆದರೆ, ಇದು ಆಗಲಿಲ್ಲ. ಹಾಗಾಗಿ ಮಳೆ ಕೊರತೆ ಆಗಿದೆ. ಮುಂದಿನ ದಿನಗಳಲ್ಲಿ ವಾಯುಭಾರ ಕುಸಿತದಂತಹ ಬೆಳವಣಿಗೆಗಳಾದರೂ ಭಾರೀ ಮಳೆಯ ಸಾಧ್ಯತೆಗಳು ಕಡಿಮೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ದಕ್ಷಿಣ ಕನ್ನಡ, ಕೊಡಗಿನ ಭಾಗಮಂಡಲ, ಚಿಕ್ಕಮಗಳೂರಿನಲ್ಲಿ ಗರಿಷ್ಠ 5 ಸೆಂ.ಮೀ.ನಿಂದ ಕನಿಷ್ಠ 1 ಸೆಂ.ಮೀ. ಮಳೆಯಾಗಿದೆ.