Advertisement

ಗಾಜನೂರು ಜಲಾಶಯ ಭರ್ತಿ

03:30 PM Jun 11, 2018 | |

ಶಿವಮೊಗ್ಗ: ಜಿಲ್ಲಾದ್ಯಂತ ಮಳೆ ಆರ್ಭಟ ಜೋರಾಗಿದೆ. ತುಂಗಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಗಾಜನೂರಿನ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.

Advertisement

ಭಾನುವಾರ ಜಲಾಶಯದ ಒಟ್ಟು 22 ಕ್ರೆಸ್ಟ್‌ಗೇಟ್‌ ಪೈಕಿ 10 ಕ್ರೆಸ್ಟ್‌ಗೇಟ್‌ ತೆರೆದು ಸುಮಾರು 13 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ನದಿಗೆ ಹರಿಸಲಾಗುತ್ತಿದ್ದು, ತುಂಗೆಗೆ ಜೀವಕಳೆ ಬಂದಿದೆ.

ತುಂಗಾ ಜಲಾನಯನ ಪ್ರದೇಶ ವ್ಯಾಪ್ತಿಯ ತೀರ್ಥಹಳ್ಳಿ ತಾಲೂಕು, ಶೃಂಗೇರಿ, ಕೊಪ್ಪ ಮೊದಲಾದ ಕಡೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಯ ನೀರಿನ ಮಟ್ಟ ಹೆಚ್ಚಿದೆ. ಜಲಾಶಯದ ಒಳಹರಿವು ಹೆಚ್ಚಾಗಿರುವುದರಿಂದ ಜಲಾಶಯದ 10 ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಬಿಡಲಾಗುತ್ತಿದೆ. ಗಾಜನೂರು ತುಂಗಾ ಜಲಾಶಯದಲ್ಲಿ 3.24 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಹೆಚ್ಚುವರಿ ಹರಿದುಬರುತ್ತಿರುವ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಇದೀಗ 13 ಸಾವಿರ ಕ್ಯೂಸೆಕ್‌ ಒಳ ಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ.

ಜಲಾಶಯದಿಂದ ನೀರು ಹೊರಬಿಟ್ಟಿದ್ದರಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ತುಂಗಾ ನದಿ ಜೀವಕಳೆ ಪಡೆದುಕೊಂಡಿದೆ. ಗೇಟ್‌ ತೆರೆದು ನೀರು ಹರಿಬಿಟ್ಟಿದ್ದರಿಂದ ನದಿ ಪಾತ್ರದಲ್ಲಿನ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ತುಂಬಿ ಹರಿಯುತ್ತಿರುವ ನದಿ ಹಾಗೂ ಜಲಾಶಯ ವೀಕ್ಷಿಸಲು ಜನ ಗಾಜನೂರಿಗೆ ಆಗಮಿಸತೊಡಗಿದ್ದಾರೆ. ಜಲಾಶಯದ ಗೇಟ್‌ ಮೂಲಕ ಹಾಲಿನಂತೆ ಭೋರ್ಗರೆಯುತ್ತಿರುವ ಜಲರಾಶಿಯನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

ಒಳಹರಿವು ಹೆಚ್ಚಳ: ಭದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲೂ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿದೆ.

Advertisement

7908 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ ಭಾನುವಾರ ಬೆಳಗ್ಗೆಗೆ ಕೊನೆಗೊಂಡಂತೆ 115.9 ಅಡಿಗೆ ತಲುಪಿದೆ. ಇನ್ನೊಂದೆಡೆ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆ ಸುರಿಯುತ್ತಿದ್ದು, ಶರಾವತಿ ನದಿ ಹರಿವಿನ ಪ್ರಮಾಣದಲ್ಲೂ ಏರಿಕೆಯಾಗಿದೆ. 9384 ಕ್ಯುಸೆಕ್‌ ಒಳಹರಿವಿದ್ದು, ಜಲಾಶಯದ ಮಟ್ಟ 1753.05 ಅಡಿ ತಲುಪಿದೆ. 

ಪಕ್ಷಿಧಾಮಕ್ಕೆ ಕಂಟಕ: ತುಂಗಾ ನದಿಯಲ್ಲಿ ಹರಿವಿನ ಪ್ರಮಾಣ ಒಂದೇ ಸಮನೆ ಏರಿಕೆಯಾಗುತ್ತಿದ್ದು, ಪ್ರತಿವರ್ಷದಂತೆ
ಸಂತಾನಾಭಿವೃದ್ಧಿಗಾಗಿ ವಿದೇಶಗಳಿಂದ ವಲಸೆ ಬಂದಿರುವ ಬಾನಾಡಿಗಳಿಗೆ ಸಂಕಷ್ಟ ಎದುರಾಗಿದೆ.

ಪ್ರತಿ ಬಾರಿ ತುಂಗಾ ಜಲಾಶಯ ಭರ್ತಿಯಾದಾಗಲೂ ತುಂಗಾ ಜಲಾಶಯದ ಹಿನ್ನೀರಿನಲ್ಲಿ ಗೂಡು ಕಟ್ಟಿಕೊಂಡಿರುವ ವಿದೇಶಿ ಪಕ್ಷಿಗಳು ಅಸಂಖ್ಯ ಸಂಖ್ಯೆಯಲ್ಲಿ ನೀರು ಪಾಲಾಗುತ್ತವೆ. ಈ ಬಾರಿಯೂ ಜಲಾಶಯದ ಹಿನ್ನೀರಿನಲ್ಲಿ ಪಕ್ಷಿಗಳು ಮೂಕರೋಧನೆ ಅನುಭವಿಸುತ್ತಿವೆ.

ಧಾರಾಕಾರ ಮಳೆ
ಜಿಲ್ಲಾದ್ಯಂತ ಮುಂಗಾರು ಆರ್ಭಟ ಜೋರಾಗಿದೆ. ಭಾನುವಾರ ಹೊಸನಗರ, ಸಾಗರ, ರಿಪ್ಪನ್‌ಪೇಟೆ, ತೀರ್ಥಹಳ್ಳಿ ತಾಲೂಕು, ಶರಾವತಿ ಕಣಿವೆ ಪ್ರದೇಶ ಸೇರಿದಂತೆ ಹಲವೆಡೆ ಮಳೆ ಮುಂದುವರಿದಿದೆ. ರಿಪ್ಪನ್‌ಪೇಟೆ, ಹುಂಚಾ, ಗರ್ತಿಕೆರೆ, ಕೆಂಚನಾಲ, ಅರಸಾಳು, ಚಿನ್ಮನೆ ಭಾಗದಲ್ಲೂ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಯಾವುದೇ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಶಿವಮೊಗ್ಗ ನಗದಲ್ಲಿ ಭಾನುವಾರ ಜಿಟಿ ಜಿಟಿ ಮಳೆ ಮುಂದುವರಿದಿದೆ. ತಾಲೂಕಿನ ಗ್ರಾಮೀಣ ಭಾಗದಲ್ಲೂ ಸಾಧಾರಣ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next