ಮಂಗಳೂರು: ಒಂದೆರಡು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಮಂಗಳೂರಿಗೆ ನೀರುಣಿಸುವ ತುಂಬೆ ಡ್ಯಾಂನಲ್ಲಿ ಮಾತ್ರ ನೀರಿನ ಮಟ್ಟ ಏರಿಕೆಯಾಗಿಲ್ಲ. ಸದ್ಯ ನಗರಕ್ಕೆ ನೀರು ಸರಬರಾಜು ಆಗುತ್ತಿರುವ ಪರಿಣಾಮ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ರವಿವಾರ ಸಂಜೆ 3.10 ಮೀ. ಇತ್ತು.
ಉತ್ತಮ ಮಳೆಯಾಗದಿದ್ದರೆ ಮೇ 28ರ ಬೆಳಗ್ಗೆ 6ರಿಂದ ಜೂ.1ರ ಬೆಳಗ್ಗೆ 6ರ ವರೆಗೆ ನೀರು ಸರಬರಾಜು ಸ್ಥಗಿತವಾಗಲಿದೆ. ಪ್ರಸ್ತುತ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರು ರೇಶನಿಂಗ್ ಯಾವುದೇ ಸಂದರ್ಭ ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ.
ರೇಶನಿಂಗ್ ನಿಯಮದ ಪ್ರಕಾರ ಮೇ 28ರ ಬೆಳಗ್ಗೆ 6 ಗಂಟೆಯ ವರೆಗೆ ನೀರು ಸರಬರಾಜು ಇರಲಿದೆ.
ಉಡುಪಿ: 10 ದಿನಕ್ಕಷ್ಟೇ ನೀರು?
ಉಡುಪಿ: ಬಜೆ ಅಣೆಕಟ್ಟಿಗೆ ನೀರು ಹಾಯಿಸಲು ಪುತ್ತಿಗೆ ಸೇತುವೆ ಬಳಿ ರವಿವಾರ ಎರಡು ಪಂಪುಗಳಿಂದ ಪಂಪಿಂಗ್ ಮಾಡಲಾಯಿತು. ಸೋಮವಾರ ಪುತ್ತಿಗೆ ಸೇತುವೆ ಕೆಳಗೆ ಎರಡು ಪಂಪು, ಪುತ್ತಿಗೆ ಮಠದ ಬಳಿ ಒಂದು ಪಂಪಿನಿಂದ ಪಂಪಿಂಗ್ ಮಾಡಲಾಗುತ್ತದೆ.
ಪ್ರಸ್ತುತ ಒಟ್ಟಾರೆ 10ರಿಂದ 12 ದಿನಗಳವರೆಗೆ ನೀರು ಪೂರೈಸುವಷ್ಟು ನೀರು ಇದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.