ಹೊಸದಿಲ್ಲಿ: ಪ್ಯಾನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡಲು ಗುರುವಾರ ಕೊನೆಯ ದಿನ. ಲಿಂಕ್ ಮಾಡಿಕೊಳ್ಳದಿದ್ದವರು ಕೂಡಲೇ ಅದನ್ನು ಮಾಡಿಸುವಂತೆ ಆದಾಯ ತೆರಿಗೆ ಇಲಾಖೆ ಮನವಿ ಮಾಡಿದೆ. ಅಂಥ ಕ್ರಮ ಕೈಗೊಳ್ಳದಿದ್ದರೆ ರಿಟರ್ನ್ಸ್ ಸಲ್ಲಿಕೆ ಮಾಡಲು ಸಾಧ್ಯವಾಗಲಾರದು. ಇದೇ ವೇಳೆ ಗುರುವಾರ ಹಣಕಾಸು ಇಲಾಖೆ ಸಭೆಯಲ್ಲಿ ದಿನಾಂಕ ವಿಸ್ತರಣೆಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಅರ್ಜಿಗಳ ವಿಚಾರಣೆ ನವೆಂಬರ್‌ನಿಂದ: ಸುಪ್ರೀಂ
ಸರಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್ ಬೇಕು ಎಂಬ ಸರಕಾರದ ಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟಲ್ಲಿ ನವೆಂಬರ್‌ನಿಂದ ಆರಂಭವಾಗಲಿದೆ.
ವಿವಿಧ ಯೋಜನೆಗಳ ಲಾಭ ಪಡೆಯಲು ಆಧಾರ್ ಸಂಯೋಜನೆ ಅವಧಿಯನ್ನು ಡಿ.31ರ ವರೆಗೆ ಕೇಂದ್ರ ವಿಸ್ತರಿಸಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠಕ್ಕೆ ಅರಿಕೆ ಮಾಡಿಕೊಂಡರು. ಹೀಗಾಗಿ, ನ್ಯಾಯಪೀಠ ಅದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತವಾಗಿ ನಡೆಸಬೇಕಾದ ಅಗತ್ಯವಿಲ್ಲ. ನವೆಂಬರ್‌ನಲ್ಲಿ ಅದನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿತು.
ಇದಕ್ಕೂ ಮೊದಲು, ಹಿರಿಯ ವಕೀಲ ಶ್ಯಾಮ್ ದಿವಾನ್ “ಸರಕಾರ ಅವಧಿ ವಿಸ್ತರಣೆ ಮಾಡುವುದೇ ಆದಲ್ಲಿ ನವೆಂಬರ್‌ನಲ್ಲಿ ವಿಚಾರಣೆ ನಡೆಸಿದರೂ ಆದೀತು’ ಎಂದು ವಾದ ಮಂಡಿಸಿದ್ದರು.