Advertisement

ಹಿರಿಯರಿಗೆ ಫೈಲಿಂಗ್‌ ವಿನಾಯ್ತಿ : 75 ವರ್ಷ ಮೀರಿದವರಿಗೆ ಅನ್ವಯ

10:22 PM Feb 01, 2021 | Team Udayavani |

ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಉಂಟಾದೀತು, ಕೊರೊನಾದಿಂದ ಉಂಟಾಗಿರುವ ಸಮಸ್ಯೆ ತಗ್ಗಿಸಲು ವಿತ್ತ ಸಚಿವರು ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಬಜೆಟ್‌ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲಾಗಿಲ್ಲ. ಸಂಬಳದಾರರಿಗೆ, ಪಿಂಚಣಿದಾರರಿಗೆ ಸ್ಟಾಂಡರ್ಡ್‌ ಡಿಡಕ್ಷನ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದಾಯ ತೆರಿಗೆಯ ಮೂಲ ವಿನಾಯಿತಿ ಹಾಲಿ ವಿತ್ತ ವರ್ಷದಲ್ಲಿ ಏನಿದೆಯೋ ಅದುವೇ ಮುಂದಿನ ಹಣಕಾಸು ವರ್ಷದಲ್ಲಿ ಕೂಡ ಮುಂದುವರಿಯಲಿದೆ. ಒಟ್ಟರ್ಥದಲ್ಲಿ ಆದಾಯ ತೆರಿಗೆ ಕ್ಷೇತ್ರದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಲಾಗಿದೆ ಎನ್ನುವುದು ಗಮನಾರ್ಹ.

Advertisement

ಸಮಾಧಾನಕರ ಅಂಶವೆಂದರೆ 75 ವರ್ಷಕ್ಕಿಂತ ಹೆಚ್ಚು ವಯೋಮಿತಿಯವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಬೇಕಾದ ಅಗತ್ಯವಿಲ್ಲ. ಪಿಂಚಣಿ ಮತ್ತು ನಿಗದಿತ ಠೇವಣಿಯಿಂದ ಬರುವ ಆದಾಯವನ್ನು ನೆಚ್ಚಿಕೊಂಡು ಜೀವನ ಮಾಡುವ ಹಿರಿಯ ನಾಗರಿಕರಿಗೆ ಇದರಿಂದ ಭಾರೀ ಅನುಕೂಲವಾಗಲಿದೆ.

ಇದನ್ನೂ ಓದಿ:ಕೋವಿಡ್‌ ಸೆಸ್‌ ವಿಧಿಸದ್ದು ಉತ್ತಮ ನಿರ್ಧಾರ: ವಿನಾಯಿತಿ ಇಲ್ಲದಿದ್ದರೂ ಬೆಸ್ಟ್‌ ಬಜೆಟ್‌

ಪಾವತಿದಾರರ ಏರಿಕೆ: ದೇಶದಲ್ಲಿ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಏರಿಕೆಯಾಗಿದೆ. 2014ರಲ್ಲಿ 3.31 ಕೋಟಿ ಮಂದಿ
ರಿಟರ್ನ್ಸ್ ಸಲ್ಲಿಕೆ ಮಾಡಿದ್ದರೆ, 2020ರಲ್ಲಿ ಆ ಸಂಖ್ಯೆ 6.48 ಕೋಟಿ ಗೆ ಏರಿಕೆಯಾಗಿದೆ.

ಮೂರು ವರ್ಷದ್ದು ಸಾಕು: ರಿಟರ್ನ್ಸ್ ಸಲ್ಲಿಕೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಅವಧಿಯಲ್ಲಿ ಹಾಲಿ ಆರು ವರ್ಷಗಳಿಂದ ಮೂರು ವರ್ಷಗಳಿಗೆ ಇಳಿಕೆ ಮಾಡಲಾಗಿದೆ. ಗಂಭೀರ ತೆರಿಗೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಹತ್ತು ವರ್ಷ ಅಥವಾ 50 ಲಕ್ಷ ರೂ. ಎಂದು ನಿಗದಿ ಮಾಡಲಾಗಿದೆ.

Advertisement

50 ಲಕ್ಷ ರೂ. ವರೆಗೆ ಆದಾಯ ಇರುವ ಸಣ್ಣ ತೆರಿಗೆ ಪಾವತಿದಾರರಿಗೆ ವಿವಾದ ಪರಿಹರಿಸುವ ಬಗ್ಗೆ ಸಮಿತಿ ರಚನೆ ಮಾಡುವ ಪ್ರಸ್ತಾಪ ಬಜೆಟ್‌ನಲ್ಲಿದೆ. 1.10 ಲಕ್ಷ ಮಂದಿ “ನೇರ ತೆರಿಗೆ ವಿವಾದ್‌ ಸೆ ವಿಶ್ವಾಸ್‌’ ಎಂಬ ವ್ಯಾಜ್ಯ ಪರಿಹಾರ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡಿದ್ದಾರೆ.

ಬಾರದ ಕೋವಿಡ್‌ ಸೆಸ್‌: ಹೆಚ್ಚಿನ ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ “ಕೋವಿಡ್‌ ಸೆಸ್‌’ ಎಂಬ ತೆರಿಗೆ ವಿಧಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂಥ ಪ್ರಸ್ತಾಪ ಮಾಡಲಾಗಿಲ್ಲ. ಇದರ ಜತೆಗೆ ಆದಾಯ ತೆರಿಗೆ ಮೇಲೆ ಸರ್ಚಾರ್ಜ್‌ ವಿಧಿಸುವ ಗುಮ್ಮ ಕೂಡ ದೂರವಾಗಿದೆ.

ವಿವಾದ ಪರಿಹಾರಕ್ಕೂ ಫೇಸ್‌ಲೆಸ್‌
ರಿಟರ್ನ್ಸ್ ಸಲ್ಲಿಕೆ ನಂತರದ ಪ್ರಕ್ರಿಯೆಗಳನ್ನು ಸರಳೀಕರಿಸಲಾಗಿದೆ. ಸಂಪರ್ಕ ರಹಿತ ರಿಟರ್ನ್ಸ್ ವಿಲೇವಾರಿ ಈಗಾಗಲೇ ಜಾರಿ ಮಾಡಲಾಗಿದೆ. ಇದೀಗ ತೆರಿಗೆಗೆ ಸಂಬಂಧಿಸಿದ ವಿವಾದಗಳ ಪರಿಹಾರವನ್ನು ಕೂಡ ಸಂಪರ್ಕ ರಹಿತ (ಫೇಸ್‌ಲೆಸ್‌)ಮಾಡುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದಾಗಿ ಶೀಘ್ರವಾಗಿ ವ್ಯಾಜ್ಯಗಳು ಪರಿಹಾರವಾಗಲಿದೆ. ಅದಕ್ಕಾಗಿಯೇ ರಾಷ್ಟ್ರೀಯ ಸಂಪರ್ಕ ರಹಿತ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರ ಕೇಂದ್ರ ಸ್ಥಾಪಿಸಲಾಗುತ್ತದೆ. ದೂರುದಾರರು ಮತ್ತು ಪ್ರತಿವಾದಿಗಳ ನಡುವೆ ಭೇಟಿಯೇ ಇಲ್ಲದೆ, ಇಲೆಕ್ಟ್ರಾನಿಕ್‌ ಮಾಧ್ಯಮ ಮೂಲಕವೇ ನಡೆಸಲಾಗುತ್ತದೆ. ವ್ಯಕ್ತಿಯೇ ಹಾಜರಾಗಬೇಕಾಗಿದ್ದರೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಅದರ ವ್ಯವಸ್ಥೆ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next