Advertisement

ಅಂಜದ ಹೆಣ್ಣು

12:30 AM Mar 06, 2019 | |

ಟ್ರಾಫಿಕ್‌ ಸಿಗ್ನಲ್‌ನಲ್ಲಿ, ಮುಖ್ಯರಸ್ತೆಯ ತಿರುವಿನಲ್ಲಿ, ರೈಲಿನಲ್ಲಿ ಛಕ್ಕನೆ ಎದುರಾಗಿ ಚಪ್ಪಾಳೆ ಹೊಡೆಯುವವರನ್ನು, “ಕಾಸ್‌ ತೆಗೀ ಮಾಮಾ’… ಅನ್ನುವವರನ್ನು ಸಮಾಜ ಮಂಗಳಮುಖೀ ಅನ್ನುತ್ತದೆ. ಆದರೆ, ಅಂಜು ಎಲ್ಲರಂತಲ್ಲ. ಆಕೆಯ “ಯಶೋಗಾಥೆ’ ಕೇಳಿದರೆ, ಖುಷಿಯಿಂದ “ಚಪ್ಪಾಳೆ’ ಹೊಡೆಯುವ ಮನಸ್ಸಾಗುತ್ತದೆ. ನಿತ್ಯವೂ ಮಹಿಳೆಯಾಗಿ ಅವಳ ಸಾಹಸದಲ್ಲೊಬ್ಬ ಕೃಷಿಕನಿದ್ದಾನೆ. “ವಿಶ್ವ ಮಹಿಳಾ ದಿನ’ಕ್ಕಾಗಿ ಸಂಭ್ರಮಿಸುವ ಆಕೆ ತನ್ನ ಹೆಣ್ತನದ ಕಷ್ಟವನ್ನು ಹೀಗೆ ಹರವಿಕೊಂಡಳು…

Advertisement

“ನೀವು ಎರಡು ಸಾವಿರ ಬಾಡಿಗೆ ಕೊಡೋ ಕಡೆ ನಾವು ನಾಲ್ಕು ಸಾವಿರ ಕೊಡ್ತೀವಿ. ಯಾರಾದ್ರೂ ನಾಲ್ಕು ಜನ ಒಟ್ಟಿಗೆ ಮನೆಗೆ ಬಂದ್ರೆ ಸಾಕು; ಹಗಲೂ ಅಂತ ನೋಡಲ್ಲ, ರಾತ್ರಿ ಅಂತ ನೋಡಲ್ಲ. “ಮನೆ ಖಾಲಿ ಮಾಡಿ. ಇದು ಸಂಸಾರಸ್ಥರು ಇರೋ ಜಾಗ’ ಅಂತಾರೆ. ಯಾಕೆ, ಇವರಿಗೆ ನಾವು ಮನುಷ್ಯರ ಹಾಗೆ ಕಾಣಲ್ವಾ? ನಿಮ್ಮಲ್ಲಿ ಒಳ್ಳೆಯವರು, ಕೆಟ್ಟವರು ಇದ್ದ ಹಾಗೆ ಮಂಗಳಮುಖಿಯರಲ್ಲೂ ಇದ್ದಾರೆ. ಎಲ್ಲರನ್ನೂ ಯಾಕೆ ಒಂದೇ ರೀತಿ ನೋಡಬೇಕು?’ ಎಂದು ಅಂಜು ಕಣ್ಣಿನಲ್ಲಿ ಕಣ್ಣನಿಟ್ಟು ಕೇಳುತ್ತಿದ್ದರೆ, ನಾವು ಏನು ಹೇಳಬೇಕೆಂದು ತೋಚದೆ ಸುಮ್ಮನೆ ಕೂತು ಕೇಳತೊಡಗಿದೆವು. 

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರ ಎನ್ನುವ ಪುಟಾಣಿ ಗ್ರಾಮ. ಅಂಜು ಮನೆಯೂ ಅಲ್ಲಿಯೇ ಇರೋದು. ಸಣ್ಣ ಕುತೂಹಲದಿಂದಲೇ ಅಲ್ಲಿಗೆ ಹೋಗಿದ್ದೆ. ತೀರಾ ಪರಿಚಯದ ನಗೆ ನಕ್ಕು ಬರಮಾಡಿಕೊಂಡು, ಒಂದು ಕಪ್‌ ಚಹಾ ಮುಂದಿಟ್ಟು ನಿರ್ವಿಕಾರವಾಗಿ ಹೇಳುತ್ತಲೇ ಇದ್ದಳು… ಅವಳ ಕೃಷಿ, ಪಶುಸಂಗೋಪನೆ- ಹೀಗೆ ಥೇಟ್‌ ರೈತನ ಡೈರಿಯೇ ಆಗಿತ್ತು ಅವಳ ದೈನಂದಿನ ಪುಟಗಳು…

“ನಾನು ಈಗಿಲ್ಲಿ ನೆಲೆ ಕಂಡುಕೊಂಡಿದ್ದೇನೆ ಅಂದರೆ ಅದು ಸುಲಭದಿಂದಲ್ಲ ಮೇಡಂ. ಮೊದಲ ಬಾರಿಗೆ ಈ ಊರಿಗೆ ಬಂದಾಗ ಎಲ್ಲರೂ ನನ್ನನ್ನು ವಿಚಿತ್ರವಾಗಿಯೇ ನಡೆಸಿಕೊಂಡರು. ಹೆಂಗಸರು ಮಕ್ಕಳನ್ನ ಕದ್ದುಕೊಂಡು ಹೋಗಿ ವೇಶ್ಯಾವೃತ್ತಿಗೆ ತಳ್ತೀನಿ ಅಂತ ಊರಿಂದ ಓಡಿಸೋಕೆ ನೋಡಿದ್ರು. ಆಗ ನನ್ನ ತಮ್ಮ ಮತ್ತು ತಂದೆ ಜೊತೆಗೆ ನಿಲ್ಲದೇ ಹೋಗಿದ್ದರೆ ನಾನು ಇವತ್ತು ಎಲ್ಲಿರುತ್ತಿದ್ದೆನೋ ಏನೋ. ಹೆತ್ತವರು ನನ್ನ ಕೈ ಬಿಡಲಿಲ್ಲ. ಆದರೆ, ಎಲ್ಲರಿಗೂ ಎಲ್ಲಿದೆ ಈ ಭಾಗ್ಯ?’ ಎನ್ನುತ್ತ, ತಾಯಿಯೇ ಮಗಳನ್ನು ಮನೆಗೆ ಸೇರಿಸದೇ ಇರುವ ತಮ್ಮ ಗೆಳತಿಯ ಪ್ರಕರಣವನ್ನು ಹೇಳಿ ಮೌನವಾದರು. 

ಎಲ್ಲರ ಹಿಂದೆಯೂ ಒಂದು ನೋವು
ನಿಜ. ಆಕೆ ಹೇಳುವುದರಲ್ಲಿ ಸತ್ಯವಿತ್ತು. ಅಂಜುವಿನ ಸ್ನೇಹಿತೆಯರಾದ ಮೇಘಾ, ಸ್ಫೂರ್ತಿ, ಹರ್ಷಿತಾ, ಪ್ರೇಮ, ಭಾಗ್ಯ ಈ ಎಲ್ಲರದ್ದೂ ಒಂದೊಂದು ಕತೆ. ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಮನೆ ಬಿಟ್ಟವರೇ. ತಮ್ಮದೇ ನೆಂಟರಿಷ್ಟರು ಹೀಯಾಳಿಸಿದ್ದಕ್ಕೆ, ಆಚೀಚೆ ಜನರು ಅಣಕಿಸಿದ್ದಕ್ಕೆ, ರಸ್ತೆಯಲ್ಲಿ, ಗಲ್ಲಿಯಲ್ಲಿ ಓಡಾಡುವಾಗಲೆಲ್ಲ ಹಂಗಿಸಿದ್ದಕ್ಕೆ, ಕಂಡಕಂಡವರೆಲ್ಲ ಕೈ ತಟ್ಟಿ ನಕ್ಕಿದ್ದಕ್ಕೆ… ಹೀಗೆ. ಎಲ್ಲೆಲ್ಲೋ ಅಲೆದು ಬದಾಯಿ ಹೆಸರಿನಲ್ಲಿ ಐದೋ, ಹತ್ತೋ ರೂಪಾಯಿ ಗಳಿಸಿ, ಪ್ರೀತಿಸುವವರನ್ನೇ ತಂದೆ ತಾಯಿ ಎಂದುಕೊಳ್ಳುತ್ತ, ತಮ್ಮ ಹೆತ್ತವರ ಮರ್ಯಾದೆ ಉಳಿಯಲಿ ಎನ್ನುವ ಕಾರಣಕ್ಕೆ ಅನಾಮಿಕರಂತೆ ಬದುಕುತ್ತ ಸಮಾಜದ ಕಣ್ಣಿನಲ್ಲಿ ಕೀಳು ಎನ್ನಿಸಿಕೊಂಡವರೇ.

Advertisement

ಅವಮಾನವೇ ಸಾಧನೆಯ ಮೆಟ್ಟಿಲು
ಏಳೆಂಟು ವರ್ಷದ ಹಿಂದೆ ತಮ್ಮ ಸಮುದಾಯವನ್ನು, ಲೈಂಗಿಕ ವೃತ್ತಿಯನ್ನು ಬಿಟ್ಟು ಹೆತ್ತವರ ಜೊತೆ ಇರಬೇಕೆಂದು ಬಂದ ಅಂಜುವಿನ ಪಯಣ ಕಷ್ಟಕರವಾಗಿದ್ದೇ ಆಗಿತ್ತು. ತಂದೆ, ತಮ್ಮನ ಒತ್ತಾಸೆ ಅವರ ಬದುಕಿಗೆ ಬೇರೆಯದೇ ಮುನ್ನುಡಿ ಬರೆಯಿತು. ತಮ್ಮನ ಮನೆಯಲ್ಲಿ ಆಶ್ರಯ ಪಡೆದ ಅವರು ದುಡಿಮೆಗಾಗಿ, ಈ ಸಮುದಾಯದ ವೃತ್ತಿಯೆಂದೇ ಪರಿಗಣಿಸಿರುವ ಬದಾಯಿಯನ್ನು ಆಶ್ರಯಿಸಿದರು. ಆದರೆ, “ದುಡಿದು ತಿನ್ನಕ್ಕಾಗಲ್ವ ನಿಮಗೆ?’ ಎನ್ನುವ ಜನರ ತಿರಸ್ಕಾರದ ಚುಚ್ಚುಮಾತು ಅವರ ಬದುಕಿನ ದಾರಿಯನ್ನೇ ಬದಲಿಸಿತು. ನಾನೂ ಏನಾದರೂ ಮಾಡಲೇಬೇಕು ಎನ್ನುವ ಹಠಕ್ಕೆ ಬಿದ್ದರು. 

ಸರ್ಕಾರದ ಯೋಜನೆಯಡಿಯಲ್ಲಿ ಅರ್ಜಿ ಹಾಕಿ ತಮ್ಮ ಪಾಲಕರಿಂದ ಬಂದಿದ್ದ ಜಾಗದಲ್ಲಿ ಪುಟ್ಟ ಮನೆ ಕಟ್ಟಿಕೊಂಡರು. ಪಶುಪಾಲನೆಯ ತರಬೇತಿ ಪಡೆದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಿಕ್ಕ 20 ಸಾವಿರ ಪ್ರೋತ್ಸಾಹ ಧನದಿಂದ ಒಂದು ಹಸು ಖರೀದಿಸಿದರು. ಆದರೆ, ಅದೇಕೋ ಏನೋ, ಹಸು ಇದ್ದಕ್ಕಿದ್ದಂತೆ ಸತ್ತು ಹೋಯ್ತು. “ನಿಮ್ಮಂಥವರೆಲ್ಲ ಹಸು ಸಾಕಿದ್ರೆ ಹೀಗೇ ಆಗೋದು’- ಊರಿನವರ ಬಿರುನುಡಿ ಮತ್ತೆ ಎದುರಾಯಿತು. ಆದರೆ, ಅಸಾಧ್ಯವನ್ನು ಸಾಧ್ಯವಾಗಿಸುವ ಸಂಕಲ್ಪ ಅದಾಗಲೇ ತೊಟ್ಟಾಗಿತ್ತಲ್ಲ? ಅದರಂತೆಯೇ ಮತ್ತೆ ಸಾಲ ಮಾಡಿ, ಹೆತ್ತವರ ಸಹಾಯ ಪಡೆದು, ಮತ್ತೆ ನಾಲ್ಕು ಹಸು ತಂದರು. ಹೈನುಗಾರಿಕೆ ಆರಂಭಿಸಿದರು. ದಿನಕ್ಕೆ 35 ಲೀ. ಹಾಲನ್ನು ಡೈರಿಗೆ ಹಾಕತೊಡಗಿದರು. 

ಕೈ ಹಿಡಿದ ಭೂಮ್ತಾಯಿ
ದಿನವಿಡೀ ದುಡಿತ, ಒಂಟಿ ಬದುಕು ಅಂಜುವಿಗೆ ಸಾಕು ಎನ್ನಿಸಿತ್ತು. ಆದರೆ, ದುಡಿಯುವ ಛಲ ಕುಗ್ಗಿರಲಿಲ್ಲ. ಆಗ ಅವರು ಮುಖ ಮಾಡಿದ್ದು ತಂದೆಯಿಂದ ಬಂದಿದ್ದ ಎರಡು ಎಕರೆ ಜಮೀನಿನತ್ತ. ಮೊದಲಿಗೆ 8 ಗುಂಟೆಯಲ್ಲಿ 158 ಚೀಲ ಜೋಳ, ಅವರೇಕಾಯಿ ಬೆಳೆದು ಕೃಷಿ ಇಲಾಖೆಯವರಿಂದ ಸೈ ಎನ್ನಿಸಿಕೊಂಡರು. ಆನಂತರ ಹಿಂತಿರುಗಿ ನೋಡಲಿಲ್ಲ. ಸಮಾನಮನಸ್ಕ ಸ್ನೇಹಿತೆಯರ ಬೆಂಬಲದಿಂದ ಪಕ್ಕದಲ್ಲೇ ಇದ್ದ ಎರಡೂವರೆ ಎಕರೆ ಜಮೀನನ್ನು ಗುತ್ತಿಗೆಗೆ ಪಡೆದರು. ಒಬ್ಬರಿಗೊಬ್ಬರು ಕೈ ಜೋಡಿಸುತ್ತ ದುಡಿದರು. ವರ್ಷವಿಡೀ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುವ ಈ ಸ್ನೇಹಿತೆಯರು ಮಳೆಗಾಲದಲ್ಲಿ ಜೊತೆಯಾಗುತ್ತಾರೆ. 3 ತಿಂಗಳು ಪೂರ್ತಿ, ಕಳೆ ಕೀಳುವುದರಿಂದ ಹಿಡಿದು ಬೆಳೆ ಕಟಾವಿನವರೆಗೆ ಹೊಲದಲ್ಲಿ ಒಟ್ಟಾಗಿ ದುಡಿಯುತ್ತಾರೆ. ಬಟಾಣಿ, ಆಲೂಗಡ್ಡೆ, ಅವರೆ, ಶೇಂಗಾ ಬೆಳೆಯುತ್ತಾರೆ. 

ನೊಂದವರಿಗೆ “ಮಡಿಲು’
ಇವರ ಈ ಸ್ನೇಹ ಇಲ್ಲಿಗೇ ನಿಲ್ಲುವುದಿಲ್ಲ. ಮಂಗಳಮುಖೀಯರ ನೆರವಿಗಾಗಿ “ಮಡಿಲು’ ಸೇವಾ ಸಂಸ್ಥೆಯನ್ನು ಆರಂಭಿಸಿದ್ದಾರೆ. ಆ ಮೂಲಕ ಹೊಸದಾಗಿ ತಮ್ಮ ಸಮುದಾಯಕ್ಕೆ ಸೇರ್ಪಡೆಯಾಗುವವರಿಗೆ ಕೌನ್ಸೆಲಿಂಗ್‌ನ ನೀಡಿ, ಕರಾಳ ಬದುಕಿನಿಂದ ಕಾಪಾಡುವ ಕಾಳಜಿ, ಜವಾಬ್ದಾರಿ ಇವರದ್ದು. ಜೊತೆಯಲ್ಲಿಯೇ ಎಚ್‌ಐವಿ ಸಮಸ್ಯೆ, ರೇಷನ್‌ ಕಾರ್ಡು, ಆಧಾರ್‌ ಕಾರ್ಡು ಹೀಗೆ ತಮ್ಮ ಸಮುದಾಯದವರಿಗೆ ನೆಮ್ಮದಿಯ ಹಾಗೂ ಗೌರವಯುತ ಜೀವನ ಸಾಗಿಸಲು ಬೇಕಾದ ಎಲ್ಲ ಸೌಲಭ್ಯಗಳನ್ನೂ ನೀಡುವ ಸಂಕಲ್ಪ ಇವರದ್ದು. ಮಡಿಲು ಸಂಸ್ಥೆ, ಮಡಿಕೇರಿಯ ಪ್ರವಾಹ ಸಂತ್ರಸ್ತರಿಗೆ 25 ಸಾವಿರ ರೂ. ದೇಣಿಗೆ ಸಂಗ್ರಹಿಸಿ ನೀಡಿರುವುದು, ಈ ತಂಡದ ಸಾಮಾಜಿಕ ಕಳಕಳಿಗೆ ಸಾಕ್ಷಿ.

ಭಿಕ್ಷೆ ಅಲ್ಲಾರೀ, ಸಂಪ್ರದಾಯ
ಕೆಲಸಕ್ಕೆ ಅರ್ಜಿ ಹಾಕೋದಕ್ಕೆ ಮಾರ್ಕ್ಸ್ ಕಾರ್ಡ್‌ ಬೇಕು ಅಂತಾರೆ. ಆದ್ರೆ ಅದರಲ್ಲಿ ನಮ್ಮ ಈಗಿನ ಹೆಸರು ಇರೋದಿಲ್ಲ. ಸ್ಕೂಲಿಗೆ ಹೋಗಿ ಕೇಳಿದ್ರೆ, ಅದು ನೀವೇ ಅನ್ನೋದಕ್ಕೆ ಗ್ಯಾರಂಟಿ ಏನು ಅಂತ ಕೇಳ್ತಾರೆ. ಅದೂ ಅಲ್ಲದೇ, ನಮ್ಮಲ್ಲಿ ಬಹಳ ಜನ ಊರು ಬಿಟ್ಟು ಬಂದವರಿರುತ್ತಾರೆ. ಅವರಿಗೆಲ್ಲ ಎಲ್ಲಿ ಮಾಕ್ಸ್ ಕಾರ್ಡ್‌ ಇರುತ್ತೆ? ಬದಾಯಿಯನ್ನು ಸರ್ಕಾರ ಭಿಕ್ಷಾಟನೆ ಎನ್ನುತ್ತದೆ. ಆದರೆ, ಅದು ನಮ್ಮ ಸಂಪ್ರದಾಯ. ಹಣ ಪಡೆದು ಆಶೀರ್ವದಿಸುವುದು ನಮ್ಮ ಸಮುದಾಯದ ಮುಖ್ಯ ಲಕ್ಷಣಗಳಲ್ಲಿ ಒಂದು. 

ಯಾವತ್ತೂ ಇವರೆಲ್ಲ ಬೇರೆಯವರು ಅನ್ನಿಸಿಲ್ಲ. ತಮ್ಮ ಪಾಡಿಗೆ ತಾವು ಇರ್ತಾರೆ, ಕಷ್ಟಪಟ್ಟು ದುಡೀತಾರೆ, ನಮ್ಮೆಲ್ಲರ ಜೊತೆ ಪ್ರೀತಿಯಿಂದ ಮಾತಾಡ್ತಾರೆ. 
– ದೊರೆ, ಹುಲಿ ತಿಮ್ಮಾಪುರದ ನೀರುಗಂಟಿ

ಅಂಜುವನ್ನ ಸಣ್ಣವನಿದ್ದಾಗಿನಿಂದ ನೋಡಿದ್ದೇವೆ. ಉಮೇಶ ಅಂತ ಅವನ ಹೆಸರು. ಮೊದಲಿಗೆ ಅಂವ ಬಂದಾಗ ಸ್ವಲ್ಪ ವಿಚಿತ್ರ ಅನ್ನಿಸ್ತು. ಆದರೆ, ಬರ್ತಾ ಬರ್ತಾ ಆತ್ಮೀಯತೆ ಬೆಳೆಯಿತು. ಈಗ ಅವಳು ನಮ್ಮನೆಗೆಲ್ಲ ಬರ್ತಾ ಇರ್ತಾಳೆ. 
 ಗೀತಾ ಮತ್ತು ಚಿಕ್ಕತಾಯಮ್ಮ, ಗ್ರಾಮದ ಮಹಿಳೆಯರು

ಏನೇ ಮಾಡಿದ್ರೂ ನಮ್ಮನ್ನು ಸಮಾಜ ಅನುಮಾನದಿಂದಲೇ ನೋಡುತ್ತೆ. ಸರ್ಕಾರಿ ಕಚೇರಿಯಲ್ಲೂ ವಿಚಿತ್ರವಾಗಿ ನಡೆಸಿಕೊಳ್ತಾರೆ. ಅದಕ್ಕೆ, ನಮ್ಮ ಸಮುದಾಯದವರು ಯಾರೇ ಸತ್ತರೂ, ಅವರಿಗೆ ಚಪ್ಪಲಿಯಲ್ಲಿ ಹೊಡೆದು, “ಹೋಗು ಇನ್ನು ಈ ಜನ್ಮ ಎತ್ತಿ ಬರಬೇಡ. ಈ ಜನ್ಮದಲ್ಲಿ ಅನುಭವಿಸಿದ್ದೇ ಸಾಕು’ ಅಂತ ಹೇಳ್ತೀವಿ.
ಅಂಜು, ಕೃಷಿಕ ಮಂಗಳಮುಖಿ

ದೀಪ್ತಿ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next