ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ವಿನಾಕಾರಣ ಸರ್ಕಾರಿ ಕಚೇರಿಗಳಿಗೆಅಲೆದಾಡಿಸಿದರೆ ಅಥವಾ ಲಂಚ ನೀಡಲುಒತ್ತಾಯಿಸಿದರೆ ಕೂಡಲೇ ಭ್ರಷ್ಟಾಚಾರ ನಿಗ್ರಹ ದಳಕ್ಕೆದೂರು ಸಲ್ಲಿಸಬೇಕೆಂದು ಎಸಿಬಿ ಡಿವೈಎಸ್‌ಪಿ ಪ್ರವೀಣ್ ಕುಮಾರ್ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ನಾಗರಿಕರ ಕುಂದು ಕೊರತೆಗಳ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಹಜವಾಗಿ ಕಂದಾಯ ಇಲಾಖೆ, ಭೂಮಾಪನಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಬರುತ್ತಿವೆ ಎಂದು ಹೇಳಿದರು.
ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ: ಅಧಿಕಾರಿಗಳು ಮತ್ತು ಸಿಬ್ಬಂದಿ ಕಾನೂನು ಚೌಕಟ್ಟಿನಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು, ಒಂದು ವೇಳೆ ಕಾನೂನು ಚೌಕಟ್ಟಿನಲ್ಲಿ ಮಾಡಲು ಸಾಧ್ಯವಿಲ್ಲದಿದ್ದ ಪಕ್ಷದಲ್ಲಿ ಹಿರಿಯ ಅ ಧಿಕಾರಿಗಳಿಗೆ ಮಾಹಿತಿ ನೀಡಿ ಸಾರ್ವಜನಿಕರಿಗೆ ಹಿಂಬರಹ ನೀಡಬೇಕೆಂದು ಸಲಹೆ ನೀಡಿದರು.
ನಿರ್ಭೀತಿಯಿಂದ ದೂರು ಸಲ್ಲಿಸಿ: ಜಿಲ್ಲೆಯಲ್ಲಿ ಯಾವುದೇ ಇಲಾಖೆಗೆ ಸಂಬಂಧಿಸಿದ ಅಧಿ ಕಾರಿಗಳ ಭ್ರಷ್ಟಾಚಾರದ ಕುರಿತು ಏನಾದರೂ ದೂರುಗಳಿದ್ದಲ್ಲಿ ಎಸಿಬಿಗೆ ಮೊಬೈಲ್‌ನ ಮೂಲಕ ಅಥವಾ ಲಿಖೀತವಾಗಿ ನಿರ್ಭೀತಿಯಿಂದ ದೂರು ಸಲ್ಲಿಸಿ ಪರಿಹಾರವನ್ನು ಕಂಡುಕೊಳ್ಳಬಹುದು. ಸಮಾಜದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ನಾಗರಿಕರ ಸಹಕಾರ ಅತ್ಯಗತ್ಯಎಂದು ವಿವರಿಸಿದರು.
ಅಧಿಕಾರಿಗಳ ವಿರುದ್ಧ ಸಲ್ಲಿಸುವ ದೂರುಗಳ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನೊಂದವರಿಗೆ ನ್ಯಾಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ 8 ಅರ್ಜಿ ಸ್ವೀಕರಿಸಿ ಅದನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಕ್ರಮ ಕೈಗೊಳ್ಳುವುದಾಗಿ ಎಸಿಬಿ ಡಿವೈಎಸ್‌ಪಿ ಪ್ರವೀಣ್ ಕುಮಾರ್ ಭರವಸೆ ನೀಡಿದರು.
ಸಭೆಯಲ್ಲಿ ಎಸಿಬಿ ಇನ್‌ಸ್ಪೆಕ್ಟರ್ ರವಿಕುಮಾರ್, ಇನ್‌ಸ್ಪೆಕ್ಟರ್ ಹರೀಶ್, ಉಪತಹಶೀಲ್ದಾರ್ ಎನ್.ನಾಗರಾಜ್, ತಾಲೂಕು ಕಚೇರಿಯ ರಾಧಾ ಮತ್ತಿತರರು ಉಪಸ್ಥಿತರಿದ್ದರು.