Advertisement

ಅರಣ್ಯಗಳ್ಳರ ಮೇಲೆ ಐಪಿಸಿ ಸೆಕ್ಷನ್‌ನಡಿ ದೂರು ದಾಖಲಿಸಿ

02:21 PM Jul 03, 2019 | Suhan S |

ಬ್ಯಾಡಗಿ: ಸಮೃದ್ಧ ಅರಣ್ಯಗಳ ನಾಶಕ್ಕೆ ಮನುಷ್ಯನ ದುರಾಸೆಯೇ ಕಾರಣ. ಆದರೆ, ಸರ್ಕಾರಗಳಿಂದ ಇಂಥ ಮನಸ್ಥಿತಿ ಬದಲಾವಣೆ ಅಸಾಧ್ಯ. ಕನಿಷ್ಟ ಕಾನೂನಿನ ಬಿಗಿಯಲ್ಲಾದರೂ ಅರಣ್ಯಗಳ್ಳರನ್ನು ಮಟ್ಟಹಾಕಬೇಕು, ಐಪಿಸಿ ಸೆಕ್ಷನ್‌ನಡಿ ದೂರು ದಾಖಲಿಸಿಕೊಂಡು ಶಿಕ್ಷೆಯಾಗುವಂತಹ ವ್ಯವಸ್ಥೆ ಜಾರಿಯಾದಲ್ಲಿ ಮಾತ್ರ ಪರಿಣಾಮಕಾರಿಯಾಗಲು ಸಾಧ್ಯ ಎಂದು ಮುಖ್ಯಶಿಕ್ಷಕ ಎಂ.ಎನ್‌.ಚಳಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತಾಲೂಕಿನ ಹಿರೇಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್‌ನ ವತಿಯಿಂದ ಜರುಗಿದ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ಸದ್ಯದ ಪರಿಸ್ಥಿತಿ ಅವಲೋಕಿಸಿ ನಮ್ಮಿಂದ ಕಿಂಚಿತ್ತಾದರೂ ದೇಶಕ್ಕೆ ಅಥವಾ ಸಮಾಜಕ್ಕೆ ಅನುಕೂಲವಾಗುವಂತಹ ಸಾರ್ವತ್ರಿಕ ಯೋಚನೆಗಳನ್ನು ಮಾಡಲು ಯಾರೂ ಸಿದ್ಧರಿಲ್ಲ. ಜಾರಿಯಲ್ಲಿರುವ ಒಟ್ಟು ಕಾನೂನುಗಳ ಪೈಕಿ ಶೇ.17 ರಷ್ಟು ಮಾತ್ರ ಪಾಲನೆಯಾಗುತ್ತಿದೆ. ಕಾನೂನು ವಿರೋಧಿ ಚಟುವಟಿಕೆಗಳಿಂದ ದಾಖಲಿಸಲ್ಪಟ್ಟ ದೂರುಗಳಿಂದ ನ್ಯಾಯಾಲಯಗಳು ತುಂಬಿ ತುಳುಕುತ್ತಿವೆ. ಕಾನೂನಿನ ಬಿಗಿ ಹಿಡಿತವಿಲ್ಲದಿದ್ದರೇ ಭಾರತದಂತಹ ರಾಷ್ಟ್ರದಲ್ಲಿ ಎನೊಂದು ವ್ಯವಸ್ಥೆಯನ್ನು ಸುಗಮಗೊಳಿಸಲು ಸಾಧ್ಯವಿಲ್ಲ. ಹೀಗಿರುವಾಗ ಬಿಗಿಯಾದ ಕಾನೂನಿಲ್ಲದೇ ಅರಣ್ಯಗಳನ್ನು ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದರು.

ಹೆಚ್ಚಾಗುತ್ತಿರುವ ಅರಣ್ಯ ನಾಶ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದಿಂದಲೂ ಕಟ್ಟುನಿಟ್ಟಿನ ಕ್ರಮಗಳಾಗಬೇಕಾಗಿದೆ, ಸುತ್ತಲಿನ ಪರಿಸರವನ್ನು ಕಾಯ್ದು ಕೊಳ್ಳುವುದಷ್ಟೇ ಅಲ್ಲ, ಜೊತೆಗೆ ಗಿಡಮರಗಳನ್ನು ಬೆಳೆಸುವುದು, ಪಾಲನೆ ಪೋಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಬೇಕು. ಅರಣ್ಯ ಸಂರಕ್ಷಣೆ ಎಂಬುದು ಕೇವಲ ಘೋಷಣೆಗೆ ಸೀಮಿತವಾಗುತ್ತಿದ್ದು, ನಿತ್ಯವೂ ನಡೆಯುತ್ತಿರುವ ಮರಗಳ ಮಾರಣ ಹೋಮ ಮಾತ್ರ ಸ್ಥಗಿತಗೊಂಡಿಲ್ಲ. ದೇಶದ ಜನರು ಪ್ರಾಕೃತಿಕ ಸಂಪತ್ತಿನ ಬಗ್ಗೆ ತಿರಸ್ಕಾರ ಮನೋಭಾವನೆ ತೋರುತ್ತಿರುವುದು ತರವಲ್ಲ ಎಂದರು.

ಎಸ್‌ಡಿಎಂಸಿ ಸದಸ್ಯ ವೀರಣ್ಣ ಮಾತನಾಡಿ, ಜಗತ್ತಿನ ಹಲವಾರು ನಗರಗಳಲ್ಲಿ ಇಂದು ನೀರಿಲ್ಲದೇ ಜನರು ಸಾವನ್ನಪ್ಪುತ್ತಿದ್ದಾರೆ. ಅಂತರ್ಜಲ ಮಟ್ಟ ಕುಸಿತಕ್ಕೆ ಅರಣ್ಯಗಳ ನಾಶವೇ ಕಾರಣವಾಗಿದೆ. ಅದರಲ್ಲಿ ಬೃಹತ್‌ ಮರಗಳ ಮಾರಣಹೋಮ ಪ್ರಮುಖ ಕಾರಣವಾಗಿದ್ದು, ಅಭಿವೃದ್ಧಿ ಹೆಸರಿನಲ್ಲಿ ಹೀನಕೃತ್ಯ ಮಾಡುವುದು ನಿಲ್ಲಬೇಕು. ಇತ್ತೀಚಿನ ತಾಪಮಾನ ಶೇ. 44ರ ಗಡಿ ದಾಟುತ್ತಿದ್ದು, ಇಂದು ಅಪಾಯದ ಮುನ್ಸೂಚನೆ. ನೂರಾರು ವರ್ಷಗಳಿಂದ ಹಸಿರಾಗಿದ್ದ ವಾತಾವರಣ ಬರಡಾಗುತ್ತಿದೆ. ಮನೆಗೊಂದು ಸಸಿ ನೆಡುವ ಮೂಲಕ ಪರಿಸರದ ಸಮತೋಲನ ಕಾಪಾಡಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಸುಮಾರು 25 ಕ್ಕೂ ಹೆಚ್ಚು ಚೆರ್ರಿ ಗಿಡಗಳ ತೋಟದ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಎಸ್‌ಡಿಎಂಸಿ ಸದಸ್ಯ ಹುಚ್ಚಪ್ಪ, ಊರಿಯ ಮುಖಂಡರಾದ ಗಣೇಶಣ್ಣ ಬಣಕಾರ, ಮಂಜಪ್ಪ ದಿಡಗೂರ, ಗಣೇಶಣ್ಣ ಚಿಕ್ಕಳ್ಳಿ, ಭಾವಲಿಂಗಯ್ಯ ಹಿರೇಮಠ, ಶಿಕ್ಷಕರಾದ ಅಶೋಕ ನಾಯಕ, ಶಿವಯೋಗಿ ರೂಗಿ, ಗಂಗಾಧರ ಬಡಂಕರ, ಎಚ್.ಭಜಂತ್ರಿ, ಪರಮೇಶ ಉಪ್ಪಣಸಿ ಇನ್ನಿತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next