ಮೈಸೂರು: ಶುದ್ಧ ನೀರು ಘಟಕಗಳ ನಿರ್ವಹಣೆ ವಿಚಾರದಲ್ಲಿ ಉದಾಸೀನತೆ ತೋರಿರುವ ಕಂಪೆನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದರ ಜೊತೆಗೆ ಆ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸೂಚನೆ ನೀಡಿದರು. ಜಿಪಂ ಸಭಾಂಗಣದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಕುಡಿವ ನೀರಿನ ವಿಚಾರದಲ್ಲಿ ಯಾರೂ ಸಹ ತಾತ್ಸಾರ ಮಾಡಬಾರದು. ಜಿಲ್ಲೆಗೆ ಈವರೆಗೆ 661 ಶುದ್ಧ ನೀರಿನ ಘಟಕಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, 574 ಘಟಕಗಳು ನಿರ್ಮಾಣಗೊಂಡಿವೆ. ಇವುಗಳಲ್ಲಿ 486 ಘಟಕಗಳು ಸುಸ್ಥಿತಿಯಲ್ಲಿವೆ. 88 ಘಟಕಗಳು ದುರಸ್ತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ 486 ಘಟಕಗಳು ಸುಸ್ಥಿತಿಯಲ್ಲಿರಲು ಸಾಧ್ಯವಿಲ್ಲ.
ಈಗಲೇ ಸ್ಥಳ ಪರಿಶೀಲನೆಗೆ ಹೊರಡೋಣ 486 ಘಟಕಗಳು ಸುಸ್ಥಿತಿಯಲ್ಲಿರುವುದನ್ನು ತೋರಿಸಿ ಎಂದು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಅಧಿಕಾರಿಗಳು ದುರಸ್ತಿ ಜವಾಬ್ದಾರಿ ನೀಡಿರುವ ಕಂಪೆನಿಯು ಘಟಕಗಳನ್ನು ಸೂಕ್ತ ರೀತಿಯಲ್ಲಿ ದುರಸ್ತಿ ಮಾಡಿಸುತ್ತಿಲ್ಲ. ಹೀಗಾಗಿ ಘಟಕಗಳು ಕೆಟ್ಟುಹೋಗಿವೆ ಎಂದು ಮಾಹಿತಿ ನೀಡಿದರು. ಈ ವೇಳೆ ಕೆಂಡ ಮಂಡಲರಾದ ಸಚಿವರು, ಕುಡಿವ ನೀರಿನ ವಿಚಾರಲ್ಲಿ ಈ ರೀತಿ ತಾತ್ಸಾರ ಮಾಡುವ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸುವುದಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಸೂಚಿಸಿದರು.
ಕೆರೆ ಅಭಿವೃದ್ಧಿಗೆ ಸೂಚನೆ: ಜಿಲ್ಲೆಯಲ್ಲಿ ಕೈಗೆತ್ತುಕೊಂಡಿರುವ 800 ಕೆರೆಗಳ ಪುನಃಶ್ಚೇತನ ಕೆಲಸವನ್ನು ನರೆಗಾದಡಿ ಕೈಗೆತ್ತುಕೊಂಡು ಮಳೆ ಗಾಲ ಆರಂಭವಾಗುವ ಮುನ್ನವೆ ಪೂರ್ಣ ಗೊಳಿಸಬೇಕು. ಆಗ ಮಳೆ ಬಂದ ನಂತರ ಕೆರೆಗಳಿಗೆ ನೀರು ಹರಿದು ಕೆರೆಗಳು ತುಂಬುತ್ತವೆ. ಅಂತರ್ಜಲ ವೃದ್ಧಿಯಾಗುತ್ತದೆ ಎಂದರು.
ಶೌಚಾಲಯ ನಿರ್ಮಾಣ ವಿಳಂಬ: ಜಿಲ್ಲೆಯಲ್ಲಿ ಒಟ್ಟು 51 ಸಾರ್ವಜನಿಕ ಶೌಚಾ ಲಯ ನಿರ್ಮಾಣವಾಗಬೇಕಿದೆ. ಇವುಗಳಲ್ಲಿ 43 ಕ್ಕೆ ಅನುಮೋದನೆ ದೊರೆತಿದೆ. 2 ನಿರ್ಮಾಣಗೊಂಡು ಕಾರ್ಯ ನಿರ್ವಹಿಸುತ್ತಿವೆ. ಕಳೆದ ಎರಡು ವರ್ಷಗಳಿಂದ ಏಕೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಲ್ .ನಾಗೇಂದ್ರ, ಹರ್ಷವರ್ಧನ್, ಅಶ್ವಿನ್ ಕುಮಾರ್, ಡೀಸಿ ಅಭಿರಾಂ ಜಿ. ಶಂಕರ್, ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಇದ್ದರು.
ಸಿದ್ದು, ಜಿಟಿಡಿ ಕಾಲೆಳೆದ ಈಶ್ವರಪ್ಪ: ಯಾವ್ಯಾವುದೊ ವಿಚಾರಕ್ಕೆ ಜಟಾಪಟಿ ಮಾಡಿಕೊಳ್ಳುವ ಜಿಟಿಡಿ ಹಾಗೂ ಸಿದ್ದರಾಮಯ್ಯ, ತಮ್ಮ ಕ್ಷೇತ್ರದ ನೀರಿನ ವಿಚಾರದಲ್ಲಿ ಏಕೆ ಗುದ್ದಾಟ ಮಾಡಿಕೊಂಡಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು. ಬಹು ಗ್ರಾಮ ಕುಡಿವ ನೀರು ಯೋಜನೆ ಪ್ರಗತಿಪರಿಶೀಲನೆ ವೇಳೆ ರಾಜಕೀಯ ಹಾಗೂ ಇನ್ನಿತರ ವಿಚಾರಗಳಿಗೆ ಹೋರಾಡುವ ಸಿದ್ದರಾಮಯ್ಯ, ಜಿ.ಟಿ. ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಡಿಯುವ ನೀರು ಕೊಡಿಸಲು ಏಕೆ ಪರಸ್ಪರ ಹೋರಾಟ ಮಾಡಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೆ ನಿಮ್ಮ ಕಾಲದಲ್ಲಿ ಕುಡಿಯುವ ನೀರಿನ ಯೋಜನೆ ಸಾಕಾರಗೊಳ್ಳದಿದ್ದರೂ ಪರವಾಗಿಲ್ಲ ಅದನ್ನು ನಾವು ಮಾಡಿ ತೋರಿಸುತ್ತೇವೆ ಎಂದು ಚಟಾಕಿ ಹಾರಿಸಿದರು.