Advertisement

ಭಯ ಬೇಡ, ಎಚ್ಚರಿಕೆ ಇರಲಿ: ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆಗೆ ಧುರೀಣರ ಸಲಹೆ

01:56 AM Oct 05, 2020 | Hari Prasad |

ಕೋವಿಡ್ 19 ಸೋಂಕು ಬಗ್ಗೆ ನಿರ್ಲಕ್ಷ್ಯ ಮಾಡ ಬೇಡಿ, ಮಾಸ್ಕ್ ಧರಿಸಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ… ಇದು ಕೋವಿಡ್ 19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಮನೆಗೆ ವಾಪಸ್‌ ಆಗಿರುವ ರಾಜ್ಯದ ಜನಪ್ರತಿನಿಧಿಗಳ ಸಲಹೆ.

Advertisement

ಸೋಂಕಿಗೆ ತುತ್ತಾದ ಮೇಲೆ ಐಸೋಲೇಶನ್‌ಗೆ ಒಳಗಾಗುವ ಸಂದರ್ಭ ಒಂಟಿತನ ಕಷ್ಟವೆನಿಸುತ್ತದೆ. ನಾವು ಕೋವಿಡ್ 19 ಎದುರಿಸಿ ಗೆದ್ದು ಬಂದಿದ್ದೇವೆ. ನೀವೂ ಸೋಂಕಿಗೊಳಗಾದರೆ ಭಯಪಡದಿರಿ, ಆದರೆ ಸೋಂಕು ಅಂಟಿಕೊಳ್ಳದಂತೆ ಎಚ್ಚರ ವಹಿಸಿ ಎಂದು ಹೇಳಿದ್ದಾರೆ ಇವರು.

ಆ ಹತ್ತು ದಿನ ಮರೆಯಲಾಗದು: ಸಿದ್ದರಾಮಯ್ಯ, ವಿಪಕ್ಷ ನಾಯಕ


ನಾನು ಮಧುಮೇಹಿ. ಹೃದಯದ ಶಸ್ತ್ರಚಿಕಿತ್ಸೆಯೂ ಆಗಿದೆ. ಕೋವಿಡ್ 19 ಪಾಸಿಟಿವ್‌ ಬಂದ ಕೂಡಲೇ ಸ್ವಲ್ಪ ಭಯವಾಯಿತಾದರೂ ಧೈರ್ಯ ತಂದುಕೊಂಡೆ. ವೈದ್ಯರ ಸಲಹೆ, ಸೂಚನೆಗಳನ್ನು ಚಾಚೂತಪ್ಪದೆ ಪಾಲಿಸಿದೆ. ವೈದ್ಯರು ಹತ್ತು ದಿನ ಆಸ್ಪತ್ರೆಯಲ್ಲೇ ಇರಬೇಕು ಎಂದು ಹೇಳಿದರು.

ಆಸ್ಪತ್ರೆಯಲ್ಲಿ ಕಳೆದ ಆ ಹತ್ತು ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಆಗ ನೆರವಿಗೆ ಬಂದದ್ದು ಪತ್ರಿಕೆಗಳು, ಪುಸ್ತಕಗಳು. ಕೋವಿಡ್ 19 ವಾಸಿಯಾಗದ ಕಾಯಿಲೆ ಏನಲ್ಲ. ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಕಾಪಾಡುವ ಮೂಲಕ ಸೋಂಕಿನಿಂದ ದೂರ ಇರಬಹುದು. ಅನ್ಯ ಕಾಯಿಲೆಗಳಿದ್ದವರು ಎಚ್ಚರದಿಂದ ಇರಬೇಕು.

ನಿಯಂತ್ರಣ ಶಕ್ತಿ ಜನರಲ್ಲೇ ಇದೆ: ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ


ಕೋವಿಡ್ 19 ಬಗ್ಗೆ ನಿರ್ಲಕ್ಷ್ಯ ತೋರಬಾರದು. ನೆಗಡಿ, ಕೆಮ್ಮಿನಂಥ ರೋಗಲಕ್ಷಣಗಳು ಕಾಣಿಸಿಕೊಂಡರೆ ತತ್‌ಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ರೋಗವನ್ನು ನಿಯಂತ್ರಿಸುವ ಶಕ್ತಿ ಜನರಲ್ಲಿ ಮಾತ್ರ ಇದೆ. ರೋಗದ ಲಕ್ಷಣ ಕಂಡುಬಂದ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ನೂರರಲ್ಲಿ ಒಂದೆರಡು ತಪ್ಪುಗಳಿರಬಹುದು; ಆದರೆ ಶೇ.99ರಷ್ಟು ವೈದ್ಯರು ಕೋವಿಡ್ 19 ನಿಯಂತ್ರಣಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಈ ರೋಗದ ನಿಯಂತ್ರಣ ಜನರ ಕೈಯಲ್ಲಿಯೇ ಇದೆ. ಜನರೇ ನಿಯಂತ್ರಣಕ್ಕೆ ಮನಸ್ಸು ಮಾಡಬೇಕು.

Advertisement

ವೈದ್ಯರ ಸೂಚನೆ ಪಾಲಿಸಿ: ನಳಿನ್‌ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ


ಕೆಲವು ವಾರಗಳ ಹಿಂದೆ ನನಗೂ ಕೋವಿಡ್ 19 ಸೋಂಕು ಬಾಧಿಸಿತ್ತು. ಮುನ್ನೆಚ್ಚರಿಕೆ ವಹಿಸಿ ಆಸ್ಪತ್ರೆಗೆ ದಾಖಲಾಗಿದ್ದೆ. ವೈದ್ಯರ ಪ್ರತೀ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿದ್ದೆ. ಸೂಕ್ತ ಚಿಕಿತ್ಸೆಯ ಬಳಿಕ ಗುಣಮುಖನಾಗಿದ್ದೇನೆ. ನನ್ನ ಅನುಭವದಂತೆ ಕೋವಿಡ್ 19 ಸೋಂಕು ಲಕ್ಷಣ ಕಂಡುಬಂದ ತತ್‌ಕ್ಷಣ ತಪಾಸಣೆಗೆ ಒಳಪಡಬೇಕು. ಸೋಂಕು ದೃಢಪಟ್ಟರೆ, ವೈದ್ಯರ ಸೂಚನೆಗಳನ್ನು ಪಾಲಿಸಬೇಕು. ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಎಲ್ಲರೂ ಪಾಲಿಸಬೇಕು. ಆ ಮೂಲಕ ಕೋವಿಡ್ 19 ಸೋಕನ್ನು ಸಂಪೂರ್ಣ ನಿಯಂತ್ರಿಸುವುದಕ್ಕೆ ರಾಜ್ಯದ ಪ್ರತಿಯೊಬ್ಬ ನಾಗರಿಕ ತನ್ನ ಜವಾಬ್ದಾರಿ ಪ್ರದರ್ಶಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next