ಮುಂಬಯಿ: ಹೃತಿಕ್ ರೋಷನ್ – ದೀಪಿಕಾ ಪಡುಕೋಣೆ ಅಭಿನಯದ ʼಫೈಟರ್ʼ ಸಿನಿಮಾ ಥಿಯೇಟರ್ ನಲ್ಲಿ ಯಶಸ್ಸಾಗಿ ಸಾಗುತ್ತಿರುವ ಬೆನ್ನಲ್ಲೇ ಚಿತ್ರತಂಡಕ್ಕೆ ಕಾನೂನು ಸಂಕಷ್ಟ ಎದುರಾಗಿದೆ.
ಸಿದ್ದಾರ್ಥ್ ಆನಂದ್ ನಿರ್ದೇಶನದ ʼಫೈಟರ್ʼ ವಾಯಪಡೆಯ ಕಥೆಯನ್ನೊಳಗೊಂಡಿದೆ. ಸಿನಿಮಾದಲ್ಲಿ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪ್ಯಾಟಿ ಪಠಾನಿಯಾ ಆಗಿ ಹೃತಿಕ್ ಕಾಣಿಸಿಕೊಂಡಿದ್ದು, ದೀಪಿಕಾ ಸ್ಕ್ವಾಡ್ರನ್ ಲೀಡರ್ ಮಿನಲ್ ಮಿನ್ನಿ ರಾಥೋಡ್ ಆಗಿ ಕಾಣಿಸಿಕೊಂಡಿದ್ದಾರೆ.
ದೀಪಿಕಾ ಹಾಗೂ ಹೃತಿಕ್ ವಾಯುಪಡೆ ಸಮವಸ್ತ್ರ ಧರಿಸಿ ಕಿಸ್ಸಿಂಗ್ ಮಾಡಿರುವ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸಿನಿಮಾದಿಂದ ಈ ದೃಶ್ಯವನ್ನು ತೆಗೆದುಹಾಕುವಂತೆ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ.
ಅಸ್ಸಾಂನ ವಾಯುಪಡೆಯ ಅಧಿಕಾರಿ ಸೌಮ್ಯ ದೀಪ್ ದಾಸ್ ಅವರು ಚಿತ್ರ ತಂಡದ ವಿರುದ್ಧ ನೋಟಿಸ್ ನೀಡಿದ್ದು, ಈ ದೃಶ್ಯವು ಭಾರತೀಯ ವಾಯುಪಡೆಗೆ ಅವಮಾನವಾಗಿದೆ ಎಂದು ಹೇಳಿದ್ದಾರೆ.
ಭಯೋತ್ಪಾದಕ ದಾಳಿಯ ನಂತರದ ಘಟನೆಗಳ ಮೂಲಕ ಕಥೆ ಸಾಗುತ್ತದೆ. ಕಥೆ ಮುಂದುವರೆದಂತೆ, ನಾಯಕ – ನಾಯಕಿಯ ಪ್ರೀತಿಯೂ ಮುಂದುವರೆಯುತ್ತದೆ. ಈ ವೇಳೆ ಒಂದು ದೃಶ್ಯದಲ್ಲಿ ವಾಯುಪಡೆಯ ಸಮವಸ್ತ್ರದಲ್ಲೇ ಇದ್ದು ಕಿಸ್ ಮಾಡುವ ಸನ್ನಿವೇಶ ಬರುತ್ತದೆ. ಈ ದೃಶ್ಯವನ್ನು ಆಕ್ಷೇಪಿಸಿ ನೋಟಿಸ್ ಜಾರಿ ಮಾಡಲಾಗಿದೆ.
ದೀಪಿಕಾ, ಹೃತಿಕ್ ಜೊತೆ ಅನಿಲ್ ಕಪೂರ್ ಕೂಡ ಸಿನಿಮಾದ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೆ ವರ್ಲ್ಡ್ ವೈಡ್ ಸಿನಿಮಾ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.