ಬೆಂಗಳೂರು: ಹೋಟೆಲ್ ಮುಚ್ಚಿಸುವ ವಿಚಾರವಾಗಿ ಹುಳಿಮಾವು ಠಾಣೆ ಪೇದೆ ಮತ್ತು ಮೈಕೋ ಲೇಔಟ್ ಠಾಣೆ ಎಎಸ್‌ಐ ನಡುವೆ ವಾಗ್ವಾದ ನಡೆದ ಘಟನೆ ವರದಿಯಾಗಿದೆ. ಮದ್ಯದ ಅಮಲಿನಲ್ಲಿ ಹುಳಿಮಾವು ಟಾಣೆ ಕಾನ್‌ಸ್ಟೇಬಲ್ ಚಂದ್ರಪ್ಪ ಅವರು ಹಿರಿಯ ಅಧಿಕಾರಿ ಜತೆ ಅನುಚಿತ ವರ್ತನೆ ತೋರಿದ್ದಾರೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆಗ್ನೇಯ ವಿಭಾಗದ ಡಿಸಿಪಿ ಡಾಬೋರಲಿಂಗಯ್ಯ ಆದೇಶಿಸಿದ್ದಾರೆ.
ಮಂಗಳವಾರ ತಡರಾತ್ರಿ 12.30ರ ಸುಮಾರಿಗೆ ಹುಳಿಮಾವು ಠಾಣೆ ಅಪರಾಧ ವಿಭಾಗದ ಕಾನ್ಸ್‌ಟೇಬಲ್ ಚಂದ್ರಪ್ಪ ಮದ್ಯ ಸೇವಿಸಿ ಮಾಫ್ತಿಯಲ್ಲಿ ಓಡಾಡುತ್ತಿದ್ದರು. ಮೈಕೋ ಲೇಔಟ್ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆ ಅರಕೆರೆ ಗೇಟ್ ಬಳಿಯ ಎಂಪೈರ್ ಹೋಟೆಲ್‌ಗೆ ಬಂದು ಬಾಗಿಲು ಮುಚ್ಚುವಂತೆ ಸೂಚಿಸಿದ್ದಾರೆ. ತಡರಾತ್ರಿ 1 ಗಂಟೆವರೆಗೆ ಅವಕಾಶವಿದೆ ಮುಚ್ಚಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಚಂದ್ರಪ್ಪ, ಹೋಟೆಲ್ ಸಿಬ್ಬಂದಿ ಜತ ಜಗಳ ತೆಗೆದಿದ್ದಾರೆ. ಹೋಟೆಲ್ ಸಿಬ್ಬಂದಿ ಕೂಡಲೇ ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಎಎಸ್‌ಐ ಶ್ರೀನಿವಾಸ್ ಅವರು ಕಾನ್‌ಸ್ಟೇಬಲ್ ಚಂದ್ರಪ್ಪ ಕುರಿತು, ಇದು ನಿಮ್ಮ ಠಾಣೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಇಲ್ಲಿ ಬಂದು ಮುಚ್ಚುವಂತೆ ಸೂಚಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಲ್ಲದೆ, ಹೋಟೆಲ್ ನಡೆಸಲು ಮಧ್ಯರಾತ್ರಿ 1 ಗಂಟೆವರೆಗೆ ಅವಕಾಶವಿದೆ. ಆದ್ದರಿಂದ ಇಲ್ಲಿಂದ ತೆರಳಿ
ಎಂದು ಸೂಚಿಸಿದ್ದಾರೆ.
ಆದರೆ, ಮದ್ಯದ ಅಮಲಿನಲ್ಲಿದ್ದ ಚಂದ್ರಪ್ಪ ಎಎಸ್‌ಐ ಶ್ರೀನಿವಾಸ್ ಮೇಲೆಯೇ ಜಗಳಕ್ಕೆ ಬಿದ್ದಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಂದ್ರಪ್ಪನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ತನಿಖೆ ನಡೆಸಿದ ಮೈಕೋ ಲೇಔಟ್ ಠಾಣಾಧಿಕಾರಿ ಅಜಯ್ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದರು.
ಅದರಂತೆ ಚಂದ್ರಪ್ಪ ಅವರನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತು ಮಾಡಲಾಗಿದೆ ಎಂದು ಡಿಸಿಪಿ ಬೋರಲಿಂಗಯ್ಯ ಹೇಳಿದ್ದಾರೆ.