ಬೆಂಗಳೂರು: ಮೊಬೈಲ್ ಒಡೆದು ಹಾಕಿದ್ದಕ್ಕೆ ಆಕ್ರೋಶಗೊಂಡು ಪರಿಚಿತನ ಕತ್ತಿಗೆ ಇರಿದು ಕೊಲೆ ಮಾಡಿದ ಮೂವರು ಆರೋಪಿಗಳು ಸಂಪಿಗೆಹಳ್ಳಿ ಠಾಣೆಗೆ ಶರಣಾಗಿದ್ದಾರೆ.
ಅರ್ಕಾವತಿ ಬಡಾವಣೆಯ ನಿವಾಸಿ ಫಾರೂಖ್ ಖಾನ್ (21) ಕೊಲೆಯಾದವ. ಸುಹೈಲ್ ಖಾನ್, ಮುಬಾರಕ್ ಹಾಗೂ ಅಲಿ ಅಕ್ರಮ್ ಬಂಧಿತರು.
ಪೊಲೀಸರ ಒಡನಾಟ ಹೊಂದಿದ್ದ ಫಾರೂಕ್ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ ಸುಹೈಲ್‌ನಿಂದ 10 ಸಾವಿರ ರೂ. ಪಡೆದಿದ್ದ. 10 ಸಾವಿರ ರೂ. ಹಿಂತಿರುಗಿಸುವಂತೆ ಸುಹೈಲ್ ಕೇಳಿದ್ದಕ್ಕೆ ಫಾರೂಖ್ ಸ್ನೇಹಿತ ಸದ್ದಾಂ ಸುಹೈಲ್ ನ ಮೊಬೈಲ್ ಅನ್ನು ಕಸಿದುಕೊಂಡು ಒಡೆದು ಹಾಕಿದ್ದ. ಮೊಬೈಲ್ ಹಿಂದಿರುಗಿಸುವಂತೆ ಸುಹೈಲ್ ಸಾಕಷ್ಟು ಬಾರಿ ಫಾರೂಖ್‌ಗೆ ಮನವಿ ಮಾಡಿದರೂರೂ ಆತ ಮೊಬೈಲ್ ಕೊಡದೇ ಸತಾಯಿಸುತ್ತಿದ್ದ. ಇದರಿಂದ ಆಕ್ರೋಶಗೊಂಡ ಸುಹೈಲ್ ಸೆ.17ರಂದು ತನ್ನ ಸ್ನೇಹಿತರಾದ ಮುಬಾರಕ್, ಅಲಿ ಅಕ್ರಮ್ ಜತೆಗೆ ಆಟೋವೊಂದರಲ್ಲಿ ಬಂದು ಮಾತನಾಡಿಸುವ ನೆಪದಲ್ಲಿ ಫಾರೂಖ್‌ನನ್ನು ಅರ್ಕಾವತಿ ಲೇಔಟ್‌ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಫಾರೂಕ್‌ಗೆ ಹೆದರಿಸಲೆಂದು ಆತನ ಕೈಗೆ ಚೂರಿಯಿಂದ ಇರಿದಿದ್ದರು. ಫಾರೂಕ್ ಪ್ರತಿರೋಧಿಸಿದಾಗ ತಪ್ಪಿ ಆತನ ಕುತ್ತಿಗೆಗೆ ಬಳಿ ಚಾಕು ಇರಿದಿದ್ದರು. ಗಾಯಗೊಂಡು ನರಳುತ್ತಿದ್ದ ಫಾರೂಕ್ ಬದುಕಿದರೂ ತಮ್ಮ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗುತ್ತದೆ ಎಂದು ಮೂವರು ಚೂರಿಯಿಂದ ಇರಿದು ಫಾರೂಖ್‌ನನ್ನು ಹತ್ಯೆ ಮಾಡಿದ್ದರು. ಬಳಿಕ ಅರ್ಕಾವತಿ ಕಾಲುವೆಯ ಸಮೀಪದಲ್ಲಿ ಫಾರೂಖ್ ಶವ ಎಸೆದಿದ್ದರು.
ಆರೋಪಿಗಳು ಠಾಣೆಗೆ ಶರಣು: ಇತ್ತ ಸುಹೈಲ್ ಮತ್ತಿತರ ಆರೋಪಿಗಳೊಂದಿಗೆ ತೆರಳಿದ್ದ ತನ್ನ ಫಾರೂಖ್ ಕಾಣೆಯಾಗಿರುವುದಾಗಿ ಸೆ.18ರಂದು ಆತನ ಸಹೋದರ ಶಬ್ಬೀರ್ ಅಹಮದ್ ಸಂಪಿಗೆಹಳ್ಳಿ ಠಾಣೆಗೆ ದೂರಿತ್ತಿದ್ದರು. ಇದರ ಬೆನ್ನಲ್ಲೇ ಮೂವರು ಆರೋಪಿಗಳೂ ಸಂಪಿಗೆಹಳ್ಳಿ ಠಾಣೆಗೆ ಬಂದು ಶರಣಾಗಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿ ಸುಹೈಲ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರೆ, ಮುಬಾರಕ್ ಪ್ಲಂಬಿಗ್ ಕೆಲಸ ಮಾಡುತ್ತಿದ್ದ. ಅಲಿ ಅಕ್ರಮ ಆಟೋ ಬಾಡಿಗೆಗೆ ಓಡಿಸುತ್ತಿದ್ದ. ಕೊಲೆಯಾದ ಫಾರೂಖ್ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ. ಫಾರೂಖ್ ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿರುವುದಾಗಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.