Advertisement

ರೇವಣ್ಣ –ಡಿಕೆಶಿ ಕೆಎಂಎಫ್ ಫೈಟ್‌

03:45 AM Feb 08, 2017 | Team Udayavani |

ಬೆಂಗಳೂರು: ಕ್ಯಾಬಿನೆಟ್‌ ಸಚಿವ ಸ್ಥಾನಕ್ಕಿಂತಲೂ ಹೆಚ್ಚು ಪ್ರಾಮುಖ್ಯತೆ ಯನ್ನು ಪಡೆದಿರುವ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ ಶಾಸಕ ಎಂ.ಪಿ. ರವೀಂದ್ರ ಅವರಿಗೆ ಹಸ್ತಾಂತರಿಸದೇ ಸತಾಯಿಸುತ್ತಿರುವ ಹಾಲಿ ಅಧ್ಯಕ್ಷ ನಾಗರಾಜ್‌ ಹಿಂದೆ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ಅವರ ಕುಮ್ಮಕ್ಕು ಇದೆ ಎಂದು ಹೇಳಲಾಗಿದೆ.

Advertisement

ಕೆಎಂಎಫ್ನ್ನು ದಶಕಕ್ಕಿಂತಲೂ ಹೆಚ್ಚು ಕಾಲ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ರೇವಣ್ಣ ಹೇಗಾದರೂ ಮಾಡಿ ಮತ್ತೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಾಜಕೀಯ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದ್ದು, ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರ ಆಪ್ತನಾದ ಕೆಎಂಎಫ್ ಅಧ್ಯಕ್ಷ ನಾಗರಾಜ್‌ ಅವರನ್ನು ಮರಳಿ ಜೆಡಿಎಸ್‌ಗೆ ಸೆಳೆಯಲು ಬಲೆ ಬೀಸಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾವುದೇ ಕಾರಣಕ್ಕೂ ಎಂ.ಪಿ. ರವೀಂದ್ರ ಅವರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರ ಮಾಡಬಾರದು, ಅವಿಶ್ವಾಸ ನಿರ್ಣಯ ಮಂಡಿಸಿದರೂ ಜೆಡಿಎಸ್‌ನ ಬೆಂಬಲ ನೀಡುವುದಾಗಿ ರೇವಣ್ಣ ನಾಗರಾಜ್‌ ಗೆ ಧೈರ್ಯ ತುಂಬಿದ್ದಾರೆ ಎಂದು ಹೇಳಲಾಗಿದೆ. ರೇವಣ್ಣ ಅವರ ಬೆಂಬಲದಿಂದಲೇ ನಾಗರಾಜ್‌ ಅವರು ಕೆಎಂಎಫ್ ಸ್ಥಾನ ಬಿಟ್ಟುಕೊಡದೇ 5 ತಿಂಗಳಿಂದ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ. 

ರೇವಣ್ಣ ಲೆಕ್ಕಾಚಾರ: ಹನ್ನೊಂದು ಸಾವಿರ ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸುವ ಕೆಎಂಎಫ್ ಆಡಳಿತವನ್ನು ಮತ್ತೆ ತಮ್ಮ ನಿಯಂತ್ರಣಕ್ಕೆ ಪಡೆಯಬೇಕು ಎಂಬುದು ರೇವಣ್ಣ ಅವರ ಕಾರ್ಯತಂತ್ರ. ಹೀಗಾಗಿ ಅಧ್ಯಕ್ಷ ನಾಗರಾಜ್‌ಗೆ ಮಾಗಡಿ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಕೊಡುವ ಬಗ್ಗೆ ಆಮಿಷ ಒಡ್ಡಿರುವ ರೇವಣ್ಣ, ಕೆಎಂಎಫ್ನಲ್ಲೇ ಉಳಿಯುವಂತೆ ಷರತ್ತು ಹಾಕಿದ್ದಾರೆ ಎನ್ನಲಾಗಿದೆ. 

ಡಿಕೆಶಿ ಕಾರ್ಯತಂತ್ರ: ರೇವಣ್ಣ ಅವರ ಈ ವಿಚಾರ ಅರಿತಿರುವ ಇಂಧನ ಸಚಿವ ಡಿ. ಕೆ. ಶಿವಕುಮಾರ್‌ ಅವರು, ನಾಗರಾಜ್‌ ಜೆಡಿಎಸ್‌ನತ್ತ ವಾಲದಂತೆ ಪ್ರತಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಶಾಸಕ ರವೀಂದ್ರಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಹಸ್ತಾಂತರಿಸಿದರೆ, ಮುಂದೆ ರಾಮನಗರದಿಂದ ಜೆಡಿಎಸ್‌ನ ಕುಮಾರಸ್ವಾಮಿ ವಿರುದ್ದವೇ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ಕೊಡಿಸುವುದಾಗಿ ಡಿಕೆಶಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. 

Advertisement

ಆದರೆ ಈ ಎರಡು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡಿರುವ ನಾಗರಾಜ್‌ ಅವರು, ಹಿತೈಶಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಡಿಕೆಶಿ ಆಫ‌ರ್‌ಗೆ ಒಪ್ಪಿದರೆ ಕೆಎಂಎಫ್ ಅಧ್ಯಕ್ಷ ಸ್ಥಾನ ರವೀಂದ್ರ ಅವರಿಗೆ ಹೋಗಲಿದೆ ಅಥವಾ ರೇವಣ್ಣ ಅವರ ಆಮಿಷಕ್ಕೆ ಒಪ್ಪಿಗೆ ನೀಡಿದರೆ ಅವಿಶ್ವಾಸ ನಿರ್ಣಯಕ್ಕೆ ಒಳಗಾಗಿ ಪದಚ್ಯುತಗೊಳ್ಳುವ ಸನ್ನಿವೇಶ ಬರಲಿದೆ ಎಂದೇ ಹೇಳಲಾಗಿದೆ.

ಈ ರಾಜಕೀಯ ಬೆಳವಣಿಗೆಗಳ ಮಧ್ಯೆ, ಎಂ ಪಿ ರವೀಂದ್ರ ಅವರು ಕೆಎಂಎಫ್ ಅಧ್ಯಕ್ಷ ಸ್ಥಾನದ ಬದಲು ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಒತ್ತಡ ಹೇರಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆಯೇ ಸಿಎಂ ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಡಿಸಲು ಸಾಧ್ಯವಾಗದಿದ್ದರೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಎಂಟತ್ತು ಶಾಸಕರು ಸಿಎಂ ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಯುವ ಶಾಸಕರಾದ ವಿಜಯಾನಂದ ಕಾಶಪ್ಪನವರ, ಹುಣಸೂರು ಮಂಜುನಾಥ, ಪ್ರಿಯಾ ಕೃಷ್ಣ ಸೇರಿದಂತೆ ಯುವ ಶಾಸಕರ ಗುಂಪು ಅಧಿವೇಶನ ನಡೆಯುವ ಸಮಯದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಎಂ.ಪಿ.ರವೀಂದ್ರ ಪರ ಬ್ಯಾಟಿಂಗ್‌ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next