ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಲಾಡ್ಜ್ ನಲ್ಲಿ ಇಬ್ಬರು ತೃತೀಯ ಲಿಂಗಿಗಳು ಹಾಗೂ ಯುವಕನೊಬ್ಬ ಪರಸ್ಪರ ಹೊಡೆದಾಡಿ ಕೊಂಡಿದ್ದು, ಮೂವರೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಜಯನಗರದ ಮೂಡಲಪಾಳ್ಯದ ನಿವಾಸಿಗಳಾದ ತೃತೀಯ ಲಿಂಗಿಗಳಾದ ಸಂಜನಾ (28), ಅರ್ಚನಾ (30) ಹಾಗೂ ಅಂಕಿತ್ ಕುಮಾರ್ (28) ಗಾಯಗೊಂಡವರು.
ಸಂಜನಾ ಹಾಗೂ ಅರ್ಚನಾ ಮೆಜೆಸ್ಟಿಕ್ ಬಳಿ ಭಿಕ್ಷಾಟನೆ ನಡೆಸುತ್ತಿದ್ದರೆ, ಅಂಕಿತ್ ಕುಮಾರ್ ನಗರದ ಆಸ್ಪತ್ರೆಯೊಂದರ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಮೇ 13ರಂದು ತಡರಾತ್ರಿ ಅಂಕಿತ್ ಕುಮಾರ್ ಮೆಜೆಸ್ಟಿಕ್‌ನಲ್ಲಿ ಸಂಜನಾ ಹಾಗೂ ಅರ್ಚನಾ ಪರಿಚಯವಾಗಿದ್ದರು. ಲೈಂಗಿಕ ಸಂಪರ್ಕದ ಉದ್ದೇಶದಿಂದ ಅಂಕಿತ್ ಕುಮಾರ್ ಜತೆಗೆ ಇಬ್ಬರೂ ಕಾಟನ್ ಪೇಟೆಯ ಲಾಡ್ಜ್ ಗೆ ತೆರಳಿದ್ದರು.
ಆದರೆ, ಅಲ್ಲಿ ಹಣಕಾಸಿನ ವಿಚಾರವಾಗಿ ಅಂಕಿತ್ ಹಾಗೂ ತೃತೀಯ ಲಿಂಗಿಗಳ ನಡುವೆ ಜಗಳವಾಗಿತ್ತು. ಜಗಳ ತಾರಕಕ್ಕೇರಿದಾಗ ಅಂಕಿತ್ ತನ್ನ ಬಳಿಯಿದ್ದ ಚೂರಿಯಿಂದ ಇಬ್ಬರು ತೃತೀಯ ಲಿಂಗಿಗಳ ಕತ್ತು, ಹೊಟ್ಟೆ, ಕೈ, ಕಾಲಿಗೆ ಇರಿದು ಗಾಯಪಡಿಸಿದ್ದ. ಇದಕ್ಕೆ ಪ್ರತಿಯಾಗಿ ಸಂಜನಾ ಹಾಗೂ ಅರ್ಚನಾ ಸಹ ಅಂಕಿತ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಲ್ಲೆಗೊಳಗಾದವರು ರೂಂನಲ್ಲಿ ಜೋರಾಗಿ ಕಿರುಚಾಡುತ್ತಿದ್ದ ಶಬ್ದ ಕೇಳಿ ಲಾಡ್ಜ್ ನ ರೂಂಬಾಯ್ ಬಂದು ನೋಡಿದಾಗ ಮೂವರೂ ಅಸ್ವಸ್ಥರಾಗಿ ಬಿದ್ದಿರುವುದು ಕಂಡು ಬಂದಿತ್ತು. ನಂತರ ಲಾಡ್ಜ್ ಸಿಬ್ಬಂದಿ ಕೂಡಲೇ ಮೂವರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕನ ವಿರುದ್ಧ ಎಫ್‌ಐಆರ್: ಗಾಯಗೊಂಡಿರುವ ತೃತೀಯ ಲಿಂಗಿಯರ ಸ್ನೇಹಿತೆ ಕಸ್ತೂರಿ ರೆಡ್ಡಿ ಕೊಟ್ಟ ದೂರಿನ ಆಧಾರದ ಮೇರೆಗೆ ಕಾಟನ್‌ಪೇಟೆ ಪೊಲೀಸರು ಅಂಕಿತ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನು ವಿಷಯ ತಿಳಿದು ಶನಿವಾರ ವಿಕ್ಟೋರಿಯಾ ಆಸ್ಪತ್ರೆ ಬಳಿ ಜಮಾಯಿಸಿದ ಹಲವು ತೃತೀಯ ಲಿಂಗಿಗಳು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.