ಬೆಳಗಾವಿ: ಅಧಿವೇಶನ ಒಳಗೆ ದಿನಗೂಲಿ, ಕ್ಷೇಮಾಭಿವೃದ್ಧಿ ಹಾಗೂ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಿ ಖಾಯಂ ಮಾಡದಿದ್ದರೆ ಅಧಿವೇಶನ ವೇಳೆ ಬೆಂಗಳೂರಿನಲ್ಲಿ ಧರಣಿ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ಸಂಸ್ಥಾಪಕ ಕೆ.ಎಸ್. ಶರ್ಮಾ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂರೂ ವರ್ಗದ ನೌಕರರನ್ನು ಖಾಯಂಗೊಳಿಸುವ ಮೂಲಕ ಭದ್ರತೆ ಒದಗಿಸುವ ಕೆಲಸ ಮಾಡಬೇಕು. ಈಗಾಗಲೇ ಪಂಜಾಬ ಸೇರಿದಂತೆ ಇತರೆ ರಾಜ್ಯಗಳಲ್ಲಿ ಖಾಯಂಗೊಳಿಸಲಾಗಿದ್ದು, ಇದನ್ನು ಕರ್ನಾಟಕದಲ್ಲೂ ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.
ಸರಕಾರಕ್ಕೆ ದಿನಗೂಲಿ ನೌಕರರ ಸಮಸ್ಯೆ ಹೊಸದಲ್ಲ. ಈಗಾಗಲೇ ವಿವಿಧ ಹಂತದ ಹೋರಟದ ಮೂಲಕ ನಮ್ಮ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಆದರೂ ಸಹ ಇದುವರೆಗೆ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸುತ್ತಿಲ್ಲ. ಬದಲಾಗಿ ಅವರನ್ನು ವಿವಿಧ ಕಾರಣ ಹೇಳಿ ಕೆಲಸದಿಂದ ವಜಾ ಮಾಡಲಾಗುತ್ತಿದ್ದು ಈ ಕುಟುಂಬಗಳು ಆತಂಕದ ಸ್ಥಿತಿ ಎದುರಿಸುತ್ತಿವೆ. ಆದ್ದರಿಂದ ಸರಕಾರ ಕೂಡಲೇ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂದು ಶರ್ಮಾ ಹೇಳಿದರು.
ಹೊರ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಬಾರದು. ಯಾವುದಾದರೂ ಇಲಾಖೆಯಲ್ಲಿ ಕೆಲಸದಿಂದ ತೆಗೆದಿದ್ದರೆ ಅವರನ್ನು ತಕ್ಷಣವೇ ಪೂರ್ವಾನ್ವಯವಾಗುವಂತೆ ಮರು ನೇಮಕ ಮಾಡಬೇಕು. ಪ್ರತಿ ತಿಂಗಳು 5ನೇ ತಾರೀಖೀನೊಳಗೆ ಸಂಬಳ ಬಟವಡೆ ಮಾಡಬೇಕು. ಪಿಎಫ್., ಇಎಸ್‌ಐ ಜಾರಿಗೊಳಿಸಬೇಕು ಎಂದರು.
1ನೇ ಏಪ್ರಿಲ್ 2018ರಿಂದ 6ನೇ ವೇತನ ಆಯೋಗದ ಸೌಲಭ್ಯ ನೀಡಬೇಕು. ಶೇ. 100ರಷ್ಟು ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ನೀಡಬೇಕು. ಹೊಸ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಗ್ರ್ಯಾಚ್ಯುಟಿ ಕಾಯ್ದೆಯನ್ನು 15-12-2013ರಿಂದ ಜಾರಿಗೊಳಿಸಬೇಕು. ಈಗಾಗಲೇ ಮೈಸೂರು ಹಾಗೂ ಕಲಬುರ್ಗಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ನಮ್ಮ ಸಮಸ್ಯೆಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ನಂತರ ನಗರದ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಮಹಾಮಂಡಳ ಸದಸ್ಯರು, ನೌಕರರ ವಿವಿಧ 34 ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು. ಈ ಬಗ್ಗೆ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಕೂಡಲೇ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರು ಚನ್ನಮ್ಮ ವೃತ್ತದಿಂದ ಮೆರವಣಿಗೆ ಮೂಲಕ ಆಗಮಿಸಿ, ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ದಿನಗೂಲಿ, ಹೊರಗುತ್ತಿಗೆ ಹಾಗೂ ಕ್ಷೇಮಾಭಿವೃದ್ಧಿ ನೌಕರರು ಪ್ರತಿಭಟನೆಗೆ ಬಂದಿದ್ದರಿಂದ ಈ ಪ್ರದೇಶದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು.
ವಿಭಾಗೀಯ ಸಂಚಾಲಕ ಶಿವಣ್ಣ ಹತ್ತಿ, ಜಿಲ್ಲಾಧ್ಯಕ್ಷ ರಮೇಶ ಕಾತರಕಿ, ವಿ.ಜಿ. ಸೊಪ್ಪಿಮಠ, ಬಸವರಾಜ ಕೊಂಗಿ, ರಾಮಚಂದ್ರ ಸಾಳುಂಕೆ, ಎಂ.ಎಲ್.ಕುಲಕರ್ಣಿ ಸೇರಿ ವಿವಿಧ ಜಿಲ್ಲೆಗಳ ನೂರಾರು ದಿನಗೂಲಿ ನೌಕರರು ಭಾಗವಹಿಸಿದ್ದರು.