Advertisement

ಹರಕೆ ಕುರಿಯಲ್ಲ ಗೆಲ್ಲಲೆಂದೇ ಫೈಟ್‌: ಮೀರಾ ಕುಮಾರ್‌ ಖಡಕ್‌ ಹೇಳಿಕೆ

03:45 AM Jul 02, 2017 | |

ಬೆಂಗಳೂರು: “”ಯಾರಾದರೂ ಒಬ್ಬರು ಸೈದ್ಧಾಂತಿಕ ವಿಚಾರಗಳಿಗಾಗಿ, ಆತ್ಮಸಾಕ್ಷಿಯ ಅನುಗುಣವಾಗಿ ಹೋರಾಟ ನಡೆಸುತ್ತಿದ್ದಾರೆ ಎಂದರೆ, ಅವರನ್ನು ಹರಕೆಯ ಕುರಿ ಎಂದು ಕರೆಯಲು ಸಾಧ್ಯವಿಲ್ಲ. ನಾನು ಪಕ್ಕಾ ಹೋರಾಟಗಾರ್ತಿ, ನನಗೆ ಗೊತ್ತಿದೆ, ಮುಂದೆ ನನ್ನ ಹೋರಾಟಕ್ಕೆ ಇನ್ನೂ ಹಲವರು ಬೆಂಬಲ ಕೊಡುತ್ತಾರೆ.” ಇದು ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್‌ ಅವರ ಅಭಿಮತ.

Advertisement

ಮತಯಾಚನೆಗಾಗಿ ಬೆಂಗಳೂರಿಗೆ ಬಂದಿದ್ದ ಅವರು, ಕೇಂದ್ರ ಸಚಿವ ರಾಮ್‌ದಾಸ್‌ ಅಠಾವಳೆ ಅವರ, ಹರಕೆಯ ಕುರಿ ಹೇಳಿಕೆಗೆ ಖಡಕ್ಕಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. “”ನಾನು ಹೋದ ಕಡೆಯಲ್ಲೆಲ್ಲಾ ಸೋಲುವುದು ಗೊತ್ತಿದ್ದೇ ಸ್ಪರ್ಧೆಗೆ
ಇಳಿದಿದ್ದೀರಿ, ನಿಮ್ಮ ಕಡೆ ನಂಬರ್‌ ಇಲ್ಲ ಎಂದು ಕೇಳುತ್ತಾರೆ. ಹಾಗಾದರೆ, ನಾನು ಸ್ಪರ್ಧೆಯಿಂದ ಹಿಂದೆ ಸರಿಯಲೇ? ನಂಬರ್‌ ಅತ್ತ ಕಡೆಯೇ ಇದೆ ಎಂದಾದ ಮೇಲೆ ಈ ಚುನಾವಣೆ ಏಕೆ ಬೇಕು? ಫ‌ಲಿತಾಂಶ ಘೋಷಿಸಿಯೇ ಬಿಡಬಹು ದಲ್ಲ,” ಎಂದು ಮೀರಾಕುಮಾರ್‌ ಆಕ್ರೋಶ ಭರಿತರಾಗಿ ಪ್ರಶ್ನಿಸಿದ್ದಾರೆ.

ಇದು ಸೋಲು ಗೆಲುವಿನ ಹೋರಾಟಕ್ಕಿಂತ ಸಿದ್ಧಾಂತಕ್ಕಾಗಿ ಹೋರಾಟ. ಕಾಂಗ್ರೆಸ್‌ ಸೇರಿದಂತೆ 17 ಪ್ರತಿಪಕ್ಷಗಳು ನನ್ನನ್ನು ಅಭ್ಯರ್ಥಿ ಯನ್ನಾಗಿ ಆಯ್ಕೆ ಮಾಡಿವೆ. ಕಾಂಗ್ರೆಸ್‌ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದು, ಸಮಾ
ಜದ ಪರಿವರ್ತನೆಗಾಗಿ ಹೋರಾಟ ಮುಂದುವರೆಯಲಿದೆ ಎಂದರು.

ಈಗಾಗಲೇ ದೇಶದ ಎಲ್ಲ ಶಾಸಕರು ಮತ್ತು ಸಂಸದರಿಗೆ “ನೀವು ಐತಿಹಾಸಿಕ ಘಟನೆಗೆ ಸಾಕ್ಷಿಯಾಗುತ್ತಿದ್ದೀರಿ. ಈ ಸಂದರ್ಭದಲ್ಲಿ ನಿಮಗೆ ಜಾತ್ಯತೀತ ತತ್ವದಲ್ಲಿ ನಂಬಿಕೆ ಉಳ್ಳವರು ಬೇಕೋ ಅಥವಾ ಅದರ ವಿರುದದ್ಧ ಸಿದ್ದಾಂತ ಹೊಂದಿರುವವರು ಬೇಕೋ ಎನ್ನುವುದನ್ನು ನಿಮ್ಮ ಆತ್ಮ ಸಾಕ್ಷಿಗನುಗುಣವಾಗಿ ಮತ ಚಲಾಯಿಸಿ’ ಎಂದು ಪತ್ರ ಬರೆದಿದ್ದೇನೆ. ಅಲ್ಲದೇ, ನಾನು ಸಾಬರಮತಿಯಿಂದ ಚುನಾವಣಾ ಪ್ರಚಾರಕಾರ್ಯ ಆರಂಭಿಸಿದ್ದೇನೆ. ದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದು, ಅದೇ ತತ್ವಾದರ್ಶಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದೇನೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಪುದುಚೆರಿ, ಕೇರಳ, ಆಂಧ್ರಪ್ರದೇಶ,
ತೆಲಂಗಾಣ,ಒಡಿಶಾ, ಪಶ್ಚಿಮ ಬಂಗಾಳ, ಆಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಮತಯಾಚನೆ ಮಾಡುವುದಾಗಿ ಅವರು ತಿಳಿಸಿದರು. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನೂ ಭೇಟಿ ಮಾಡಿ ಮತ ಯಾಚಿಸುವುದಾಗಿಯೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಹಲವಾರು ವರ್ಷಗಳಿಂದ ವೈಯಕ್ತಿಕವಾಗಿ ಕರ್ನಾಟಕದೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ಕರ್ನಾಟಕ ದೇಶಕ್ಕೆ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದೆ. ದೇಶದಲ್ಲಿ ಪ್ರಗತಿ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಐಟಿ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿದೆ ಎಂದು ಹೇಳಿದರು.

ದಲಿತರ ನಡುವಿನ ಹೋರಾಟವಲ್ಲ: ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ನಾನು ನಾಮಪತ್ರ ಸಲ್ಲಿಕೆ ಮಾಡಿದ ತಕ್ಷಣ ದಲಿತರ ನಡುವೆ ಹೋರಾಟ ಎಂಬ ಚರ್ಚೆ ನಡೆಯುತ್ತಿದೆ. ಇದು ದುರದೃಷ್ಟಕರ ಬೆಳವಣಿಗೆ. ಈ ದೇಶದಲ್ಲಿ ಮೇಲ್ಜಾತಿಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿದಾಗ ಅವರು ಯಾವ ಜಾತಿಯವರು ಎನ್ನುವುದೂ ಯಾರಿಗೂ ತಿಳಿಯಲಿಲ್ಲ. ಈಗ ದಲಿತರಿಬ್ಬರು ಸ್ಪರ್ಧೆ ಮಾಡಿದ ತಕ್ಷಣ ಅವರ ಜಾತಿಯೇ ಮುಖ್ಯವಾಗಿ ಚರ್ಚೆಯಾಗುತ್ತಿದೆ.

ರಾಷ್ಟ್ರಪತಿ ಚುನಾವಣೆಯನ್ನು ದೇಶದ ದೃಷ್ಠಿಯಿಂದ ನೋಡಬೇಕು. ಜಾತಿಗಿಂತ ಅಭ್ಯರ್ಥಿಗಳ ತತ್ವಾದರ್ಶ
ಮತ್ತು ಅರ್ಹತೆ ಮುಖ್ಯವಾಗಿ ಚರ್ಚೆಯಾಗಬೇಕು. 2017 ರಲ್ಲಿಯೂ ಪ್ರಜ್ಞಾವಂತ ಸಮಾಜ ಜಾತಿ ಆಧಾರದಲ್ಲಿಯೇ ನೋಡುತ್ತಿರುವುದು ಸಮಾಜ ದಲಿತ ಜನಾಂಗವನ್ನು ನೋಡುತ್ತಿರುವ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಈ ರೀತಿಯ ಮನಸ್ಥಿತಿ ಹೋಗಬೇಕು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಶಾಸಕರ ಕೊರತೆ: ಯುಪಿಎ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್‌ ಕೆಪಿಸಿಸಿ ಕಚೇರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ವಿಶೇಷ ಶಾಸಕಾಂಗ ಸಭೆ ಕರೆದಿತ್ತು. ಈ ಸಭೆಗೆ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಿದ್ದರೂ, ಬಹುತೇಕ ಶಾಸಕರು ಗೈರು ಹಾಜರಾಗಿದ್ದರು. ಶಾಸಕರು,ಸಂಸದರು, ರಾಜ್ಯ ಸಭಾ ಸದಸ್ಯರು ಸೇರಿ ಅರವತ್ತರಿಂದ ಎಪ್ಪತ್ತು ಸದಸ್ಯರು
ಮಾತ್ರ ಉಪಸ್ಥಿತರಿದ್ದರು.

ಹೆಚ್ಚು ಮತ
ಕೊಡಿಸುವ ಭರವಸೆ

ಮೀರಾಕುಮಾರ್‌ಗೆ ರಾಜ್ಯದಿಂದ ಉತ್ತಮ ಬೆಂಬಲ ಮತ್ತು ಹೆಚ್ಚಿನ ಮತಗಳು ದೊರೆಯುವಂತೆ ನೋಡಿಕೊಳ್ಳುವುದಾಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ 124 ಕಾಂಗ್ರೆಸ್‌ ಶಾಸಕರಿದ್ದಾರೆ. ಅಲ್ಲದೇ ಐವರು ಸಹ ಸದಸ್ಯರು ಮತ್ತು ಏಳು ಜನ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಬಂಡಾಯ ಶಾಸಕರಿದ್ದಾರೆ. ಅವರ ಮತಗಳು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗೆ ಬೀಳಲಿವೆ
ಎಂದು ಹೇಳಿದರು.

ದೇವೇಗೌಡರು ದೇಶದ ಅತ್ಯಂತ ದೊಡ್ಡ ವ್ಯಕ್ತಿ, ಅವರು ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿರುವುದು ಸಂತಸ ತಂದಿದೆ. ಖುದ್ದಾಗಿ ಭೇಟಿ ಮಾಡಿ ಜೆಡಿಎಸ್‌ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ.
– ಮೀರಾ ಕುಮಾರ್‌,
ರಾಷ್ಟ್ರಪತಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next