ಕುಕನೂರು: ಇರುವ ಒಂದೇ ಬೋರ್‌ವೆಲ್ ನೀರನ್ನು ತಮ್ಮ ಗ್ರಾಮಕ್ಕೆ ಪೂರೈಸಬೇಕೆಂದು ಒತ್ತಾಯಿಸಿ ರಾಜೂರು ಹಾಗೂ ಆಡೂರು ಗ್ರಾಮಸ್ಥರು ರಾಜೂರು ಗ್ರಾಪಂ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ತಮ್ಮ ಗ್ರಾಮದ ನೀರು ಶುದ್ಧೀಕರಣ ಘಟಕಕ್ಕೆ ನೀರು ಪೂರೈಸಬೇಕೆಂದು ಆಡೂರು ಗ್ರಾಮದ ಗ್ರಾಪಂ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸೋಮವಾರ ಪಂಚಾಯತ್ ಎದುರು ಪ್ರತಿಭಟನೆ ಮಾಡುವ ನಿರ್ಧಾರ ಮಾಡಿದ್ದರು. ಇದನ್ನು ಅರಿತ ತಹಶೀಲ್ದಾರ್ ಹಾಗೂ ತಾಪಂ ಇಒ ಅವರು ಮೇಲಾಧಿಕಾರಿಗಳ ಆದೇಶವಾಗಿದೆ ಎಂದು ತಿಳಿಸಿ ಪೊಲೀಸ್ ಬಂದೋಬಸ್ತ್ನಲ್ಲಿ ಆಡೂರು ಗ್ರಾಮಕ್ಕೆ ಪೂರೈಕೆಯಾಗುವ ನೀರಿನ ಪೈಪ್‌ಲೈನ್ ಮರು ಜೋಡನೆ ಮಾಡಿದರು.
ಇದಕ್ಕೆ ರಾಜೂರು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ಹಿರಿಯ ಅಧಿಕಾರಿಗಳ ಆದೇಶ ಪ್ರತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜೂರುನಿಂದ ಆಡೂರು ಗ್ರಾಮದ ಓವರ್ ಟ್ಯಾಂಕ್‌ಗೆ ಹೋಗುವ ಮಧ್ಯದಲ್ಲಿ ಪ್ರಭಾವಿ ವ್ಯಕ್ತಿಗಳು ತಮ್ಮ ತೋಟಕ್ಕೆ ನೀರು ಬಳಕೆ ಮಾಡಿಕೊಳ್ಳತ್ತಿದ್ದಾರೆ. ಆದ್ದರಿಂದ ಆಡೂರು ಗ್ರಾಮಕ್ಕೆ ನೀರು ಪೂರೈಸದಿರಿ ಎಂದು ರಾಜೂರು ಗ್ರಾಮಸ್ಥರು ಪಟ್ಟು ಹಿಡಿದು ತಡರಾತ್ರಿವರೆಗೂ ಪ್ರತಿಭಟನೆ ನಡೆಸಿದರು. ರಾಜೂರು ಹಾಗೂ ಆಡೂರು ಗ್ರಾಮಗಳ ವ್ಯಾಪ್ತಿಯಲ್ಲಿ ಇತ್ತೀಚಿಗೆ ಕೊರೆಸಿದ 5 ಬೋರ್‌ವೆಲ್ಗಳಲ್ಲಿ ರಾಜೂರು ಗ್ರಾಮದಲ್ಲಿ ಕೊರೆಸಿದ 3ರಲ್ಲಿ ಎರಡಕ್ಕೆ ಹಳೆಯ ಮೋಟರ್ ಅಳವಡಿಸಿ ಬಿಲ್ ಪಡೆಯಲಾಗಿದೆ ಎಂದು ರಾಜೂರು ಗ್ರಾಮಸ್ಥರು ಆರೋಪಿಸಿದರು.
ಹಿನ್ನೆಲೆ: ರಾಜೂರು ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ಶುದ್ಧ ಕುಡಿವ ನೀರಿನ ಘಟಕಕ್ಕೆ ಹಾಗೂ ಆಡೂರು ಗ್ರಾಮಕ್ಕೆ ನೀರು ಪೂರೈಕೆಯಾಗುವ ಒಂದೇ ಪೈಪ್‌ಲೈನ್ ಇರುವ ಕಾರಣ ಆಡೂರು ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ ಎಂದು ಆರೋಪಿಸಿ ಮೂರು ದಿನಗಳ ಹಿಂದೇ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಗ್ರಾಪಂ ಅಧಿಕಾರಿಗಳು ರಾಜೂರು ಗ್ರಾಮಕ್ಕೆ ನೀರು ಪೂರೈಕೆಯಾಗದಂತೆ ಕ್ರಮ ಕೈಗೊಂಡಿದ್ದರು. ಇದರಿಂದ ಆಕ್ರೋಶಗೊಂಡ ಕೆಲ ಕಿಡಿಕೇಡಿಗಳು ಎರಡು ಗ್ರಾಮಕ್ಕೆ ಪೂರೈಕೆ ಮಾಡುವ ಬೋರ್‌ವೆಲ್ನ ಮೋಟರ್ ಹಾಗೂ ಪೈಪ್‌ಲೆನ್‌ನ್ನು ರಾತ್ರಿ ವೇಳೆ ಕಿತ್ತು ಹೋಗಿದ್ದರು. ಈ ಎಲ್ಲ ಬೆಳವಣಿಗೆ ನಂತರ ಅಧಿಕಾರಿಗಳು ಹಾಗೂ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದರು.
ಎರಡು ದಿನದ ಹಿಂದೆ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಬಗೆಹರಿಸಲಾಗಿತ್ತು. ಎರಡು ಗ್ರಾಮಸ್ಥರು ಶಾಸಕರ ಬಳಿ ಹೋಗಿ ಹೊಂದಾಣಿಕೆ ಮಾಡಿಕೊಂಡು ಯಾವುದೇ ತಕರಾರು ಮಾಡುವುದಿಲ್ಲ ಎಂದಿದ್ದಾರೆ. ಈಗ ಗ್ರಾಮಕ್ಕೆ ಬಂದು ಮತ್ತೆ ಸಮಸ್ಯೆ ಸೃಷ್ಟಿಸಿದ್ದಾರೆ
.•ನೀಲಪ್ರಭ, ತಹಶೀಲ್ದಾರ್