ಅನಿರೀಕ್ಷಿತ ಅಪಾಯವೊಂದು ನಡೆಯುತ್ತದೆ ಎಂಬುದನ್ನು ನಮ್ಮ ಹೃದಯ ಹೇಳುತ್ತಿದ್ದರೂ ಅದಕ್ಕೆ ಕಿವಿಗೊಡದೆ ನಮ್ಮ ದಾರಿಯಲ್ಲಿ ನಾವು ಸಾಗುತ್ತೇವೆ. ಎಲ್ಲವೂ ಸರಿ ಇದೆ ಎಂದು ಬಹು ದೂರದವರೆಗೆ ಹೋಗುವವರೆಗೂ ನಮ್ಮ ಅರಿವಿಗೇ ಬರುವುದಿಲ್ಲ. ಆದರೆ ಅಷ್ಟು ಹೊತ್ತಿಗಾಗಲೇ ತುಂಬಾ ವಿಳಂಬವಾಗಿ ಬಿಡುತ್ತದೆ. ಅಲ್ಲಿಂದ ಮತ್ತೆ ಹಿಂದಿರುಗುವುದು ಸವಾಲೇ ಸರಿ.
ಇಂಥ ಒಂದು ವಿಷಯವನ್ನಿಟ್ಟುಕೊಂಡು 2016ರಲ್ಲಿ ತೆರೆಗೆ ಬಂದ ಚಿತ್ರ ಫೈನೆಸ್ಟ್ ಅವರ್. ಕ್ರೇಗ್ ಜಿಲೆಸ್ಪಿ ಅವರ ನಿರ್ದೇಶನದ ಈ ಚಿತ್ರ ರೋಮಾಂಚನಕಾರಿಯಾಗಿದ್ದು, ವೀಕ್ಷಕರಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲವನ್ನುಂಟು ಮಾಡುತ್ತದೆ. ಪ್ರಶಾಂತ ಸಮುದ್ರದಲ್ಲಿ ಮೀನುಗಾರಿಕಾ ಹಡಗೊಂದು ಸಾಗುತ್ತಿದೆ. ಅದರೊಳಗಿದ್ದ ಮೀನುಗಾರರು ಈ ದಿನ ತಮಗೆ ಸಿಕ್ಕಬಹುದಾದ ರಾಶಿ ರಾಶಿ ಮೀನುಗಳ ಕುರಿತು ಸಂತಸದಿಂದಿದ್ದಾರೆ. ಅಂದು ಬೇರೆ ಯಾವ ದೋಣಿಯೂ ಸಮುದ್ರದಲ್ಲಿ ಕಾಣಿಸುತ್ತಿಲ್ಲ. ಅವರದ್ದೊಂದೇ ದೋಣಿ ನೀರಿಗಿಳಿದದ್ದು. ಅದಕ್ಕೆ ಕಾರಣವೂ ಇದೆ.
ಹವಾಮಾನ ವೈಪರೀತ್ಯದಿಂದ ಕಡಲಿಗಿಳಿಯುವುದು ಅಪಾಯಕಾರಿಯೆಂದು ತಜ್ಞರು ಎಚ್ಚರಿಸಿದ್ದರು. ಅದನ್ನು ನಿರ್ಲಕ್ಷಿಸಿ ಆ ಮೀನುಗಾರರು ಯಾವ ವೈಪರೀತ್ಯವೂ ಅಂದು ಕಾಣಿಸಿಕೊಳ್ಳುವುದಿಲ್ಲ ಎಂಬ ಭರವಸೆಯಲ್ಲಿ ಸಮುದ್ರಕ್ಕಿಳಿದಿದ್ದರು. ಅವರು ಅಂದುಕೊಂಡಂತೆಯೇ ಆಗಿತ್ತು.
ಆಗಸದಲ್ಲಾಗಲಿ, ಅಲೆಗಳಲ್ಲಾಗಲಿ ಯಾವ ಮುನ್ಸೂಚನೆಯೂ ಕಾಣಿಸುತ್ತಿರಲಿಲ್ಲ. ಹಾಗೆಂದು ಅವರು ಸಮುದ್ರದಲ್ಲಿ ತುಂಬಾ ದೂರ ಸಾಗಿಬಂದಿದ್ದರು. ಆಗಲೇ ಅವರಿಗೆ ದಿಗಂತದಲ್ಲಿ ದಟ್ಟ ಕಾರ್ಮೋಡ ತಮ್ಮತ್ತ ಮುನ್ನುಗ್ಗಿ ಬರುತ್ತಿರುವುದು ಕಂಡಿತ್ತು. ಆದರೆ ಅದು ದಟ್ಟ ಕಾರ್ಮೋಡ ಮಾತ್ರವೇ ಆಗಿರಲಿಲ್ಲ. ಚಂಡಮಾರುತವಾಗಿತ್ತು.
ಇತ್ತ ಮೀನುಗಾರಿಕಾ ದೋಣಿಯೊಂದು ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿರುವ ಸಂಗತಿ ಊರಿಡೀ ಕಾಳ್ಗಿಚ್ಚಿನಂತೆ ಹಬ್ಬಿತು. ಎಲ್ಲರೂ ಮೀನುಗಾರರ ಕ್ಷೇಮಕ್ಕೆ ಪ್ರಾರ್ಥಿಸಿದರು. ಇತ್ತೀಚಿಗಷ್ಟೇ ಮದುವೆ ಗೊತ್ತಾಗಿದ್ದ ಕೋಸ್ಟ್ ಗಾರ್ಡ್, ಹಿರಿಯ ಅಧಿಕಾರಿಗಳ ವಿರೋಧದ ನಡುವೆಯೂ ದೋಣಿ ಹತ್ತಿ ಹೊರಟು ಬಿಡುತ್ತಾನೆ. ಸಮುದ್ರದಲ್ಲಿ ರಕ್ಕಸ ಅಲೆಗಳಿಗೆ ಎದುರಾಗಿ ಅವನು ಪಡುವ ಪಾಡು ಅಷ್ಟಿಷ್ಟಲ್ಲ. ಇಡೀ ಊರೇ ತನ್ನ ಜನರ ಸುಖಾಗಮನಕ್ಕಾಗಿ ದೇವರಲ್ಲಿ ಮೊರೆಯಿಡುತ್ತಿದ್ದ ಹೊತ್ತಿನಲ್ಲಿ ಇತ್ತ ಪ್ರಕೃತಿಯೊಡನೆ ಮನುಷ್ಯರು ಸೆಣಸಾಡುತ್ತಾರೆ.