Advertisement

ರಾಜಕೀಯ ಶಕ್ತಿ ಬಳಸಿ ನ್ಯಾಯಬದ್ಧ ಹಕ್ಕಿಗಾಗಿ ಹೋರಾಡಿ

04:43 PM Jul 12, 2022 | Team Udayavani |

ಹಿರಿಯೂರು: ಸ್ವಾತಂತ್ರ್ಯಾ ನಂತರ ಬಲಾಡ್ಯರು ಬೆಳೆದಿದ್ದಾರೆ, ದುರ್ಬಲರು ತುಳಿತಕ್ಕೆ ಒಳಗಾಗಿದ್ದು, ನ್ಯಾಯಯುತ ಹಕ್ಕುಗಳಿಂದ ಹಿಂದುಳಿದವರು ವಂಚಿತರಾಗುತ್ತಿದ್ದಾರೆ. ಸಂವಿಧಾನದಲ್ಲಿ ಹೇಳಿರುವಂತೆ ಎಲ್ಲರಿಗೂ ಸಮಬಾಳು, ಸಮಪಾಲು ಸಿಗುತ್ತಿಲ್ಲ. ದುರ್ಬಲ ವರ್ಗಗಳ ಮೇಲಿನ ಶೋಷಣೆ ಇನ್ನೂ ನಿಂತಿಲ್ಲ ಎಂದು ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ವಿಷಾದಿಸಿದರು.

Advertisement

ತಾಲೂಕಿನ ವಾಣಿವಿಲಾಸ ಅಣೆಕಟ್ಟೆ ಮೇಲ್ಭಾಗದ ಪ್ರವಾಸಿಮಂದಿರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರವರ್ಗ-1ಒಕ್ಕೂಟದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾ ಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಶ್ರೀಗಳು ಮಾತನಾಡಿದರು. ರಾಜಕೀಯ ಶಕ್ತಿ ಬಳಸಿಕೊಂಡು ನ್ಯಾಯಯುತ ಹಕ್ಕು ಪಡೆಯಬೇಕು ಎಮದು ಕರೆ ನೀಡಿದರು.

ಒಕ್ಕೂಟದ ರಾಜ್ಯ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್‌ ಮಾತನಾಡಿ, ನಮ್ಮ ಒಕ್ಕೂಟ ಅಲೆಮಾರಿ, ಅರೆ ಅಲೆಮಾರಿ ಜಾತಿಗಳನ್ನು ಒಳಗೊಂಡಂತೆ 95 ಜಾತಿ ಮತ್ತು 376 ಉಪಜಾತಿಗಳ ಸಂಘಟನೆಯಾಗಿದೆ. ಈ ವರ್ಗಕ್ಕೆ ಪ್ರಸ್ತುತ ಇರುವ ಮೀಸಲಾತಿಯನ್ನು ಶೇ. 4ರಿಂದ 8ಕ್ಕೆ ಏರಿಸಬೇಕು ಎಂಬುದು ಮುಖ್ಯ ಬೇಡಿಕೆಯಾಗಿದೆ. ಕಳೆದುಕೊಂಡಿರುವುದನ್ನು ಮರಳಿ ಪಡೆಯಲು ಪಕ್ಷಾತೀತವಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ವಿಧಾನ ಪರಿಷತ್‌ ಸದಸ್ಯ ನಾಗರಾಜ ಯಾದವ್‌ ಮಾತನಾಡಿ, ಎಸ್‌ ಸಿ-ಎಸ್‌ಟಿ ಸಮುದಾಯಗಳಿಗೆ ಸಿಗುತ್ತಿರುವ ಎಲ್ಲಾ ಸೌಲಭ್ಯಗಳು ಪ್ರವರ್ಗ-1ಕ್ಕೂ ಸಿಗಬೇಕು, ವಿಧಾನಸಭೆ ಮತ್ತು ಸಂಸತ್ತಿನಲ್ಲಿ ರಾಜಕೀಯ ಮೀಸಲಾತಿ ನೀಡಬೇಕು.ನಿಗಮ, ಮಂಡಳಿಗಳಿಗೆ ಬಿಡುಗಡೆಯಾಗುವ ಅನುದಾನ, ಆ ಸಮುದಾಯದ ಅಭಿವೃದ್ಧಿಗೆ ವಿನಿಯೋಗವಾಗಬೇಕು ಎಂದು ಒತ್ತಾಯಿಸಿದರು.ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಶಾಸಕ ಲಾಲಾಜಿ ಮೆಂಡನ್‌ ಮಾತನಾಡಿದರು.

ಚಿತ್ರದುರ್ಗದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಕರುಣಾಕರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕೆ.ಎನ್‌.ಲಿಂಗಪ್ಪ ಹಿಂದುಳಿದವರಿಗೆ ಮೀಸಲಾತಿಯಲ್ಲಿ
ಆಗಿರುವ ಅನ್ಯಾಯ ವಿಷಯದ ಕುರಿತು ಉಪನ್ಯಾಸ ನೀಡಿದರು. ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ.ಸಾಬಣ್ಣ ತಳವಾರ್‌, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್‌ ಉಪ್ಪಾರ್‌, ಡಾ| ಹೊನ್ನಪ್ಪ ಬಂಡಿ, ಡಾ| ಪೂರ್ಣಿಮಾ ಜೋಗಿ, ಲೋಕೇಶಪ್ಪ, ಯಾದವ ಸಂಘದ ಹಿರಿಯ ಉಪಾಧ್ಯಕ್ಷ ಸಿದ್ದಪ್ಪ ಮೊದಲಾದವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next