ಕನಕಪುರ: ರಾಮನಗರ ಜಿಲ್ಲೆಗೆ ಬಿಡುಗಡೆ ಯಾದ ಅನುದಾನವನ್ನು ಯಾವುದೇ ಸರ್ಕಾರ ಸ್ಥಗಿತಗೊಳಿಸಿದರೂ, ರಾಜ್ಯ ರೈತ ಸಂಘ ಅಂತಹ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮಣಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಾಲೂಕಿನ ಹಾರೋಹಳ್ಳಿಯಲ್ಲಿ ಮರಳವಾಡಿ ಮತ್ತು ಹಾರೋಹಳ್ಳಿ ಹೋಬಳಿಯ ರೈತ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ರಾಮನಗರ ಜಿಲ್ಲೆಗೆ ಮೀಸಲಾಗಿದ್ದ ನೀರಾವರಿ ಯೋಜನೆ, ಶಾಲಾ ಕಾಲೇಜು ಮತ್ತು ಮೆಡಿಕಲ್ ಕಾಲೇಜು ಸೇರಿದಂತೆ ಸರ್ಕಾರ ಜಿಲ್ಲೆಗೆ ಬಿಡುಗಡೆ ಮಾಡಿದ್ದ ಯೋಜನೆಗಳನ್ನು ಬಿಜೆಪಿ ಸರ್ಕಾರ ಹಿಂಪಡೆಯುವ ಹುನ್ನಾರ ನಡೆಸಿದರೆ ರೈತ ಸಂಘದಿಂದ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳು ರೈತರ ಪರವಾಗಿ ಯೋಚಿಸಲಿ: ರಾಜಕೀಯ ದ್ವೇಷದಿಂದ ಜಿಲ್ಲೆಯ ನೀರಾವರಿ ಮೂಲಕ್ಕೆ ಕೈ ಹಾಕಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡ ಬೇಕಾಗುತ್ತದೆ. ಹಾಗಾಗಿ ರಾಜ್ಯದ ಮುಖ್ಯ ಮಂತ್ರಿಗಳು ರೈತರ ಪರವಾಗಿ ಯೋಚಿಸಬೇಕು ಎಂದು ಎಚ್ಚರಿಕೆ ನೀಡಿದರು. ಆರ್ಥಿಕ ಹಿಂಜರಿತದಿಂದ ಕಾರ್ಮಿಕರ ಕೆಲಸಗಳಿಗೆ ಕುತ್ತು ಬಂದರೆ, ಕೆಲಸ ಕಳೆದುಕೊಂಡರೆ, ಅವರಿಗೆ ಅನ್ಯಾಯವಾದರೆ ಕಾರ್ಮಿಕ ಸಂಘದ ಜೊತೆಗೆ ರೈತ ಸಂಘ ಹೋರಾಟದಲ್ಲಿ ಬಾಗಿಯಾಗಲಿದೆ. ರಫ್ತು ಮತ್ತು ಆಮದು ನೀತಿಯ ತೆರೆಗೆ ಮುಕ್ತಗೊಳಿಸಿ 16 ದೇಶಗಳು ಒಪ್ಪಂದ ಮಾಡಿಕೊಂಡು ಯಾವ ದೇಶದ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂಬ ನೀತಿ ಜಾರಿಯಾದರೆ ಭಾರತ ದೇಶದ ರೈತರ ಮೇಲೆ ದೊಡ್ಡ ಆಘಾತವಾಗಲಿದೆ ಎಂದರು.
ರೈತ ಕುಲಕ್ಕೆ ಹೊಡೆತ: ರಾಜ್ಯದ ರೈತರು ಸಿಲ್ಕ್ಅಂ ಡ್ ಮಿಲ್ಕ್ ಕೃಷಿ ಮತ್ತು ಹೈನುಗಾರಿಕೆ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ ಕೇಂದ್ರ ಸರ್ಕಾರದ ಈ ನಡೆಯಿಂದ ಭಾರತದ ರೈತರ ಬದುಕು ಜರ್ಝರಿತವಾಗಿ ರೈತರು ವ್ಯವಸಾಯವನ್ನು ಬಿಡಬೇಕಾಗುತ್ತದೆ ಎಂಬ ತಜ್ಞರ ಅಭಿಪ್ರಾಯವಿದ್ದರೂ, ಸಹ ಅದನ್ನು ತಿರುಚಿ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಮುಂದಾಗಿತ್ತು. ರೈತರ ಹೋರಾಟದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದೆ ಮತ್ತೆ ಫೆಬ್ರವರಿಯಲ್ಲಿ ನಡೆಯಲಿರುವ ಮತ್ತೂಂದು ಸುತ್ತಿನ ಮಾತುಕತೆಯಲ್ಲಿ ಕೇಂದ್ರ ಸರ್ಕಾರ ಸಹಿಹಾಕುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ. ಹಾಗಾಗಿ ರೈತ ಸಂಘ ಹೊರಾಟ ಮಾಡಿ ರೈತರ ಕಣ್ಣುಗಳನ್ನು ತೆರೆಸದೇ ಹೋದರೆ ಇಡೀ ರೈತ ಕುಲಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ ಎಂದು ರೈತರನ್ನು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧ ಹೇಮಂತ್ ಕುಮಾರ್ ಅವರನ್ನು ರೈತ ಸಂಘದ ವತಿಯಿಂದ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಅನಂತರಾಮ್ ಪ್ರಸಾದ್, ಕಾರ್ಯದರ್ಶಿ ಬಿ.ಸಿ. ನಾರಾಯಣಸ್ವಾಮಿ, ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಬೈರೇಗೌಡ, ಟೊಯೋಟಾ ಕಂಪನಿಯ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ವಕೀಲರಾದ ಚಂದ್ರಶೇಖರ್, ಕಾರ್ಯದರ್ಶಿ ಬಿ.ಸಿ. ನಾರಾಯಣಸ್ವಾಮಿ, ಯುವ ಮುಖಂಡ ಗೌತಮ್ ಗೌಡ, ಸೇರಿದಂತೆ ರೈತ ಸಂಘದ ತಾಲೂಕು ಪದಾಧಿಕಾರಿಗಳು ಮಹಿಳಾ ರೈತರು ಉಪಸ್ಥಿತರಿದ್ದರು.