Advertisement

ಸಾರ್ವಜನಿಕ ಹಿಂದೂ ರುದ್ರಭೂಮಿ ಇಲ್ಲದೇ ಒದ್ದಾಡಿದ ಸಂತ್ರಸ್ತರು

02:05 AM Jul 18, 2017 | Team Udayavani |

ಪಡುಬಿದ್ರಿ: ಪಲಿಮಾರು ಗ್ರಾ. ಪಂ. ವ್ಯಾಪ್ತಿಯಲ್ಲಿ  ಜು. 17ರಂದು ಹಿಂದೂ ಸಾರ್ವಜನಿಕ ರುದ್ರಭೂಮಿ ಇಲ್ಲದೇ ಶವ ಸಂಸ್ಕಾರಕ್ಕಾಗಿ ಒದ್ದಾಡುವಂತಾಯಿತು. ಜನರು ಪಂಚಾಯತ್‌ ಎದುರು ಕಾಷ್ಠವಿರಿಸಿ ಶವ ದಹನಕ್ಕೆ ಸನ್ನಾಹ ಕೈಗೊಂಡರು. ಅದೇ ವೇಳೆಗೆ ಸ್ಥಳಕ್ಕಾಗಮಿಸಿದ ಪಡುಬಿದ್ರಿ ಠಾಣಾಧಿಕಾರಿ ಸತೀಶ್‌ ಸ್ಥಳೀಯರ ಮನವೊಲಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಬಹುಕಾಲದ ಬೇಡಿಕೆಯಾಗಿದ್ದ ಪಲಿಮಾರು ಹಿಂದೂ ರುದ್ರಭೂಮಿ ವಿವಾದವಿಂದು ತಾರಕಕ್ಕೇರಿದ ಸಂದರ್ಭದಲ್ಲಿ ತಹಶೀಲ್ದಾರ್‌ ಆಗಮನಕ್ಕೂ ಒತ್ತಡಗಳು ಹೆಚ್ಚಿದ್ದವು. ಗ್ರಾ. ಪಂ. ಗೆ ಉಡುಪಿ ತಹಶೀಲ್ದಾರ್‌ ಮಹೇಶ್ಚಂದ್ರ ಭೇಟಿ ನೀಡಿದ್ದು ಜು. 22ರಂದು ನಡೆಯಲಿರುವ ವಿಶೇಷ ಗ್ರಾಮಸಭೆಯಲ್ಲಿ ತಾನೂ ಹಾಜರಿರುವುದಾಗಿಯೂ, ಗ್ರಾ. ಪಂ. ರುದ್ರಭೂಮಿಗಾಗಿ ಮೀಸಲಿರಿಸಿದ ಸ್ಥಳದ ಕುರಿತಾಗಿ ಅಲ್ಲಿ ಚರ್ಚಿಸಲಾಗುವುದೆಂದರು.

Advertisement

ಸೋಮವಾರ ಪಲಿಮಾರು ಗ್ರಾ.ಪಂ. ಎದುರಿರುವ ಮನೆಯಲ್ಲಿ ಪೂವ ಮೇಸ್ತ್ರಿ (70) ನಿಧನಹೊಂದಿದ್ದು ಮನೆ ಬಳಿ ಶವ ಸುಡಲು ಜಾಗವಿಲ್ಲದಿದ್ದುದರಿಂದ ಕ್ಲಿಷ್ಟ ಪರಿಸ್ಥಿತಿ ಉದ್ಭವಿಸಿತ್ತು. ದಲಿತ ಸಮುದಾಯಕ್ಕೆ ಸೇರಿದ ಪೂವ ಮೇಸ್ತ್ರಿಯವರ ಶವ ದಹನವನ್ನು ಪಂಚಾಯತ್‌ ಎದುರೇ ನಡೆಸಲು ಸ್ಥಳೀಯರು ಮುಂದಾದಾಗ ಬಿಸಿಯೇರಿದ ವಾತಾವರಣ ನಿರ್ಮಾಣವಾಯಿತು.

ವಾರ್ಡ್‌ ಸಭೆ ಬಹಿಷ್ಕಾರ, ಮುಂದೂಡಿಕೆ
ಈ ಉದ್ರಿಕ್ತ ಜನರು ಪಂಚಾಯತ್‌ ಸಭಾಭವನದಲ್ಲಿ ವಾರ್ಡ್‌ ಸಭೆಯಲ್ಲೂ ಭಾಗವಹಿಸಿದ್ದು ಅಲ್ಲೂ ಹಿಂದೂ ರುದ್ರಭೂಮಿ ವಿವಾದವು ಪ್ರತಿಧ್ವನಿಸಿತ್ತು. ವಾದ ವಿವಾದಗಳ ಬಳಿಕ ಸ್ಥಳೀಯರ ವಿರೋಧದ ನಡುವೆ ವಾರ್ಡ್‌ ಸಭೆ ಬಹಿಷ್ಕರಿಸಲ್ಪಟ್ಟು ಮುಂದೂಡಿಕೆಯಾಗಿದೆ.

ದಲಿತ ನಾಯಕರ ಆರೋಪ, ಅಧ್ಯಕ್ಷರ ಸ್ಪಷ್ಟನೆ, ರುದ್ರಭೂಮಿಗೆ ವಿರೋಧವಿಲ್ಲವೆಂಬ ಹೇಳಿಕೆ
ಸ್ಥಳೀಯ ದಲಿತ ನಾಯಕರು ರುದ್ರಭೂಮಿಗೆ ಪಲಿಮಾರು ಗ್ರಾ. ಪಂ. ಮೀಸಲಿರಿಸಿರುವ ಸ್ಥಳದ ಪಕ್ಕ ಪಂಚಾಯತ್‌ ಸದಸ್ಯರೊಬ್ಬರ ಸ್ಥಳವೂ ಇದೆ. ರುದ್ರಭೂಮಿ ರಚನೆಯನ್ನು ವಿರೋಧಿಸಿ ಖಾಸಗಿ ವ್ಯಕ್ತಿಯೋರ್ವರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿರುವುದಾಗಿ ಆರೋಪಿಸಿದರು. ಇದಕ್ಕುತ್ತರಿಸಿದ ಗ್ರಾ. ಪಂ. ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಈ ಸಂಬಂಧವಾಗಿ ನ್ಯಾಯಾಲಯದಲ್ಲಿ ಪಂಚಾಯತ್‌ ಕೂಡಾ ತನ್ನ ಹೋರಾಟವನ್ನು ಮುಂದು ವರಿಸಿರುವುದಾಗಿಯೂ, ಶಾಸಕರ 5ಲಕ್ಷ ರೂ., ಹಾಗೂ ತಹಶೀಲ್ದಾರ್‌ ಮೂಲಕವಾಗಿ 10ಲಕ್ಷ ರೂ. ರುದ್ರಭೂಮಿ ನಿರ್ಮಾಣಕ್ಕಾಗಿ ಮೀಸಲಾಗಿದ್ದು ತಡೆಯಾಜ್ಞೆ ತೆರವಾದ ಕೂಡಲೇ ರುದ್ರಭೂಮಿಯ ನಿರ್ಮಾಣ ಮಾಡಲಾಗುವುದೆಂದಿದ್ದಾರೆ. ಗ್ರಾ. ಪಂ. ಸದಸ್ಯ ವಾಸು ದೇವಾಡಿಗರು ತಾವು ಸ್ಮಶಾನ ನಿರ್ಮಾಣವನ್ನು ವಿರೋಧಿಸುತ್ತಿಲ್ಲ. ಆದರೆ ಗ್ರಾ. ಪಂ. ಮೀಸಲಿರಿಸಿದ 1.5ಎಕ್ರೆ ಜಾಗದಲ್ಲಿ ರುದ್ರಭೂಮಿಯ ಜತೆಗೇ ತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣಕ್ಕೂ ಪಂಚಾಯತ್‌ ಮುಂದಾಗಿದ್ದು ಅದನ್ನು ತಾವೂ ಸೇರಿದಂತೆ ಅಕ್ಕಪಕ್ಕದ ಸ್ಥಳೀಯರು ವಿರೋಧಿಸುತ್ತಿರುವುದಾಗಿ ಹೇಳಿದರು.

ಸದ್ಯ ಎಲ್ಲರ ಚಿತ್ತ ಜು. 22ರಂದು ನಡೆಯಲಿರುವ ಗ್ರಾಮಸಭೆಯತ್ತ ನೆಟ್ಟಿದೆ. ಮೃತರಾದ ಪೂವ ಮೇಸ್ತ್ರಿ ಅಂತ್ಯಕ್ರಿಯೆಯನ್ನು ಇದೇ ಗ್ರಾಮದ ಬೇರೋಬ್ಬರ ಸ್ಥಳದಲ್ಲಿ ನಡೆಸಲಾಯಿತು. ಪಂಚಾಯತ್‌ ಉಪಾಧ್ಯಕ್ಷೆ ಸುಮಂಗಲಾ ದೇವಾಡಿಗ, ಪಿಡಿಒ ಸತೀಶ್‌, ಗ್ರಾಮ ಲೆಕ್ಕಿಗ ಲೋಕನಾಥ್‌, ಸದಸ್ಯರಾದ ಮಧುಕರ್‌ ಸುವರ್ಣ, ವಾಸು ದೇವಾಡಿಗ, ಗಾಯತ್ರಿ ಪ್ರಭು, ಸ್ಥಳೀಯರಾದ ಸುಧಾಕರ ಪಲಿಮಾರನು, ರವಿ ಪಲಿಮಾರು, ರತ್ನಾಕರ್‌, ಯೋಗೀಶ್‌ ಸುವರ್ಣ, ರಾಮ ಮತ್ತಿತರರು ಸ್ಥಳದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next