Advertisement

ದೇಶಕ್ಕಾಗಿ ಹೋರಾಟ, ಬದುಕಿಗಾಗಿ ಪರದಾಟ!

09:43 AM Jul 26, 2019 | Team Udayavani |

ಹಾವೇರಿ: ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ದೇಶಕ್ಕೆ ವಿಜಯ ತಂದ ಯೋಧರಲ್ಲೋರ್ವರಾದ ಹಾವೇರಿಯ ಮಹಮ್ಮದ್‌ ಜಹಾಂಗೀರ ಖವಾಸ್‌ ಇಂದು ಬದುಕಿಗಾಗಿ ನಿತ್ಯ ಹೋರಾಡುವಂತಾಗಿದೆ.

Advertisement

‘ದೇಶದ ಒಂದಿಂಚು ಭೂಮಿಯನ್ನು ಪರರಿಗೆ ಕೊಡೆವು’ ಎಂದು ದಿಟ್ಟತನದಿಂದ ವೈರಿಗಳ ಗುಂಡಿನ ದಾಳಿಗೆ ಮೈಯೊಡ್ಡಿ ನುಗ್ಗಿದ್ದ ಮಹಮ್ಮದ ಖವಾಸ್‌, ಈಗ ತಮ್ಮ ವೈಯಕ್ತಿಕ ಜೀವನಕ್ಕಾಗಿ ಒಂದಿಷ್ಟು ಜಮೀನಿಗಾಗಿ ಪರದಾಡುತ್ತಿದ್ದು ಎರಡು ದಶಕದಿಂದ ಅಧಿಕಾರಿಗಳ, ರಾಜಕಾರಣಿಗಳ ಭರವಸೆಯಲ್ಲೇ ಬದುಕು ಕಳೆಯುತ್ತಿದ್ದಾರೆ.

ಕಾರ್ಗಿಲ್ ವಿಜಯೋತ್ಸವ ನೆನಪಿಗಾಗಿ ದೇಶದಲ್ಲಿ ಸ್ಮರಣೆ, ಸಂಭ್ರಮಾಚರಣೆಗೆ ಸಿದ್ಧತೆ ನಡೆದಿದೆ. ಆದರೆ, ಯುದ್ಧದಲ್ಲಿ ವಿಜಯಶಾಲಿಯಾಗಿ ಬದುಕುಳಿದು ಬಂದ ಯೋಧರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸುಲಭವಾಗಿ ಸಿಗದಿರುವುದು ಖೇದಕರ ಸಂಗತಿ.

ಸೇನೆಯಲ್ಲಿ ಸೇವೆ: ಮಹಮ್ಮದ್‌ ಖವಾಸ್‌ 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಚಾಲಕ, ಹವಾಲ್ದಾರರಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಗೆ ಕೇವಲ ಆರು ತಿಂಗಳು ಬಾಕಿ ಇರುವಾಗ ಕಾರ್ಗಿಲ್ ಯುದ್ಧ ಆರಂಭವಾಯಿತು. ಯುದ್ಧದ ಮೊದಲ ದಿನದಿಂದ ಹಿಡಿದು ವಿಜಯೋತ್ಸವವರೆಗೂ ಸಕ್ರಿಯವಾಗಿ ಭಾಗವಹಿಸಿ ದೇಶದ ಗೆಲುವಿಗೆ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ.

ದೇಶಕ್ಕಾಗಿ ಸೆಣಸಾಡಿ ನಿವೃತ್ತರಾದ ನಂತರ ಹಾವೇರಿ ನಗರದ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಜೀವನ ಸಾಗಿಸುತ್ತಿದ್ದು, ಇತ್ತೀಚೆಗಷ್ಟೆ ಆ ಕೆಲಸವನ್ನೂ ಬಿಟ್ಟಿದ್ದಾರೆ. ಪತ್ನಿ, ಇಬ್ಬರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳನ್ನು ಹೊಂದಿರುವ ಖವಾಸ್‌, ತಮ್ಮ ದೊಡ್ಡ ಮಗಳ ಮದುವೆ ಮಾಡಿದ್ದಾರೆ. ಇನ್ನೊಬ್ಬಳು ಓದುತ್ತಿದ್ದಾಳೆ. ಒಬ್ಬ ಮಗ ಖಾಸಗಿಯಾಗಿ ಕಂಪ್ಯೂಟರ್‌ ಸರ್ವಿಸ್‌ ಮಾಡುತ್ತಾರೆ. ಮತ್ತೂಬ್ಬ ಮಗ ಬುದ್ಧಿಮಾಂದ್ಯ.

Advertisement

ಇನ್ನೆಷ್ಟು ಹೋರಾಟ?: ಅಂದು ತಾಯ್ನಾಡನ್ನು ಶತ್ರುಗಳಿಂದ ರಕ್ಷಿಸಲು ಜೀವದ ಹಂಗು ತೊರೆದು ಹೋರಾಟ ನಡೆಸಿದ ಮಹಮ್ಮದ್‌ ಖವಾಸ್‌, ಜೀವನ ನಡೆಸಲು ಜಮೀನಿಗಾಗಿ ಎರಡು ದಶಕದಿಂದ ನಿರಂತರ ಕಚೇರಿ ಅಲೆದಾಟದ ಹೋರಾಟ ನಡೆಸುತ್ತಿದ್ದಾರೆ. ನಾಗೇಂದ್ರನಮಟ್ಟಿಯಲ್ಲಿ ಒಂದು ನಿವೇಶನ ಹಾಗೂ ತಾಲೂಕಿನ ಗುತ್ತಲ-ನೆಗಳೂರ ಬಳಿ 2 ಎಕರೆ 12 ಗುಂಟೆ ಕೃಷಿ ಜಮೀನಿದ್ದು, ಅವರಿಗೆ ಇನ್ನೂ ಸಂಪೂರ್ಣವಾಗಿ ಕೈಗೆ ಸಿಕ್ಕಿಲ್ಲ. ಕೃಷಿ ಜಮೀನು ಮಂಜೂರು ಪ್ರಕ್ರಿಯೆಗೆ ಸಂಬಂಧಪಟ್ಟ ಕಾಗದಪತ್ರ ಜಿಲ್ಲಾಧಿಕಾರಿ ಕಚೇರಿಯಲ್ಲಿವೆ.

ಬದುಕಿದವರಿಗಿಲ್ಲ ಬೆಲೆ: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸರ್ಕಾರ, ಸಂಘ-ಸಂಸ್ಥೆಗಳು ಸಾಕಷ್ಟು ನೆರವಾದವು. ಹುತಾತ್ಮ ಯೋಧರ ಕುಟುಂಬಗಳಿಗೆ ಪೆಟ್ರೋಲ್ ಬಂಕ್‌, ನೌಕರಿ, ಜಮೀನು ಹೀಗೆ ಏನೆಲ್ಲ ಸೌಲಭ್ಯಗಳು ಅವರ ಮನೆ ಬಾಗಿಲಿಗೆ ಬಂದವು. ಖಾಸಗಿ ಸಂಘ ಸಂಸ್ಥೆಗಳು ಆರ್ಥಿಕ ನೆರವು ನೀಡಿದವು. ಆದರೆ, ಅದೇ ಯುದ್ಧದಲ್ಲಿ ಹೋರಾಡಿ ವಿಜಯಶಾಲಿಯಾಗಿ ಮರಳಿ ಬಂದ ಮಹಮ್ಮದ್‌ ಖವಾಸ್‌ನಂಥ ನಿವೃತ್ತ ಯೋಧರನ್ನು ಸರ್ಕಾರ, ಸಮಾಜ ಕಡೆಗಣಿಸಿರುವುದು ದುರ್ದೈವ ಸಂಗತಿ.

ಈಡೇರದ ಭರವಸೆ : ಜಿಲ್ಲೆಯಲ್ಲಿ ಕಾರ್ಗಿಲ್ ಸೇನಾನಿ ಎಂದು ಗುರುತಿಸಿಕೊಂಡ ಖವಾಸ್‌ ಅವರಿಗೆ 2000ನೇ ಸಾಲಿನಲ್ಲಿ ಜಿಲ್ಲಾಡಳಿತ ಸೇರಿದಂತೆ ಈ ಭಾಗದ ಅನೇಕ ಮಠಮಾನ್ಯಗಳು ಸನ್ಮಾನಿಸಿ ಗೌರವಿಸಿದವು. ಆಗ ಜಿಲ್ಲಾಧಿಕಾರಿಗಳು ಸೇರಿದಂತೆ ಅಂದಿನ ಸಚಿವರು, ಜನಪ್ರತಿನಿಧಿಗಳು ಖವಾಸ್‌ ಅವರನ್ನು ಹಾಡಿ ಹೊಗಳಿದರು. ಸರ್ಕಾರದಿಂದ ಐದು ಎಕರೆ ಜಮೀನು ಹಾಗೂ ಸರ್ಕಾರಿ ನೌಕರಿ ಕೊಡುವ ಭರವಸೆ ನೀಡಲಾಗಿತ್ತು. ಆ ಭರವಸೆಗಳು ಎರಡು ದಶಕ ಗತಿಸಿದರೂ ಪೂರ್ಣಗೊಂಡಿಲ್ಲ.

ಸೈನ್ಯದಲ್ಲಿ ಶತ್ರುಗಳ ವಿರುದ್ಧ ಹೋರಾಟ ಮಾಡುವಾಗಲೂ ಇಷ್ಟೊಂದು ಕಷ್ಟ ಅನುಭವಿಸಿರಲಿಲ್ಲ. ಆದರೆ, ಸರ್ಕಾರದಿಂದ ಸೌಲಭ್ಯ ಪಡೆಯಲು ಮಾತ್ರ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಸತತ 16 ವರ್ಷಗಳಿಂದ ಜಮೀನಿಗಾಗಿ ಹೋರಾಟ ನಡೆಸಿದ್ದೇನೆ. ಐದು ಎಕರೆ ಜಮೀನು ಕೇಳಿದ್ದೆ, 2 ಎಕರೆ ಜಮೀನು ನೀಡಲು ಒಪ್ಪಿದೆ.ಅದು ಇನ್ನೂ ನನಗೆ ಸೇರಿಲ್ಲ.•ಮಹಮ್ಮದ್‌ ಖವಾಸ್‌ ನಿವೃತ್ತ ಯೋಧ

ಮಾಜಿ ಸೈನಿಕರಿಗಾಗಿಯೇ ಜಮೀನು ನೀಡಲು ತಾಲೂಕಿನ ಕರ್ಜಗಿ ಹೋಬಳಿಯಲ್ಲಿ ಭೂಮಿ ಗುರುತಿಸಲಾಗಿದ್ದು, ಮಂಜೂರಾತಿಗಾಗಿ ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ ಸಲ್ಲಿಸಲಾಗುವುದು.•ಎನ್‌. ತಿಪ್ಪೇಸ್ವಾಮಿ ಅಪರ ಜಿಲ್ಲಾಧಿಕಾರಿ.

 

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next