Advertisement
ರಾಯಚೂರು ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾಂಗ್ರೆಸ್ ಟಿಕೆಟ್ ನೀಡುತ್ತಲೇ ಬರಲಾಗುತ್ತಿದೆ. ಆದರೆ, 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ದಟ್ಟವಾಗಿತ್ತು. ಕೊನೆ ಕ್ಷಣದಲ್ಲಿ ಮಾಜಿ ಶಾಸಕ ಸೈಯದ್ ಯಾಸಿನ್‌ರಿಗೆ ಟಿಕೆಟ್ ಸಿಗುವ ಮೂಲಕ ಕಾಂಗ್ರೆಸ್ ಸಂಪ್ರದಾಯ ಮುಂದುವರಿಸಿತ್ತು. ಆದರೆ, ಆಗ ಪಕ್ಷದ ವರಿಷ್ಠರು ಇದೇ ಕೊನೆ ಮುಂದಿನ ಬಾರಿ ಟಿಕೆಟ್ ಬೇರೆಯವರಿಗೆ ನೀಡಲಾಗುವುದು ಎಂಬ ಷರತ್ತಿನ ಮೇಲೆ ನೀಡಿದ್ದರು ಎನ್ನುತ್ತವೆ ಮೂಲಗಳು.
Related Articles
ರಾಯಚೂರು ನಗರ ಕ್ಷೇತ್ರ ಮಾತ್ರವಲ್ಲದೇ ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಮುಸ್ಲಿಂ ಮತಗಳು ನಿರ್ಣಾಯಕ ಹಂತದಲ್ಲಿವೆ. ಆದರೆ, ರಾಯಚೂರು, ಸಿಂಧನೂರು ಹೊರತಾಗಿಸಿ ಉಳಿದೆಲ್ಲ ಕ್ಷೇತ್ರಗಳಿಗೆ ಬೇರೆ ಸಮುದಾಯಗಳಿಗೆ ಮೀಸಲಾತಿ ಇದೆ. ಹೀಗಾಗಿ ಅಲ್ಪಸಂಖ್ಯಾತರು ರಾಯಚೂರು ನಗರ ಕ್ಷೇತ್ರ ಒಂದರ ಮೇಲೆಯೇ ಒಲವು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಅಷ್ಟು ಸುಲಭಕ್ಕೆ ಅಲ್ಪಸಂಖ್ಯಾತರ ಬೇಡಿಕೆಯನ್ನು ಅಲ್ಲಗಳೆಯುವುದು ಕಷ್ಟ ಸಾಧ್ಯ ಎನ್ನುವುದು ರಾಜಕೀಯ ವಲಯದ ಚರ್ಚೆಯಾಗುತ್ತಿದೆ.
Advertisement
ಕಾಂಗ್ರೆಸ್ ಅಲ್ಪಸಂಖ್ಯಾತರ ಮತಗಳನ್ನು ಭದ್ರ ಮತ ಬ್ಯಾಂಕ್ ರೀತಿ ಪಡೆಯುತ್ತಿದ್ದು, ಟಿಕೆಟ್ ಹಂಚಿಕೆ ವಿಚಾರ ಬಂದಾಗ ಹಿಂದೇಟಾಕುವುದು ಕಷ್ಟ ಸಾಧ್ಯ ಎನ್ನುತ್ತಾರೆ ಪಕ್ಷದ ಕೆಲ ನಾಯಕರು. ಅಲ್ಲದೇ, ಈಚೆಗೆ ನಗರಸಭೆ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ನೀಡುವ ಅವಕಾಶ ಇದ್ದಾಗ್ಯೂ ಕಾಂಗ್ರೆಸ್ ನೀಡದಿರುವುದು ಮುಸ್ಲಿಂ ಆಕ್ರೋಶಕ್ಕೆ ಕಾರಣವಾಗಿತ್ತು.
ನಾನೇ ಅಭ್ಯರ್ಥಿ ಎನ್ನುವವರಿಲ್ಲಚುನಾವಣೆಗೆ ಇನ್ನೂ ಕಾಲಾವಕಾಶ ಇದ್ದರೂ ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ನಾವೇ ಮುಂದಿನ ಅಭ್ಯರ್ಥಿ ಎಂದು ಕೆಲಸ ಮಾಡುವ ನಾಯಕರಿದ್ದಾರೆ. ಆದರೆ, ನಗರ ಕ್ಷೇತ್ರದಲ್ಲಿ ಅದರಲ್ಲೂ ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ನಾನೇ ಮುಂದಿನ ಅಭ್ಯರ್ಥಿ ಎಂದು ಬಹಿರಂಗವಾಗಿ ಹೇಳಿಕೊಂಡು ಯಾವುದೇ ನಾಯಕರು ಕೆಲಸ ಮಾಡುತ್ತಿಲ್ಲ. ಚುನಾವಣೆಗೆ ವೇದಿಕೆ ಸಿದ್ಧ ಮಾಡಿಕೊಂಡು ಕೆಲ ನಾಯಕರು ಕೆಲಸ ಮಾಡುತ್ತಿದ್ದಾರೆ. ವಿನಃ ಬಹಿರಂಗವಾಗಿ ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದು ಪಕ್ಷದ ಕಾರ್ಯಕರ್ತರಿಗೂ ಗೊಂದಲ ಮೂಡಿಸುತ್ತಿದೆ. ಏತನ್ಮಧ್ಯೆ ರಾಯಚೂರು ನಗರ ಕ್ಷೇತ್ರಕ್ಕೆ ಬೇರೆ ಭಾಗದಿಂದ ಅಭ್ಯರ್ಥಿಗಳು ಬಂದು ಸ್ಪರ್ಧಿಸಲಿದ್ದಾರೆ ಎಂಬ ಗುಮಾನಿಗಳು ಕೂಡ ಜೋರಾಗುತ್ತಿದೆ. ಅಪರೂಪದ ಅತಿಥಿಗಳಂತೆ ಕೆಲ ನಾಯಕರು ನಗರದಲ್ಲಿ ಗುರುತಿಸಿಕೊಳ್ಳುವ ಯತ್ನ ಮಾಡುತ್ತಿರುವುದು ಕೂಡ ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಯಾದಗಿರಿ ವಿಧಾನಸಭೆ ಕ್ಷೇತ್ರವನ್ನು ಈ ಬಾರಿ ಅಲ್ಪಸಂಖ್ಯಾತರಿಗೆ ಬಿಟ್ಟು ಕೊಡಲಾಗುತ್ತಿದೆ ಎಂಬ ಸುದ್ದಿಯೂ ಈ ಎಲ್ಲ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಪ್ರತಿಪಕ್ಷಗಳಿಗೆ ವರವಾದೀತೆ ನಡೆ?
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿದ್ದ ಗುಂಪುಗಾರಿಕೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ನೆರವಾಯಿತು. ಈ ಬಾರಿಯೂ ಮತ್ತದೆ ಪರಿಸ್ಥಿತಿ ಏರ್ಪಡುತ್ತಿರುವುದು ಪ್ರತಿಪಕ್ಷಗಳಿಗೆ ವರವಾದರೆ ಅಚ್ಚರಿ ಪಡುವಂತಿಲ್ಲ. ಕಳೆದ ಬಾರಿ ಜೆಡಿಎಸ್‌ನಿಂದ ದುರ್ಬಲ ಅಭ್ಯರ್ಥಿ ಕಣಕ್ಕಿಳಿದ ಕಾರಣ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಕಾಂಗ್ರೆಸ್‌ನಲ್ಲಿ ಟಿಕೆಟ್‌ನಿಂದ ಉಂಟಾದ ಭಿನ್ನಮತ ಚುನಾವಣೆ ಮೇಲೆ ಪ್ರಭಾವ ಬೀರಿತು. ಇದು ಬಿಜೆಪಿಗೆ ಅನುಕೂಲವಾಯಿತು. ಈಗಲೂ ಕಾಂಗ್ರೆಸ್‌ನಲ್ಲಿ ಒಮ್ಮತದ ಧ್ವನಿ ಕೇಳಿ ಬರುತ್ತಿಲ್ಲ. ಪಕ್ಷದ ತೀರ್ಮಾನವೇ ಅಂತಿಮವಾಗಿದ್ದರೆ ಈ ರೀತಿ ವರಿಷ್ಠರ ಮುಂದೆ ಟಿಕೆಟ್‌ಗೆ
ಪ್ರಸ್ತಾಪ ಇಡುವ ಸನ್ನಿವೇಶ ಬರುವುದಿಲ್ಲ ಎಂದು ಪಕ್ಷದ ಕೆಲ ನಾಯಕರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. *ಸಿದ್ಧಯ್ಯಸ್ವಾಮಿ ಕುಕುನೂರು