ನಂಜನಗೂಡು: ಗ್ರಾಮದಲ್ಲಿ ದೇವಿ ಹಬ್ಬಕ್ಕೆ ಪ್ರಾಣಿ ಬಲಿ ಕೊಡುವ ವಿಚಾರ ಸಂಬಂಧ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ತಾಲೂಕಿನ ಕುರಹಟ್ಟಿಯಲ್ಲಿ ಸಂಭವಿಸಿದೆ. ಈ ಘರ್ಷಣೆಯಲ್ಲಿ ನಾಲ್ವರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಘಟನೆ ವಿವರ: ಕುರಹಟ್ಟಿಯಲ್ಲಿ ಮಾರಮ್ಮನ ದೇವಾಲಯವಿದ್ದು, ಪ್ರತಿವರ್ಷ ದೇವಿ ಹಬ್ಬ ಆಚರಿಸಲಾಗುತ್ತಿದೆ. ದೇಗುಲ ಒಂದು ಬೀದಿಯಲ್ಲಿದ್ದರೆ, ಹಬ್ಬ ನಡೆಯುವುದು ಮತ್ತೂಂದು ಬೀದಿಯಲ್ಲ. ದೇವಿಗೆ ಪ್ರಾಣಿ ಬಲಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಬೀದಿಗಳ ಜನರ ನಡುವಿನ ತಕರಾರು ಮಾರಾಮಾರಿಗೆ ತಿರುಗಿದೆ.
ನಮ್ಮ ಬೀದಿಯಲ್ಲಿ ಎಲ್ಲರೂ ಸಸ್ಯಹಾರಿಗಳಾಗಿದ್ದು, ಪ್ರಾಣಿ ಬಲಿ ಕೊಡುವುದಿಲ್ಲ ಎಂದು ಒಂದು ಬೀದಿಯವರು ವಾದಿಸಿದರೆ, ಪರಂಪರೆಯಿಂದ ನಾವು ಬಲಿ ಕೊಡುತ್ತಲೇ ಇದ್ದೇವೆ. ಇದಕ್ಕೆ ಅಡ್ಡಿಪಡಿಸುವುದು ಬೇಡ ಎಂದು ಮತ್ತೂಂದು ಬೀದಿಯವರು ಪಟ್ಟು ಹಿಡಿದಿದ್ದರಿಂದ ಹಬ್ಬವನ್ನು ಮುಂದೂಡಲಾಗಿತ್ತು.
ಇದೇ ವಿಚಾರವಾಗಿ ಗ್ರಾಮದ ಯುವಕರು ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ ತಿರುಗಿ ಹಲ್ಲೆ ನಡೆಸಿದ್ದರಿಂದ ಗ್ರಾಮದ ಮಹದೇವಸ್ವಾಮಿ, ಸಿದ್ದರಾಜು, ಉಮೇಶ ಹಾಗೂ ಮುಕುಂದ ಎಂಬವವರಿಗೆ ಗಂಭೀರ ಗಾಯವಾಗಿದ್ದು, ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆ ಬಳಿ ಮತ್ತೆ ಘರ್ಷಣೆಗೆ ಮುಂದಾದ ಬೆಂಬಲಿಗರ ಗುಂಪನ್ನು ಚದುರಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಘಟನೆ ಸಂಬಂಧ ಎರಡೂ ಗುಂಪಗಳು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಗ್ರಾಮಕ್ಕೆ ಪೊಲೀಸ್ ವಾಹನ ಕಳಿಸಿಲಾಗಿದೆ ಎಂದು ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ರಾಂಕುಮಾರ ತಿಳಿಸಿದ್ದಾರೆ.