ಬೆಂಗಳೂರು: ವಿಮಾನ ರದ್ದಾದರೂ ಟಿಕೆಟ್ ಕಾಯ್ದಿರಿಸಿದ ಗ್ರಾಹಕರಿಗೆ ಹಣ ವಾಪಸ್ ಮಾಡದ ಖಾಸಗಿ ವಿಮಾನಯಾನ ಸೇವಾ ಸಂಸ್ಥೆಯೊಂದು ಇದೀಗ ತನ್ನ ಗ್ರಾಹಕರೊಬ್ಬರಿಗೆ ವಿಮಾನ ಟಿಕೆಟ್ ದರವನ್ನು ಬಡ್ಡಿಯೊಂದಿಗೆ ವಾಪಸ್ ನೀಡುವುದರ ಜತೆಗೆ ಹೆಚ್ಚುವರಿ ದಂಡವನ್ನೂ ಪಾವತಿಸಬೇಕಾದ ಪ್ರಸಂಗ ಬಂದಿದೆ.
ಏಕಾಏಕಿ ವಿಮಾನ ಪ್ರಯಾಣ ಸೇವೆ ರದ್ದಾಗಿದ್ದರಿಂದ ಮುಂಗಡ ಟಿಕೆಟ್ ಬುಕ್ ಮಾಡಿ ಹಣ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ಮೂರು ವರ್ಷಗಳ ಕಾನೂನು ಹೋರಾಟ ನಡೆಸಿ ಜಯ ಗಳಿಸಿದ್ದಾರೆ.
ಸ್ಪೈಸ್‌ಜೆಟ್ ಸಂಸ್ಥೆ 2015ರ ಜನವರಿಯಲ್ಲಿ ತನ್ನ ಸೇವೆ ಸ್ಥಗಿತದಿಂದ ತಾವು ಮುಂಗಡವಾಗಿ ಟಿಕೆಟ್‌ಗೆ ಪಾವತಿಸಿದ್ದ ಹಣಕೊಡಿಸುವಂತೆ ಮುನೇಕೊಳಾಲುವಿನ ಅಶ್ವಿನ್‌ಕುಮಾರ್ ಶಂಕರ್ ತಲವಾರ್ ಸಲ್ಲಿಸಿದ್ದ ದೂರು ಪುರಸ್ಕರಿಸಿರುವ ನಗರದ ನಾಲ್ಕನೇ ಗ್ರಾಹಕರ ವೇದಿಕೆ ಪರಿಹಾರ ಕೊಡಿಸಿದೆ. ಆರ್ಥಿಕ ಸಂಕಷ್ಟ ಹಾಗೂ ಇನ್ನಿತರೆ ಕಾರಣಗಳಿಂದ 2015ರ ಜನವರಿಯಲ್ಲಿ ಸ್ಪೈಸ್ ಜೆಟ್ ಸಂಸ್ಥೆಯ 300 ವಿಮಾನಗಳ ಹಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು.
ಈ ವೇಳೆ ಗ್ರಾಹಕರಿಗೆ ಆದ ಅನನುಕೂಲಕ್ಕೆ ಕ್ಷಮೆ ಕೋರಿದ ಸಂಸ್ಥೆ, ವಿಮಾನಯಾನ ಕಾಯ್ದೆಯನ್ವಯ ಟಿಕೆಟ್ ಹಣ ಮರುಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ, ಈ ವಾದವನ್ನು ತಳ್ಳಿಹಾಕಿರುವ ಗ್ರಾಹಕರ ವೇದಿಕೆ, ಅಸಮರ್ಪಕ ಸೇವೆಯಿಂದ ಆದ ತೊಂದರೆಗೆ ಪರಿಹಾರ ನೀಡಲು ಆದೇಶಿಸಿದ್ದು, ಮುಂದಿವಾರದಲ್ಲಿ ಪರಿಹಾರ ಪಾವತಿಸಲು ನಿರ್ದೇಶಿಸಿತು.
ಖಾಸಗಿ ಕಂಪನಿಯ ಉದ್ಯೋಗಿ ಅಶ್ವಿನ್‌ಕುಮಾರ್ ಜ. 19ಕ್ಕೆ 2015ರ ಅನ್ವಯವಾಗುವಂತೆ ಬೆಂಗಳೂರಿನಿಂದ ದೆಹಲಿ, ದೆಹಲಿಯಿಂದ ಶ್ರೀನಗರಕ್ಕೆ ಮತ್ತು ಫೆ. 2ರಂದು ವಾಪಾಸ್ ಪ್ರಯಾಣಕ್ಕೆ ಸ್ಪೈಸ್ ಜೆಟ್ ವಿಮಾನದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿ ಕ್ರೆಡಿಟ್ ಕಾರ್ಡ್ ಮೂಲಕ 8274 ರೂ. ಪಾವತಿಸಿದ್ದರು. ಆದರೆ, ಜ. 9ಕ್ಕೆ ಅಶ್ವಿನ್ ಕುಮಾರ್ ಅವರ ಮೊಬೈಲ್‌ಗೆ ಸ್ಪೈಸ್ ಜೆಟ್ ಸಂಸ್ಥೆಯಿಂದ ಸಂದೇಶ ಬಂದಿದ್ದು,
ಅದರಲ್ಲಿ, ಜನವರಿ ತಿಂಗಳಲ್ಲಿ ಹಲವು ತಾಂತ್ರಿಕ ಕಾರಣಗಳಿಂದ ನಮ್ಮ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿತ್ತು. ಹೀಗಾಗಿ ಬೇರೆ ವಿಮಾನದಲ್ಲಿ ಪ್ರವಾಸ ಮಾಡಿದ್ದರು. ಬಳಿಕ ಮುಂಗಡ ಟಿಕೆಟ್ ಬುಕ್‌ಗೆ ಪಾವತಿಸಿದ್ದ ಹಣ ವಾಪಾಸ್ ನೀಡುವಂತೆ ಇ-ಮೇಲ್ ಮೂಲಕ ಸ್ಪೈಸ್ ಜೆಟ್ ಸಂಸ್ಥೆಗೆ ಮನವಿ ಮಾಡಿದ್ದರೂ ಪ್ರಯೋಜನ ವಾಗದ ಹಿನ್ನೆಲೆ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.
ಪರಿಹಾರ ಏನು?: ಅರ್ಜಿದಾರ ಅಶ್ವಿನ್‌ಕುಮಾರ್ ಅವರು ಪಾವತಿಸಿದ್ದ ಟಿಕೆಟ್ ಹಣ 9 ಸಾವಿರ ರೂ., ಸೇವೆ ಸ್ಥಗಿತಗೊಂಡ ಕಾರಣ ಬೇರೆ ಸಂಸ್ಥೆಯಿಂದ ಟಿಕೆಟ್ ಖರೀದಿಸಲು ಅನುಭವಿಸಿದ ತೊಂದರೆಗೆ 10 ಸಾವಿರ ರೂ. ಮೊತ್ತವನ್ನು ಶೇ 6ರಷ್ಟು ಬಡ್ಡಿಯೊಂದಿಗೆ ವಾಪಾಸ್ ನೀಡಬೇಕು. ಜತೆಗೆ ಕಾನೂನು ಹೋರಾಟದ ಶುಲ್ಕ 1 ಸಾವಿರ ರೂ. ನೀಡುವಂತೆ ಸ್ಪೈಸ್ ಜೆಟ್ ವ್ಯವಸ್ಥಾಪಕ ನಿರ್ದೇಶಕರಿಗೆ ಗ್ರಾಹಕರ ವೇದಿಕೆ ಆದೇಶಿಸಿದೆ.