Advertisement

ಹಾಡಹಗಲೇ ಜನಸಮೂಹದ ಮಧ್ಯೆ ಲಾಂಗು-ಮಚ್ಚಿನ ಅಬ್ಬರ

03:14 PM Jun 21, 2019 | Team Udayavani |

ಹುಬ್ಬಳ್ಳಿ: ಅವಳಿ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಹಾಡಹಗಲೇ ಮಾರಕಾಸ್ತ್ರಗಳಿಂದ ಗುಂಪುಗಳು ದಾಳಿಗಿಳಿಯುತ್ತಿರುವ ಘಟನೆಗಳು ನಾಗರಿಕರ ನೆಮ್ಮದಿ ಕೆಡಿಸುತ್ತಿದೆ.

Advertisement

ತಮ್ಮ ವೈಯಕ್ತಿಕ ವಿಚಾರಕ್ಕೆ ಹಾಗೂ ಹಳೆಯ ದ್ವೇಷವನ್ನಿಟ್ಟುಕೊಂಡು ಪುಢಾರಿಗಳ ಗುಂಪು ಒಬ್ಬರ ಮೇಲೆ ಇನ್ನೊಬ್ಬರು ಮಾರಕಾಸ್ತ್ರ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಹೆಚ್ಚಾಗಿದೆ. ಗುಂಪು ಪೊಲೀಸರ ಭಯವಿಲ್ಲದೆ ಜನಸಮೂಹದ ಮಧ್ಯೆಯೆ ತಲ್ವಾರ್‌, ಮಚ್ಚು ಝಳಪಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ಜೂ. 7ರಂದು ಹಳೇಹುಬ್ಬಳ್ಳಿ ನೇಕಾರ ನಗರ ಈಶ್ವರನಗರದಲ್ಲಿ ಕ್ಷುಲ್ಲಕ ವಿಷಯವಾಗಿ ಸೆಟ್ಲಮೆಂಟ್‌ನ ಹುಸೇನಸಾಬ್‌ ಬಿಜಾಪುರಿ, ಜಾಧವ ಹಾಗೂ ಸೂರಿ, ಗಿರಿ ಗುಂಪಿನ ನಡುವೆ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆದಿತ್ತು. ಆಗ ಹುಸೇನಸಾಬಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿತ್ತು.

ಅದೇರೀತಿ ಜೂ. 10ರಂದು ಗಾರ್ಡನ್‌ ಪೇಟೆಯಲ್ಲಿ ಕಲಾಲ ಸಮಾಜದ ಜಾಗದ ವಿಷಯವಾಗಿ ಮಿರಜಕರ ಕುಟುಂಬದವರೊಂದಿಗೆ ಪಾಲಿಕೆಯ ಮಾಜಿ ಸದಸ್ಯರೊಬ್ಬರು ಸಮಾಜದವರೊಂದಿಗೆ ತೆರಳಿ ತಕರಾರು ತೆಗೆದು ಹಲ್ಲೆ ಮಾಡಿದ್ದರು. ಈ ವಿಷಯವಾಗಿ ಸಮಾಜದ ಎರಡು ಗುಂಪಿನವರು ಘಂಟಿಕೇರಿ ಠಾಣೆ ಮುಂದೆ ಜಮಾಯಿಸಿದ್ದರು.

ಹಳೆಯ ವೈಷ್ಯಮದ ಹಿನ್ನೆಲೆಯಲ್ಲಿ ಜೂ. 14ರಂದು ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ ತನ್ನ ಸಹಚರರೊಂದಿಗೆ ಮಾರಕಾಸ್ತ್ರಗಳೊಂದಿಗೆ ದೇವೇಂದ್ರಪ್ಪ ಆಲಕುಂಟೆ ಕುಟುಂಬದವರ ಮೇಲೆ ಲಾಂಗು, ಮಚ್ಚು, ತಲ್ವಾರ್‌, ಕ್ರಿಕೆಟ್ ಬ್ಯಾಟ್‌ಗಳಿಂದ ಹಲ್ಲೆ ಮಾಡಿದ್ದರು. ಈ ಸಂದರ್ಭದಲ್ಲಿ ನಾಲ್ವರು ತೀವ್ರ ಗಾಯಗೊಂಡಿದ್ದರು. ಅಲ್ಲದೆ ಈ ಗುಂಪು ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಹಾನಿಪಡಿಸಿತ್ತು. ಈ ಘಟನೆಯಿಂದ ಅಲ್ಲಿದ್ದ ಮಕ್ಕಳು, ಮಹಿಳೆಯರು, ವೃದ್ಧರು ತೀವ್ರ ಆತಂಕಕ್ಕೊಳಗಾಗಿದ್ದರು. ಪುಢಾರಿಗಳು ತಲ್ವಾರ್‌, ಮಚ್ಚುಗಳನ್ನು ಹಿಡಿದು ಪ್ರದೇಶದ ತುಂಬೆಲ್ಲ ಓಡಾಡಿದ, ವಾಹನಗಳಿಗೆ ಹಾನಿಪಡಿಸಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿ ಕಮರಿಪೇಟೆ ಪೊಲೀಸರು ವೆಂಕಟೇಶ ಮೇಸ್ತ್ರಿ ಸೇರಿದಂತೆ ಮೂವರನ್ನು ಬಂಧಿಸಿ, ಕೆಲ ಷರತ್ತುಗೊಂದಿಗೆ ಠಾಣೆಯಲ್ಲಿಯೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು. ಸಾರ್ವಜನಿಕವಾಗಿ ಮಚ್ಚು, ಲಾಂಗ್‌ಗಳನ್ನು ಝಳಪಿಸುತ್ತ ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮಕೈಗೊಳ್ಳದೆ ಮೃದುಧೋರಣೆ ಅನುಸರಿಸಿದ ಪೊಲೀಸರ ಈ ನಡೆ ಬಗ್ಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ.

Advertisement

ನೇಕಾರನಗರ ಈಶ್ವರ ನಗರದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಬಂಧಿತರಾಗಿ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಗಳ ಮೇಲೆಯೇ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ವಾಹನಗಳನ್ನು ಜಖಂಗೊಳಿಸಿದೆ. ಇದನ್ನೆಲ್ಲ ನೋಡಿದ ಜನರು ಕಾರಾಗೃಹ ಆವರಣದಲ್ಲಿಯೇ ಹೊಡೆದಾಟ ನಡೆಸುತ್ತಾರೆಂದರೆ ಇನ್ನು ಉಳಿದ ಸ್ಥಳಗಳಲ್ಲಿ ಇವರ ಆರ್ಭಟ ಹೇಗಿರಬಾರದು. ಇವರಿಗೆ ಪೊಲೀಸರ ಭಯವಿಲ್ಲವೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಅಷ್ಟೊಂದು ದುರ್ಬಲವೇ?:

ಅವಳಿ ನಗರದಲ್ಲಿ ಗೂಂಡಾಗಳು, ರಾಜಕೀಯ ಪುಢಾರಿಗಳು ಅಟ್ಟಹಾಸ ಮಾಡುತ್ತಿದ್ದರೂ ಪೊಲೀಸರು ಅಂಥವರ ಮೇಲೆ ಏಕೆ ದಿಟ್ಟಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ? ಅವರ ಮೇಲೆ ಕ್ರಮ ತೆಗೆದುಕೊಳ್ಳದಂತೆ ಕಾಣದ ಕೈಗಳು ಅವರ ಮೇಲೆ ಒತ್ತಡ ಹಾಕುತ್ತಿವೆಯೇ. ಅಧಿಕಾರಿಗಳ ಕೈಕಟ್ಟಿ ಹಾಕಲಾಗಿದೆಯೇ. ಪೊಲೀಸ್‌ ಇಲಾಖೆ ನಗರದಲ್ಲಿ ಅಷ್ಟೊಂದು ದುರ್ಬಲವಾಗಿದೆಯೇ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ವೈಯಕ್ತಿಕ ವಿಚಾರವಾಗಿ ಹಾಗೂ ಹಳೆಯ ದ್ವೇಷಗಳನ್ನಿಟ್ಟು ಮಾರಕಾಸ್ತ್ರಗಳೊಂದಿಗೆ ಸಾರ್ವಜನಿಕವಾಗಿ ಹೊಡೆದಾಡಿಕೊಳ್ಳುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು, ಅವಶ್ಯವಾದರೆ ಅಂಥವರ ಮೇಲೆ ಗೂಂಡಾ ಶೀಟ್ ಹಾಕಲು ಸೂಚಿಸಲಾಗಿದೆ. ಈಗಾಗಲೇ ಉಪಕಾರಾಗೃಹ ಬಳಿ ನಡೆದ ಗ್ಯಾಂಗ್‌ವಾರ್‌ಗೆ ಸಂಬಂಧಿಸಿ ಬಂಧಿತರ ಮೇಲೆ ಗೂಂಡಾಶೀಟ್ ಹಾಕಲು ಸಂಬಂಧಪಟ್ಟ ಇನ್ಸಪೆಕ್ಟರ್‌ಗೆ ತಿಳಿಸಲಾಗಿದೆ. •ಎಂ.ಎನ್‌. ನಾಗರಾಜ, ಹು-ಧಾ ಪೊಲೀಸ್‌ ಆಯುಕ್ತ

 

•ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next