Advertisement

ಜುಲೈನಲ್ಲಿ 10 ಕೆ.ಜಿ ಅಕ್ಕಿ ನೀಡದಿದ್ದರೆ ಸರ್ಕಾರದ ವಿರುದ್ಧ ಹೋರಾಟ: ಮಾಜಿ ಸಿಎಂ ಬೊಮ್ಮಾಯಿ‌

02:15 PM Jun 15, 2023 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರೆಂಟಿ ಹೆಸರಲ್ಲಿ ದೊಖಾ ಸಿರೀಸ್ ಮುಂದುವರೆಸಿದ್ದು, ನೀಡಿದ ಭರವಸೆಯಂತೆ ಜುಲೈನಲ್ಲಿ ಜನರಿಗೆ 10 ಕೆ.ಜಿ ಅಕ್ಕಿ ನೀಡದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು‌.

Advertisement

ಇಂದು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನೀಡಿರುವ ಹೇಳಿಕೆಯಿಂದ ರಾಜ್ಯದ ಜನರಿಗೆ ಮೋಸವಾಗಿದೆ. ಬಡವರು, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅವರು ನೀಡಿದ ಮಾತು ತಪ್ಪಿದ್ದಾರೆ. ಅಕ್ಕಿ ಸರಬರಾಜು ಮಾಡುವ ವಿಚಾರದಲ್ಲಿ ಕೇಂದ್ರ ರಾಜಕಾರಣ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ, ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆಯಡಿ ಎಲ್ಲ ರಾಜ್ಯಗಳಿಗೂ 5 ಕೆ.ಜಿ ಅಕ್ಕಿ ಕೊಡುತ್ತ ಬಂದಿದೆ ಎಂದರು.

ಅಕ್ಕಿ ಜೊತೆಗೆ ಸಾರಿಗೆ ವೆಚ್ಚವನ್ನು ಕೂಡ ಕೇಂದ್ರ ಸರ್ಕಾರ ಕೊಡುತ್ತಿದೆ. ಅದು ಸುಮಾರು ಮೂರು ರೂಪಾಯಿ ಬರುತ್ತದೆ. ಅದನ್ನು ಕೂಡ ಕೇಂದ್ರ ಸರ್ಕಾರ ನಿಭಾಯಿಸುತ್ತಿದೆ. ಸಿದ್ದರಾಮಯ್ಯ 10 ಕೆ.ಜಿ ಅಕ್ಕಿ ಕೊಡುತ್ತೆನೆ ಎಂದು ಹೇಳುತ್ತಾರೆ. ಅದರಲ್ಲಿ 5 ಕೆ.ಜಿ ಅಕ್ಕಿ ಕೇಂದ್ರ ಸರ್ಕಾರ ನೀಡಿದೆ. ಡಿಸೆಂಬರ್ ನಲ್ಲಿಯೇ ಒಂದು ಕೆ.ಜಿ ಅಕ್ಕಿ ಕಡಿಮೆಯಾದಾಗ, ನಾವು ಹಣ ಕೊಟ್ಟು ಅಕ್ಕಿ ಖರೀದಿಸಿ ಕೊಟ್ಟಿದ್ದೇವೆ. ಅದು ಮಾರ್ಚ್ ವರೆಗೆ ಮಾತ್ರ ಅವಕಾಶ ಇದೆ. ಮುಂದೆ ಆಹಾರ ಭಂಡಾರ ಅಥವಾ ಬೇರೆ ಎಜೆನ್ಸಿ ಮೂಲಕ ಖರೀದಿ ಮಾಡಬೇಕೆಂದು ನಾನು ಕಡತದಲ್ಲಿ ಬರೆದಿದ್ದೇನೆ ಎಂದರು.

ನೀವು ಈಗ ಜನರಿಗೆ ಅಕ್ಕಿ ನೀಡುವ ಸಂದರ್ಭದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿ, ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರ ನಡೆಸಿದ್ದೀರಿ. ಅನ್ನಭಾಗ್ಯ ಸಿಎಂ ಅವರ ಅತ್ಯಂತ ಮಹತ್ವದ ಯೋಜನೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸ್ವತಃ ಯಾಕೆ ಪತ್ರ ಬರೆಯಲಿಲ್ಲ. ನೀವು ಸ್ವತಃ ಕೇಂದ್ರದ ಸಚಿವರ ಜೊತೆ ಮಾತನಾಡಬಹುದಿತ್ತು. ಅಥವಾ ಬೇರೆ ಟೆಂಡರ್ ಮೂಲಕ ಖರೀದಿ ಮಾಡುವ ಪರ್ಯಾಯ ಮಾರ್ಗ ಅನುಸರಿಸಬಹುದಿತ್ತು. ಅದನ್ನು ಬಿಟ್ಟು ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಈಗಲಾದರೂ ಬೇರೆ ಎಜೆನ್ಸಿ ಮೂಲಕ ಖರೀದಿ ಮಾಡಿ ಜನರಿಗೆ ಅಕ್ಕಿ ನೀಡಬೇಕು. ಇಲ್ಲದಿದ್ದರೆ ‌ಜನರ ಅಕೌಂಟ್ ಗೆ ನೇರ ನಗದು ವರ್ಗಾವಣೆ ಮಾಡಿ, ಇಲ್ಲದಿದ್ದರೆ ನಿಮ್ಮ ದೋಖಾ ಸಿರೀಜ್ ಮುಂದುವರೆದಿದೆ ಅಂತ ಜನರು ಭಾವಿಸುತ್ತಾರೆ ಎಂದರು.

Advertisement

ಇದನ್ನೂ ಓದಿ:Viral Video: ಕಾರಿನಂತೆ ಜೆಸಿಬಿಯನ್ನು ಅಲಂಕಾರ ಮಾಡಿ ವಧುವನ್ನು ಕರೆತಂದ ವರ

ಅಕ್ಕಿ ನೀಡುವ ವಿಚಾರದಲ್ಲಿ ಜುಲೈನಲ್ಲಿ 10 ಕೆ.ಜಿ ನೀಡದಿದ್ದರೆ, ನಾವು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ನಿಮ್ಮ ಯೋಜನೆ ಜಾರಿ ಮಾಡಲು ನೀವು ಗಂಭೀರವಾಗಿದ್ದರೆ, ನೀವು ಕೇಂದ್ರ ಸರ್ಕಾರದ ಜೊತೆ ನೇರವಾಗಿ ಮಾತನಾಡಬೇಕಿತ್ತು. ಅದನ್ನು ಬಿಟ್ಟು ಕೇವಲ ಒಂದು ತಿಂಗಳು ಪ್ರಚಾರ ಮಾಡಿಕೊಳ್ಳುತ್ತ ಕಾಲ ಹರಣ ಮಾಡಿದ್ದೀರಿ. ಕೇಂದ್ರ ಸರ್ಕಾರ ಮುಂದಿನ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತದೆ. ಇದುವರೆಗೂ ಮಳೆ ಬಾರದಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಈ ರೀತಿಯ ತೀರ್ಮಾನ ಮಾಡಿದೆ ಎಂದರು.

ಇನ್ನು ವಿದ್ಯುತ್ ದರ ಹೆಚ್ಚಳ ವಿಚಾರದಲ್ಲಿ ರಾಜ್ಯ ಸರ್ಕಾರವೇ ಮಾಹಿತಿ ನೀಡಿದೆ. ಮೇ 12ಕ್ಕೆ ಕೆಇಆರ್ ಸಿ ನೋಟಿಫಿಕೆಶನ್ ಮಾಡಿದೆ. ಆದರೆ ಜೂನ್ 2 ರಂದು ಈ ಸರ್ಕಾರ ಆದೇಶ ಹೊರಡಿಸಿದೆ‌. ಮೇ 12 ರಂದು ಚುನಾವಣೆ ನೀತಿ ಸಂಹಿತೆ‌ ಇರುವುದರಿಂದ ನಾವು ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ.

ರಾಜ್ಯ ಸರ್ಕಾರ ಹೆಚ್ಚಿಗೆ ಆಗುವುದನ್ನು ತಡೆಬಹುದಿತ್ತು. ಈಗ ಹಿಂದಿನ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಸರ್ಕಾರ ತನ್ನ ಲೋಪ ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದೆ ಎಂದರು.

ಪ್ರತಿ ವರ್ಷ ಕೆಇಆರ್ ಸಿ ವಿದ್ಯುತ್ ದರ ಪರಿಷ್ಕರಣೆ ಮಾಡುತ್ತದೆ. ಅದು ಸ್ವಾಯತ್ತ ಸಂಸ್ಥೆ. ಮಾರ್ಚ್ ತಿಂಗಳಲ್ಲಿ ದರ ಪರಿಷ್ಕರಣೆ ಬಂದಾಗ ನಾವು ರಾಜ್ಯ ಸರ್ಕಾರದಿಂದಲೇ ಭರಿಸುವುದಾಗಿ ಹೇಳಿದ್ದೇವು. ಇವರು ನಮ್ಮ ಸರ್ಕಾರದ ಅನೇಕ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಇದನ್ನು ಏಕೆ ತಡೆ ಹಿಡಿಯಲು ಆಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

ಉಚಿತ ಬಸ್ ಯೋಜನೆಯಿಂದ ಜನರಿಗೆ ವಂಚನೆ: ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಹಣ ನೀಡಲು ಆಗುವುದಿಲ್ಲ ಎಂದು ಹೇಳಿರುವುದು ವಾಸ್ತವ. ಅವರಿಗೆ ಪೆಟ್ರೊಲ್ ಬಾಕಿ ಹಣ ಕೊಟ್ಟಿಲ್ಲ. ರಾಜ್ಯ ಸರ್ಕಾರ ಹಣಕಾಸು ವ್ಯವಸ್ಥೆ ಮಾಡಿಕೊಳ್ಳದೇ ಯೋಜನೆ ಘೋಷಿಸಿ ಜಾರಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಯೋಜನೆ ಮುಂದುವರೆಯುವುದಿಲ್ಲ. ಹಣಕಾಸು ಹೊಂದಾಣಿಕೆ ಮಾಡುವ ಜವಾಬ್ದಾರಿ ರಾಜ್ಯ ಸರ್ಕಾರದ ಹೊಣೆ ಇದೆ. ಫ್ರೀ ಬಸ್ ಯೋಜನೆ ಜನರಿಗೆ ವಂಚಿಸುವ ಕೆಲಸವಾಗಿದೆ. ಇದು ಬಹಳ ದಿನ ನಡೆಯುವುದಿಲ್ಲ ಎಂದರು.

ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್, ರೈತರ ಪಂಪ್ ಸೆಟ್ ಗೆ ಉಚಿತ್ ವಿದ್ಯುತ್, ಸೇರಿದಂತೆ ಸುಮಾರು 30 ಸಾವಿರ ಕೋಟಿ ಸಬ್ಸಿಡಿ ಇದೆ. ಈಗ ಇವರು ಘೊಷಣೆ ಮಾಡಿರುವ ಯೋಜನೆಗಳಿಗೆ 59 ಸಾವಿರ ಕೋಟಿ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಸುಮಾರು 90 ಸಾವಿರ ಕೋಟಿ ರೂ. ಖರ್ಚಾಗಲಿದೆ. ನಾನು ಎರಡು ಬಾರಿ ಬಜೆಟ್ ಮಂಡನೆ ಮಾಡಿದ್ದೇನೆ ಎಂದರು.

ಇದೇ ವೇಳೆ ಹೊಂದಾಣಿಕೆ ರಾಜಕಾರಣ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾನು ಯಾವುದೇ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದರು.

ಗೊಂದಲವಿಲ್ಲ: ವಿಪಕ್ಷ ನಾಯಕನ ಆಯ್ಕೆ ವಿಳಂಬ ವಿಚಾರ. ಯಾವುದೇ ಗೊಂದಲ ಇಲ್ಲ, ವಿಳಂಬ ಆಗಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಇನ್ನೂ ಚರ್ಚೆಗೆ ಬಂದಿಲ್ಲ ಅಷ್ಟೇ. ಜುಲೈ 3 ರಿಂದ ಅಧಿವೇಶನ ಇದೆ, ಅದಕ್ಕೂ ಮೊದಲು ವಿಪಕ್ಷ ನಾಯಕನ ಆಯ್ಕೆ ಮಾಡುತ್ತೇವೆ ಎಂದರು.

ಕಾಂಗ್ರೆಸ್ ನ ಎಟಿಎಂ ಸಂಸ್ಕೃತಿ: ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸಭೆ ನಡೆಸಿರುವುದು ಹೊಸದೇನಲ್ಲ.‌ ಕಾಂಗ್ರೆಸ್ ನಲ್ಲಿ ಈ ರೀತಿಯ ಸಂಸ್ಕೃತಿ ಇದೆ. ಈ‌ ಹಿಂದೆಯೂ ರಾಜ್ಯ ಉಸ್ತುವಾರಿ ವಹಿಸಿದವರು ಸಭೆ ನಡೆಸಿದ್ದಾರೆ‌. ಅವರು ಈಗಾಗಲೇ ರಾಜ್ಯವನ್ನು ಎಟಿಎಂ ಮಾಡಲು ನಿರ್ಧರಿಸಿದ್ದಾರೆ. ಅದು ತಪ್ಪದಂತೆ ನೋಡಿಕೊಳ್ಳಲು ಸಭೆ ಮಾಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸಂಸದರಾದ ಪಿ‌.ಸಿ. ಮೊಹನ್, ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next