Advertisement
ಕೆಥೋಲಿಕ್ ಕ್ರೈಸ್ತರು ಪ್ರಾರ್ಥನೆಗೆ ಬಳಸುವ ಜಪ ಮಾಲೆಗಳ ಜಾಗತಿಕ ಮಟ್ಟದ ಪ್ರದರ್ಶನ ರೊಜಾರಿಯೋ ಕೆಥಡ್ರಲ್ ಆವರಣದಲ್ಲಿರುವ ರೊಜಾರಿಯೋ ಕಲ್ಚರಲ್ ಹಾಲ್‌ನಲ್ಲಿ ಗುರುವಾರ ಪ್ರಾರಂಭವಾಗಿದ್ದು, ನ. 12ರ ತನಕ ಪ್ರತಿದಿನಬೆಳಗ್ಗೆ 10ರಿಂದ ರಾತ್ರಿ 8ರ ತನಕ ನಡೆಯಲಿದೆ. ಕೇರಳದ ಸಾಬೂ ಎಂಬವರು ಇದನ್ನು ಸಂಘಟಿಸಿದ್ದು, ಇದು ಅವರ 125ನೇ ಪ್ರದರ್ಶನವಾಗಿದೆ.
Related Articles
Advertisement
‘ನನಗೆ ಮೇರಿ ಮಾತೆಯ ಮೇಲಣ ಭಕ್ತಿ ಮತ್ತು ಜಪ ಮಾಲೆಯ ಪ್ರಾರ್ಥನೆಯ ಪರಂಪರೆ ನನ್ನ ಕುಟುಂಬದಿಂದ ಬಳುವಳಿಯಾಗಿ ಬಂದಿದೆ. 1981ರಲ್ಲಿ ನನ್ನ ಅಜ್ಜ ಮರಣ ಶಯ್ಯೆಯಲ್ಲಿದ್ದಾಗ ನೀಡಿದ ಜಪ ಮಾಲೆಯು ನನ್ನ ಭಕ್ತಿ ಮತ್ತು ಶ್ರದ್ಧೆಗೆ ಮತ್ತಷ್ಟು ಉತ್ತೇಜನ ನೀಡಿತು. ವೆಲಂಕಣಿ ಮಾತೆ ಧರಿಸಿದ್ದ ಎರಡು ಜಪ ಮಾಲೆಗಳು ನನ್ನ ಕೈ ಸೇರಿದ ಬಳಿಕ ನಾನು ಜಪ ಮಾಲೆಗಳ ಸಂಗ್ರಹವನ್ನು ಆರಂಭಿಸಿದೆ’ ಎನ್ನುತ್ತಾರೆ ಸಾಬೂ.
‘ಜಪ ಮಾಲೆಗಳ ಸಂಗ್ರಹದ ಕಾಯಕವನ್ನು ಮುಂದುವರಿಸಿದಾಗ ದೇಶ ವಿದೇಶಗಳ ಬಿಷಪರು ಬಳಸುತ್ತಿದ್ದ ಜಪ ಮಾಲೆಗಳು ಲಭಿಸಿದವು. ಈಗ 800ಕ್ಕೂ ಮಿಕ್ಕಿ ಹಳೆಯ ಜಪ ಮಾಲೆಗಳಿವೆ. ಕಾರ್ಡಿನಲ್‌ಗಳು, ಬಿಷಪರು, ಧರ್ಮ ಗುರುಗಶು, ಧರ್ಮ ಭಗಿನಿಯರು, ಸ್ನೇಹಿತರು, ಹಿತೈಷಿಗಳು ಜಪ ಮಾಲೆಗಳನ್ನು ನೀಡಿದ್ದು, ಪ್ರಸ್ತುತ 60,000ದಷ್ಟು ಸಂಗ್ರಹವಿದೆ. ಮದರ್ ತೆರೇಸಾ, ಪೋಪ್ ಜಾನ್ ಪಾವ್ಲ್ ದ್ವಿತೀಯ, ಪೋಪ್ ಬೆನೆಡಿಕ್ಟ್ 16, ಈಗಿನ ಪೋಪ್ ಫ್ರಾನ್ಸಿಸ್ ಅವರು ಆಶೀರ್ವಚನ ಮಾಡಿದ ಜಪ ಮಾಲೆಗಳಿವೆ. ಜೆರುಸಲೆಂ, ಬೆತ್ಲೆಹೇಂ, ಫಾತಿಮಾ, ಲೂರ್ಡ್ಸ್, ಕಿಬಿಹೊ, ನಾಕ್, ಅಮೆರಿಕದ ಜಪ ಮಾಲೆಗಳಿವೆ’ ಎನ್ನುತ್ತಾರೆ.
ಬಿಷಪ್ ಉದ್ಘಾಟನೆಮಂಗಳೂರು ಧರ್ಮ ಪ್ರಾಂತದ ಬಿಷಪ್ ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಗುರುವಾರ ಈ ಜಾಗತಿಕ ಮಟ್ಟದ ಜಪ ಮಾಲೆಗಳ ಪ್ರದರ್ಶನವನ್ನು ಉದ್ಘಾಟಿಸಿದರು. ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಡೆನಿಸ್ ಮೊರಾಸ್ ಪ್ರಭು, ಪಾಲನಾ ಪರಿಷತ್ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಶಾಸಕ ಜೆ.ಆರ್.ಲೋಬೋ, ಸಾಬು, ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ಟೆಲಿನೊ, ಅರ್ಸುಲಾಯ್ನ ಫ್ರಾನ್ರಿಸ್ಕನ್ ಧರ್ಮ ಭಗಿನಿಯರ ಸಂಘಟನೆಯ ಸುಪೀರಿಯರ್ ಸಿ| ರೀಟಾ ವಾಸ್ ಅವರು ವೇದಿಕೆಯಲ್ಲಿದ್ದರು. ರೊಜಾರಿಯೋ ಕೆಥೆಡ್ರಲ್‌ನ ಪ್ರಧಾನ ಗುರು ಫಾ| ಜೆ.ಬಿ. ಕ್ರಾಸ್ತಾ ಸ್ವಾಗತಿಸಿದರು. ಉಪಾಧ್ಯಕ್ಷ ಸೈಮನ್, ಕಾರ್ಯದರ್ಶಿ ಎಲಿಜಬೆತ್ ರೋಚ್ ಮತ್ತಿತರರು ಉಪಸ್ಥಿತರಿದ್ದರು. ಕೆಥೆಡ್ರಲ್‌ನ 450ನೇ ವರ್ಷದ ಸ್ಮರಣಾರ್ಥ
ರೊಜಾರಿಯೋ ಕೆಥೆಡ್ರಲ್ ಅಥವಾ ಮಹಾ ದೇವಾಲಯವು ಅವಿಭಜಿತ ಮಂಗಳೂರು ಧರ್ಮ ಪ್ರಾಂತದ (ದಕ್ಷಿಣ ಕನ್ನಡ,
ಉಡುಪಿ ಜಿಲ್ಲೆ ಮತ್ತು ಕಾಸರಗೋಡು) ಪ್ರಥಮ ಚರ್ಚ್. ಜಪ ಮಾಲಾ ಮಾತೆ (ಅವರ್ ಲೇಡಿ ಆಫ್ ರೋಜರಿ)ಗೆ ಸಮರ್ಪಿಸಿದ ಈ ಮಹಾ ದೇವಾಲಯಕ್ಕೆ 450 ವರ್ಷಗಳಾಗುತ್ತಿರುವ ನೆನಪಿಗೆ ಹಾಗೂ 2018ನೇ ವರ್ಷವನ್ನು ಜಪ ಮಾಲೆಯ ಪ್ರಾರ್ಥನಾ ವರ್ಷವಾಗಿ ಆಚರಿಸಲು ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದರ್ಶನ.