ಶ್ರೀನಗರ: ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಖೇರನ್ ಸೆಕ್ಟರ್ ನ ದೂಧ್ ನಿಯಾಲ್ ಎಂಬಲ್ಲಿ ಭಾರತೀಯ ಭದ್ರತಾ ಪಡೆಗಳು ಉಗ್ರರು ಹಾಗೂ ಪಾಕ್ ನೆಲದಲ್ಲಿನ ಉಗ್ರ ಶಿಬಿರಗಳ ಮೇಲೆ ಎಪ್ರಿಲ್ 10ರಂದು ನಡೆಸಿದ್ದ ಪ್ರತೀಕಾರ ದಾಳಿಯಲ್ಲಿ 15 ಪಾಕ್ ಯೋಧರು, 8 ಉಗ್ರಗಾಮಿಗಳು ಹಾಗೂ ಇತರೇ ಇಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಗುಪ್ತಚರ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಗಡಿಯಲ್ಲಿ ಉಗ್ರರ ವಿರುದ್ಧದ ಆಪರೇಷನ್ ‘ರಂಡೋರಿ ಬೆಹಕ್’ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಭಾರತೀಯ ವಿಶೇಷ ಪಡೆಯ ಐವರು ಕಮಾಂಡೋಗಳನ್ನು ಹತ್ಯೆ ಮಾಡಿದ್ದ ಪಾಕಿಸ್ಥಾನಿ ಉಗ್ರರ ವಿರುದ್ಧ ಭಾರತೀಯ ಸೇನೆ ಸೇಡು ತೀರಿಸಿಕೊಂಡಿದೆ. ಗಡಿ ನಿಯಂತ್ರಣ ರೇಖೆಗೆ ಸನಿಹದಲ್ಲಿದ್ದ ಪಾಕ್ ಆಕ್ರಮಿತ ಕಾಶ್ಮೀರ ನೆಲದಲ್ಲಿ ದಾಳಿ ನಡೆಸಿ ಉಗ್ರರ ಅಡಗುದಾಣಗಳನ್ನು ಧ್ವಂಸಗೊಳಿಸಿದೆ.
ಕಮಾಂಡೋಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಭಾರತೀಯಸೇನೆಯನ್ನು ಪಾಕ್ ಶುಕ್ರವಾರ ರಾತ್ರಿ ಕೆಣಕಿ ಚೆಕ್‌ಪೋಸ್ಟ್‌ಗಳ ಕಡೆಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ತಿರುಗೇಟು ನೀಡಿದ ಸೇನೆಯು ವಾಯುದಾಳಿ ನಡೆಸಿ, ಎಲ್‌ಒಸಿ ಆಚೆ ಬದಿಯ ಉಗ್ರರ ಅಡಗುದಾಣಗಳನ್ನು ಧ್ವಂಸಗೊಳಿಸಿದೆ.
ಪಾಕಿಸ್ಥಾನದ ಕದನ ವಿರಾಮ ಉಲ್ಲಂಘನೆಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿರುವ ಉಗ್ರ ನೆಲೆಗಳು ಹಾಗೂ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಭಾರತೀಯ ಸೇನೆ ಕೃಷ್ಣಗಂಗಾ ನದಿ ತಟದ ದೂಧ್ ನಿಯಾಲ್ ಪ್ರದೇಶವನ್ನು ಗುರಿಮಾಡಿಕೊಂಡಿತ್ತು. ಬೆಟ್ಟಗಳಿಂದಾವೃತವಾಗಿರುವ ಈ ಪಟ್ಟಣದಲ್ಲಿರುವ ಕೇರನ್ ಸೆಕ್ಟರ್ ನಲ್ಲಿ ಎಪ್ರಿಲ್ 5ರಂದು ವಿಶೇಷ ಕಾರ್ಯಾಚರಣೆ ನಡೆಸಿದ್ದ ಸೇನೆಯ ವಿಶೇಷ ಕಮಾಂಡೋ ದಳಗಳು ಐವರು ಉಗ್ರಗಾಮಿಗಳನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿತ್ತು.
ಭಾರತದ ಕಡೆಯಿಂದ ನಡೆದಿರುವ ಸೇನಾ ದಾಳಿಯನ್ನು ಪಾಕ್ ಸೇನೆ ಖಚಿತಪಡಿಸಿದೆ. ಗಡಿನಿಯಂತ್ರನ ರೇಖೆಯುದ್ದಕ್ಕೂ ಶಾರ್ದಾ, ದೂಧ್ ನಿಯಾಲ್ ಮತ್ತು ಶಾಹ್ ಕೋಟ್ ಸೆಕ್ಟರ್ ಗಳಲ್ಲಿ ಭಾರತೀಯ ಸೇನೆ ಫೈರಿಂಗ್ ನಡೆಸಿದೆ ಮತ್ತು 15 ವರ್ಷದ ಬಾಲಕಿಯೂ ಸೇರಿದಂತೆ ಈ ದಾಳಿಯಲ್ಲಿ ನಾಲ್ಕು ಜನ ನಾಗರಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪಾಕ್ ಹೇಳಿಕೊಂಡಿದೆ.
2020ರಲ್ಲಿ ಇಲ್ಲಿಯವರೆಗೆ ಭಾರತ 708 ಸಲ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಇಸ್ಲಾಮಾಬಾದ್ ಆರೋಪಿಸಿದೆ ಮತ್ತು ಇದರಿಂದಾಗಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಹಾಗೂ 42 ಜನ ಗಾಯಗೊಂಡಿದ್ದಾರೆ ಎಂದು ಪಾಕ್ ಆರೋಪಿಸಿದೆ.
ಲಷ್ಕರ್, ಜೈಶ್ ಮತ್ತು ಹಿಜ್ಬುಲ್ ಉಗ್ರ ಸಂಘಟನೆಗಳಿಗೆ ಸೇರಿದ್ದ ಸುಮಾರು 160 ಉಗ್ರರು ಭಾರತದೊಳಕ್ಕೆ ನುಸುಳಲು ಗಡಿನಿಯಂತ್ರಣ ರೇಖೆಯ ಬಳಿ ಸನ್ನದ್ಧರಾಗಿದ್ದ ಸಂದರ್ಭದಲ್ಲಿ ಭಾರತಕ್ಕೆ ಈ ದಾಳಿ ನಡೆಸದೇ ವಿಧಿಯಿರಲಿಲ್ಲ ಎಂದು ಗುಪ್ತಚರ ಮೂಲಗಳ ಮಾಹಿತಿ ತಿಳಿಸಿದೆ.