ದೋಹಾ: ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೆ ಐತಿಹಾಸಿಕ ಪ್ರವೇಶ ಪಡೆಯುವ ಅವಕಾಶವನ್ನು ಭಾರತ ಕಳೆದುಕೊಂಡಿದೆ. ಮಂಗಳವಾರ ನಡೆದ ಏಷ್ಯನ್ ಚಾಂಪಿಯನ್ ನಲ್ಲಿ ಕತಾರ್ 2-1 ಗೋಲುಗಳಿಂದ ವಿಜಯಶಾಲಿಯಾಯಿತು.
37 ನೇ ನಿಮಿಷದಲ್ಲಿ ಲಾಲಿಯನ್ಜುವಾಲಾ ಚಾಂಗ್ಟೆ ಅವರು ದಾಖಲಿಸಿದ ಗೋಲಿನಿಂದ ಭಾರತ ಮುಂದಿತ್ತು. ಕತಾರ್ ನ ಯೂಸುಫ್ ಐಮೆನ್ 73 ನೇ ನಿಮಿಷದಲ್ಲಿ ಬಾರಿಸಿದ ವಿವಾದಾತ್ಮಕ ಗೋಲು ನ್ಯಾಯಯುತವೆಂದು ರೆಫರಿ ನಿರ್ಣಯಿಸಿದಾಗ ಭಾರತಕ್ಕೆ ಆಘಾತ ಎದುರಾಯಿತು.ರೆಫರಿ ನೀಡಿದ ಕಳಪೆ ತೀರ್ಪು ಭಾರತಕ್ಕೆ ಮಾರಕವಾಗಿ ಪರಿಣಮಿಸಿತು.
85ನೇ ನಿಮಿಷದಲ್ಲಿ ಅಹ್ಮದ್ ಅಲ್-ರಾವಿ ಮೂಲಕ ಕತಾರ್ ತನ್ನ ಎರಡನೇ ಗೋಲು ಗಳಿಸಿದಾಗ ವಿವಾದಾತ್ಮಕ ನಿರ್ಧಾರವು ಪಂದ್ಯದ ದಿಕ್ಕನ್ನು ತಿರುಗಿಸಿತು. ವಿವಾದಾತ್ಮಕ ಗೋಲಿನಿಂದ ಭಾರತದ ಕನಸು ಕೆಲವೇ ನಿಮಿಷಗಳಲ್ಲಿ ಛಿದ್ರವಾಯಿತು.
ಮೋಸವಾಗಿದ್ದು ಹೇಗೆ?
ಚೆಂಡು ಏರಿಯಾ ಗೆರೆಯನ್ನು ದಾಟಿ ಹೊರ ಹೋಗಿತ್ತು. ಹೀಗಾಗಿ ಭಾರತದ ಗೋಲ್ ಕೀಪರ್, ನಾಯಕ ಗುರ್‌ಪ್ರೀತ್ ಸಂಧು ಸುಮ್ಮನಾದರು. ಈ ವೇಳೆ ಮೋಸದ ಆಟವಾಡಿದ ಅಲ್-ಹಸನ್ ಚೆಂಡನ್ನು ಒಳಕ್ಕೆಳೆದುಕೊಂಡು ಯೂಸುಫ್ ಐಮೆನ್ ಗೆ ಪಾಸ್ ಮಾಡಿ ಗೋಲು ಮಾಡಿ ಸಂಭ್ರಮಿಸಿದರು. ಭಾರತದ ಆಟಗಾರರು ಗೋಲನ್ನು ಪರಿಗಣಿಸಬಾರದು ಎಂದು ತೀವ್ರ ಪ್ರತಿರೋಧ ತೋರಿದರೂ, ರೆಫರಿಗಳು ಪರಿಗಣಿಸಲೇ ಇಲ್ಲ.