ರಾಸ್ ಅಬು ಅಬೌದ್: ಕಾಲ್ಚೆಂಡಿನ ಮೋಡಿಗಾರ ಕೈಲಿಯಾನ್ ಎಂಬಪ್ಪೆ ಬಾರಿಸಿದ ಅವಳಿ ಗೋಲುಗಳ ಸಾಹಸದಿಂದ ಡೆನ್ಮಾರ್ಕ್ ವಿರುದ್ಧ ಹಾಲಿ ಚಾಂಪಿಯನ್ ಫ್ರಾನ್ಸ್ 2-1 ಅಂತರದ ಜಯಭೇರಿ ಮೊಳಗಿಸಿದೆ.
ಇದರೊಂದಿಗೆ ಈ ಕೂಟದ ಮೊದಲೆರಡೂ ಪಂದ್ಯಗಳನ್ನು ಗೆದ್ದ ಮೊದಲ ತಂಡವೆಂಬ ಹೆಗ್ಗಳಿಕೆಯೊಂದಿಗೆ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿದ ಪ್ರಥಮ ತಂಡವೆಂಬ ಹಿರಿಮೆಗೂ ಪಾತ್ರವಾಗಿದೆ.
ಒಂದು ಗಂಟೆ ಕಾಲ ಎರಡೂ ತಂಡಗಳು ದಿಟ್ಟ ಹೋರಾಟವನ್ನೇ ನಡೆಸಿದವು. ಅನಂತರವೇ ಈ ಪಂದ್ಯದ ಮೂರೂ ಗೋಲುಗಳು ದಾಖಲಾದದ್ದು. 61ನೇ ನಿಮಿಷದಲ್ಲಿ ಎಂಬಪೆ ಖಾತೆ ತೆರೆದರು. ಆದರೆ ಫ್ರಾನ್ಸ್ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. 68ನೇ ನಿಮಿಷದಲ್ಲಿ ಆ್ಯಂಡ್ರಸ್ ಕ್ರಿಸ್ಟೆನ್ಸನ್ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. 86ನೇ ನಿಮಿಷದಲ್ಲಿ ಎಂಬಪೆ ಮತ್ತೆ ಮ್ಯಾಜಿಕ್ ಮಾಡಿದರು. ಪಂದ್ಯದ ಡ್ರಾ ಸಾಧ್ಯತೆಯನ್ನು ವಿಫಲಗೊಳಿಸಿ ಫ್ರಾನ್ಸ್ ಹೀರೋ ಎನಿಸಿದರು.
ಸ್ಟಾರ್ ಆಟಗಾರ ಕರೀಂ ಬೆಂಝೆಮ ಅನುಪಸ್ಥಿತಿಯಲ್ಲೂ ಫ್ರಾನ್ಸ್ ಈ ಕೂಟದಲ್ಲಿ ತೋರಿದ ದಿಟ್ಟ ಹೋರಾಟ ಫುಟ್‌ಬಾಲ್ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ. ಮೊದಲ ಪಂದ್ಯದಲ್ಲಿ ಅದು ಆಸ್ಟ್ರೇಲಿಯವನ್ನು ಮಣಿಸಿತ್ತು. ಟ್ಯುನೀಶಿಯವನ್ನು ಮಣಿಸುವ ಮೂಲಕ ಖಾತೆ ತೆರೆದ ಕಾಂಗರೂ ಪಡೆ ದ್ವಿತೀಯ ಸ್ಥಾನದಲ್ಲಿದೆ. ಡೆನ್ಮಾರ್ಕ್ ಇನ್ನೂ ಗೆಲುವಿನ ಮುಖ ಕಂಡಿಲ್ಲ. ಒಂದು ಪಂದ್ಯ ಡ್ರಾಗೊಂಡಿದ್ದು, ಕೊನೆಯ ಲೀಗ್ ಪಂದ್ಯದಲ್ಲಿ ಆಸೀಸ್ ಸವಾಲನ್ನು ಎದುರಿಸಬೇಕಿದೆ.
ಫಲಿತಾಂಶ
ಫ್ರಾನ್ಸ್: 02
ಡೆನ್ಮಾರ್ಕ: 01