Advertisement
ಬ್ರಝಿಲ್-ಕ್ರೊವೇಶಿಯ ನಡುವಿನ ಮೊದಲ ಕ್ವಾರ್ಟರ್ ಫೈನಲ್ ತೀವ್ರ ಪೈಪೋಟಿಯಿಂದ ಕೂಡಿತ್ತು. ನಿಗದಿತ ಅವಧಿಯಲ್ಲಿ ಯಾರಿಂದಲೂ ಗೋಲು ದಾಖಲಾಗಲಿಲ್ಲ. ಹೆಚ್ಚುವರಿ ಅವಧಿಯಲ್ಲಿ (105 +1ನೇ ನಿಮಿಷ) ನೇಮರ್ ಖಾತೆ ತೆರೆದರು. ಬ್ರಝಿಲ್ ಈ ಮುನ್ನಡೆಯೊಂದಿಗೆ ಗೆದ್ದು ಬಂದೀತೆಂಬ ನಿರೀಕ್ಷೆ ಅಭಿಮಾನಿಗಳದ್ದಾಗಿತ್ತು. ಆದರೆ ಕ್ರೊವೇಶಿಯ 117ನೇ ನಿಮಿಷದಲ್ಲಿ ತಿರುಗಿ ಬಿತ್ತು. ಬ್ರುನೊ ಪೆಟ್ಕೊàವಿಕ್ ಬ್ರಝಿಲ್‌ಗೆ ಬಲವಾದ ಪೆಟ್ಟು ಕೊಟ್ಟರು. ಪಂದ್ಯ 1-1ರಿಂದ ಸಮನಾಗಿ ಶೂಟೌಟ್‌ನತ್ತ ಹೊರಳಿತು. ಇಲ್ಲಿ ಕ್ರೊವೇಶಿಯ 4 ಗೋಲು ಸಿಡಿಸಿದರೆ, ಬ್ರಝಿಲ್‌ಗೆ ಬಾರಿಸಲು ಸಾಧ್ಯವಾದದ್ದು ಎರಡೇ ಗೋಲು.
Related Articles
ಸೋಲಿನಲ್ಲೂ ಸ್ಟಾರ್ ಆಟಗಾರ ನೇಮರ್ ಪಾಲಿನ ಸಮಾಧಾನಕರ ಸಂಗತಿಯೆಂದರೆ, ಫುಟ್‌ಬಾಲ್ ದಂತಕತೆ ಪೀಲೆ ಬ್ರಝಿಲ್ ಪರ ದಾಖಲಿಸಿದ 76 ಗೋಲುಗಳ ದಾಖಲೆಯನ್ನು ಸರಿದೂಗಿಸಿದ್ದು. ಇದನ್ನು ಆಸ್ಪತ್ರೆಯಿಂದಲೇ ವೀಕ್ಷಿಸಿದ ಪೀಲೆ, ತನ್ನ ನಾಡಿನ ಸ್ಟಾರ್ ಆಟಗಾರನಿಗೆ ಅಭಿನಂದನೆ ಸಲ್ಲಿಸಿದರು.
Advertisement
“ನಿಮ್ಮ ಬೆಳವಣಿಗೆಯನ್ನು ನಾನು ಕಾಣುತ್ತಲೇ ಬಂದಿದ್ದೇನೆ. ಪ್ರತೀ ಪಂದ್ಯದ ವೇಳೆಯೂ ನಿಮಗೆ ಚಿಯರ್ ಹೇಳಿದ್ದೇನೆ. ನನ್ನ ಗೋಲುಗಳ ದಾಖಲೆಯನ್ನು ಸರಿದೂಗಿಸಿದ್ದಕ್ಕೆ ಅಭಿನಂದನೆಗಳು. ನನ್ನದು ಸುಮಾರು 50 ವರ್ಷಗಳ ಹಿಂದಿನ ದಾಖಲೆ. ಈತನಕ ಯಾರೂ ಇದರ ಸಮೀಪ ಬಂದಿರಲಿಲ್ಲ. ಓರ್ವ ಕ್ರೀಡಾಪಟುವನ್ನು ಹುರಿದುಂಬಿಸುವುದು ಮತ್ತೋರ್ವ ಕ್ರೀಡಾಪಟುವಿನ ಕರ್ತವ್ಯ. ಆ ಕೆಲಸ ನಾನು ಮಾಡುತ್ತಲೇ ಬಂದಿದ್ದೇನೆ’ ಎಂದು ಪೀಲೆ ಹೇಳಿದರು.
“ದುರದೃಷ್ಟವಶಾತ್ ನಮ್ಮ ಪಾಲಿಗೆ ಇದು ಸಂತೋಷದ ದಿನವಾಗಲಿಲ್ಲ’ ಎಂದೂ ಪೀಲೆ ಹೇಳಿದರು.
ಪೀಲೆ 92 ಪಂದ್ಯಗಳಿಂದ 76 ಗೋಲು ಹೊಡೆದರೆ, ನೇಮರ್ ಇದಕ್ಕೆ 124 ಪಂದ್ಯ ಆಡಬೇಕಾಯಿತು. ಪೀಲೆ 1957-1971ರ ಅವಧಿಯಲ್ಲಿ ಬ್ರಝಿಲ್‌ನ ಸ್ಟಾರ್ ಆಟಗಾರನಾಗಿ ಮೆರೆದಿದ್ದರು. ಇವರ ಕಾಲಾವಧಿಯಲ್ಲಿ ಬ್ರಝಿಲ್ 3 ಸಲ ವಿಶ್ವ ಚಾಂಪಿಯನ್ ಆಗಿತ್ತು. 1958ರಲ್ಲಿ ಬ್ರಝಿಲ್ ಕಪ್ ಎತ್ತುವಾಗ ಆ ತಂಡದಲ್ಲಿದ್ದ ಪೀಲೆ ವಯಸ್ಸು ಕೇವಲ 17 ವರ್ಷ!
2014ರ ಬಳಿಕ ಆರ್ಜೆಂಟೀನಾ ಹೆಜ್ಜೆ…ಆರಂಭಿಕ ಪಂದ್ಯದಲ್ಲೇ ಸೌದಿ ಅರೇಬಿಯ ವಿರುದ್ಧ ಸೋತು ಎಲ್ಲ ದಿಕ್ಕುಗಳಿಂದಲೂ ಟೀಕೆಗೆ ಗುರಿಯಾಗಿದ್ದ ಲಿಯೋನೆಲ್ ಮೆಸ್ಸಿ ಅವರ ಆರ್ಜೆಂಟೀನಾ ಈಗ ಸೆಮಿ ಫೈನಲ್‌ಗೆ ಲಗ್ಗೆ ಹಾಕಿದೆ. ಅದು ವಿಶ್ವಕಪ್ ಉಪಾಂತ್ಯ ತಲುಪುತ್ತಿರುವುದು 2014ರ ಬಳಿಕ ಇದೇ ಮೊದಲು. “ಲುಸೈಲ್ ಸ್ಟೇಡಿಯಂ’ನಲ್ಲಿ ನಡೆದ ದ್ವಿತೀಯ ಕ್ವಾರ್ಟರ್ ಫೈನಲ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಆರ್ಜೆಂಟೀನಾ 4-3 ಗೋಲುಗಳ ಶೂಟೌಟ್ ಗೆಲುವು ದಾಖಲಿಸಿತು. ಎಲ್ಲವೂ ಯೋಜನೆಯಂತೆ ಸಾಗಿದ್ದರೆ ಆರ್ಜೆಂಟೀನಾ ನಿಗದಿತ ಅವಧಿಯಲ್ಲೇ ಜಯ ಕಾಣುತ್ತಿತ್ತು. 35ನೇ ನಿಮಿಷದಲ್ಲಿ ನಹೂಲ್ ಮೊಲಿನ, 73ನೇ ನಿಮಿಷದಲ್ಲಿ ಲಿಯೋನೆಲ್ ಮೆಸ್ಸಿ ಗೋಲು ಸಿಡಿಸಿ ಆರ್ಜೆಂಟೀನಾಕ್ಕೆ 2-0 ಭರ್ಜರಿ ಮುನ್ನಡೆ ಒದಗಿಸಿದ್ದರು. ಆದರೆ ಇದನ್ನು ಉಳಿಸಿಕೊಳ್ಳಲು ಮಾತ್ರ ಸಾಧ್ಯವಾಗಲಿಲ್ಲ. 83ನೇ ಹಾಗೂ 90+ 11ನೇ ನಿಮಿಷದಲ್ಲಿ ವೂಟ್ ವೆಗೋರ್ಸ್ಡ್ ಅವಳಿ ಗೋಲು ಬಾರಿಸಿ ನೆದರ್ಲೆಂಡ್ಸ್ ಹೀರೋ ಎನಿಸಿದರು. ಪಂದ್ಯ ಹೆಚ್ಚುವರಿ ಅವಧಿಗೆ ಹೋಯಿತು. ಈ 30 ನಿಮಿಷಗಳಲ್ಲಿ ಯಾರಿಂದಲೂ ಗೋಲು ಹೊಡೆಯಲು ಸಾಧ್ಯವಾಗಲಿಲ್ಲ. ಶೂಟೌಟ್ ಅನಿವಾರ್ಯವಾಯಿತು. ಶೂಟೌಟ್‌ನಲ್ಲಿ ಆರ್ಜೆಂಟೀನಾ ವಿಫಲವಾದದ್ದು ಒಂದು ಹೊಡೆತದಲ್ಲಿ ಮಾತ್ರ. ಎಂಜೊ ಮಾರ್ಟಿನೆಜ್ ಬಾರಿಸಿದ ಚೆಂಡು ವೈಡ್ ಆಗಿ ಹೋಯಿತು. ಆರ್ಜೆಂಟೀನಾದ ಕೀಪರ್ ಎಮಿ ಮಾರ್ಟಿನೆಜ್ ಟಾಪ್ ಕ್ಲಾಸ್ ಕೀಪಿಂಗ್ ಮೂಲಕ ಡಚ್ ಪಡೆಯ ಮೊದಲೆರಡು ಹೊಡೆತಗಳನ್ನು ತಡೆದು ತಂಡಕ್ಕೆ ಸ್ಫೂರ್ತಿ ತುಂಬಿದರು.