ಬ್ರಿಸ್ಬೆನ್: ಆಸ್ಟ್ರೇಲಿಯ ತಂಡವು ಪೆನಾಲ್ಟಿ ಕಿಕ್ ಮೂಲಕ ಫ್ರಾನ್ಸ್ ತಂಡವನ್ನು ಸೋಲಿಸಿ ಇದೇ ಮೊದಲ ಬಾರಿ ಫಿಫಾ ವನಿತಾ ವಿಶ್ವಕಪ್ ಫುಟ್‌ಬಾಲ್ ಕೂಟದ ಸೆಮಿಫೈನಲ್ ಹಂತಕ್ಕೇರಿದೆ.
ಆಸ್ಟ್ರೇಲಿಯ ಪರ ಸಿಕ್ಕಿದ 10ನೇ ಪೆನಾಲ್ಟಿ ಅವಕಾಶದಲ್ಲಿ ಕೋರ್ಟ್ನಿ ವಿನೆ ಅವರು ಗೋಲನ್ನು ದಾಖಲಿಸುವ ಮೂಲಕ ಆಸ್ಟ್ರೇಲಿಯ ತಂಡವು ಶೂಟೌಟ್‌ನಲ್ಲಿ 7-6 ಅಂತರದಿಂದ ಗೆದ್ದು ಸೆಮಿಫೈನಲ್ ತಲುಪಿತು. ಈ ಮೊದಲು ನಿಗದಿತ ಮತ್ತು ಹೆಚ್ಚುವರಿ ಅವಧಿಯ ಆಟದ ವೇಳೆ ಉಭಯ ತಂಡಗಳು ಯಾವುದೇ ಗೋಲು ದಾಖಲಿಸದೇ ಸಮ ಹೋರಾಟ ನೀಡಿದ್ದವು.
ಮುಂದಿನ ಬುಧವಾರ ನಡೆಯುವ ಸೆಮಿಫೈನಲ್ ಹೋರಾಟದಲ್ಲಿ ಆಸ್ಟ್ರೇಲಿಯ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆಸ್ಟ್ರೇಲಿಯದ ಗೋಲ್‌ಕೀಪರ್ ಮಕೆಂಝಿ ಅರ್ನಾಲ್ಡ್ ಅದ್ಭುತ ನಿರ್ವಹಣೆ ನೀಡಿದ್ದರಿಂದ ತಂಡ ಗೆಲುವು ಸಾಧಿಸುವಂತಾಯಿತು. ಹೆಚ್ಚುವರಿ ಅವಧಿ ಮತ್ತು ಶೂಟೌಟ್‌ನಲ್ಲಿ ಅವರು ಹಲವು ಗೋಲು ಹೊಡೆಯುವ ಅವಕಾಶವನ್ನು ತಪ್ಪಿಸಿದ್ದರಿಂದ ಆಸ್ಟೇಲಿಯ ಮೇಲುಗೈ ಸಾಧಿಸಿತು. ಈ ಮೊದಲು ನಿಗದಿತ ಆಟದ ಸಮಯದಲ್ಲಿ ಎರಡು ತಂಡಗಳಿಗೆ ಗೆಲ್ಲುವ ಅವಕಾಶ ಲಭಿಸಿತ್ತು. ಆದರೆ ಗೋಲ್‌ಕೀಪರ್‌ಗಳ ಉತ್ತಮ ನಿರ್ವಹಣೆಯಿಂದ ಗೋಲು ದಾಖಲಾಗಲಿಲ್ಲ.
ಇಂಗ್ಲೆಂಡಿಗೆ 2-1 ಗೆಲುವು
ದ್ವಿತೀಯ ಅವಧಿಯಲ್ಲಿ ಅಲೆಸ್ಸಿಯಾ ರುಸೊ ಅವರು ಹೊಡೆದ ಗೋಲಿನಿಂದಾಗಿ ಇಂಗ್ಲೆಂಡ್ ತಂಡವು ಕೊಲಂಬಿಯಾವನ್ನು 2-1 ಗೋಲುಗಳಿಂದ ಸೋಲಿಸಿ ಸತತ ಮೂರನೇ ಬಾರಿಗೆ ಸೆಮಿಫೈನಲಿಗೇರಿದ ಸಾಧನೆ ಮಾಡಿತು. ಲಾರೆನ್ ಹೆಂಪ್ ಮೊದಲ ಗೋಲು ಹೊಡೆದಿದ್ದರು.
ಕಣದಲ್ಲಿ ಉಳಿದ ಕಡಿಮೆ ರ್‍ಯಾಂಕಿನ (25ನೇ) ತಂಡವಾಗಿದ್ದ ಕೊಲಂಬಿಯಾ ಲೈಸಿ ಸ್ಯಾಂಟೋಸ್ ಮೂಲಕ ಮೊದಲ ಗೋಲು ಹೊಡೆದಾಗ ಕ್ರೀಡಾಂಗಣದಲ್ಲಿ ಸೇರಿದ 75 ಸಾವಿರ ಪ್ರೇಕ್ಷಕರು ರೋಮಾಂಚನಗೊಂಡಿದ್ದರು.