ಗುವಾಹಟಿ: ಎರಡು ಬಾರಿಯ ಚಾಂಪಿಯನ್ ಘಾನಾ ತಂಡಕ್ಕೆ ಅಂಡರ್ -17 ಫುಟ್ಬಾಲ್ ವಿಶ್ವಕಪ್‌ನಲ್ಲಿ ಹಾಲಿ ರನ್ನರ್ ಅಪ್ ಮಾಲಿ ತಂಡ ಭರ್ಜರಿ ಆಘಾತ ನೀಡಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಶನಿವಾರ ಇಲ್ಲಿನ ಇಂದಿರಾ ಗಾಂಧಿ ಆ್ಯತ್ಲೆಟಿಕ್ಸ್ ಮೈದಾನದಲ್ಲಿ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಾಲಿ 2-1 ಗೋಲುಗಳಿಂದ ಜಯ ಸಾಧಿಸಿದೆ. ಮಾಲಿ ಪರ ಹಡಿj ಡ್ರೇಮ್(15ನೇ ನಿಮಿಷ), ಡಿಮೌಸಾ ಟ್ರಾರೊ (61ನೇ ನಿಮಿಷ) ಗೋಲು ದಾಖಲಿಸಿದರು. ಘಾನಾ ಪರ ಕುದುಸು ಮಹಮ್ಮದ್ (70ನೇ ನಿಮಿಷ) ಏಕೈಕ ಗೋಲು ಸಿಡಿಸಿದರು.
ಕೂಟದಲ್ಲಿ ಗುಂಪು ಹಂತ ಮತ್ತು ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳ ಫಲಿತಾಂಶವನ್ನು ನೋಡಿದಾಗ ಘಾನಾ ತಂಡವೇ ಗೆಲ್ಲುವ ಫೇವರಿಟ್ ಆಗಿತ್ತು. ಆದರೆ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಾಲಿ ಹೋರಾಟ ಅದ್ಭುತವಾಗಿತ್ತು. ಪಂದ್ಯದ ಆರಂಭದಿಂದಲೇ ಮಾಲಿ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿತು. ಇದರ ಫಲವಾಗಿ ಘಾನಾ ಮನೆಗೆ ಹೋಗುವಂತಾಯಿತು.
ಪಂದ್ಯ ಆರಂಭವಾಗಿ 15ನೇ ನಿಮಿಷದಲ್ಲಿ ಮಾಲಿ ತಂಡದ ಹಡಿj ಡ್ರೇಮ್ ಆಕರ್ಷಕವಾಗಿ ಚೆಂಡನ್ನು ಗೋಲಿನ ಬಲೆಯೊಳಗೆ ಸೇರಿಸಿದರು. ಈ ಮೂಲಕ ಮಾಲಿ ಆರಂಭದಲ್ಲಿಯೇ ಮೇಲುಗೈ ಸಾಧಿಸಿತು. ಅಂತಿಮವಾಗಿ ಮೊದಲ ಅವಧಿಯ ಅಂತ್ಯದಲ್ಲಿ ಮಾಲಿ 1-0 ದಿಂದ ಮುನ್ನಡೆ ಪಡೆಯಿತು.
ಎರಡನೇ ಹಂತದಲ್ಲಿ ಉಭಯ ತಂಡಗಳು ಹಲವು ಬಾರಿ ಗೋಲು ದಾಖಲಿಸಲು ಪ್ರಯತ್ನಿಸಿದವು. ಇದರಿಂದಾಗಿ 61ನೇ ನಿಮಿಷದಲ್ಲಿ ಮಾಲಿ ತಂಡದ ಡಿಮೌಸಾ ಟ್ರಾರೊ ಗೋಲು ಬಾರಿಸಿದರು. ಇದರಿಂದಾಗಿ ಮಾಲಿ ಈ ಹಂತದಲ್ಲಿ 2-0 ದಿಂದ ಮುನ್ನಡೆ ಪಡೆದಿತ್ತು. ನಂತರ ನಡೆದ ಹಣಾಹಣಿಯಲ್ಲಿ ಘಾನಾ ತಂಡದ ಕುದುಸು ಮಹಮ್ಮದ್ 70ನೇ ನಿಮಿಷದಲ್ಲಿ ಗೋಲು ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಪಂದ್ಯದೂದ್ದಕ್ಕೂ ಮಾಲಿ ಹೋರಾಟ ಅದ್ಭುತವಾಗಿತ್ತು.
ಘಾನಾ ತಂಡ ಈ ಹಿಂದೆ 1991 ಮತ್ತು 1995ರಲ್ಲಿ ಚಾಂಪಿಯನ್ ಶಿಪ್ ಪಡೆದಿತ್ತು. ಈ ಬಾರಿ ಗುಂಪು ಹಂತದಲ್ಲಿ ರೋಚಕ ಆಟ ಪ್ರದರ್ಶಿಸುವ ಮೂಲಕ ಮತ್ತೂಮ್ಮೆ ಚಾಂಪಿಯನ್ ಪಟ್ಟ ಪಡೆಯುವ ಭರವಸೆ ಮೂಡಿಸಿತ್ತು. ಆದರೆ ಘಾನಾ ಆಸೆಗೆ ಮಾಲಿ ತಣ್ಣೀರು ಸುರಿಸಿತು.
ಇತ್ತ ಮಾಲಿ 2015ರಲ್ಲಿ ನಡೆದ ಕಳೆದ ಬಾರಿಯ ಕಿರಿಯರ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿ ನೈಜೇರಿಯ ವಿರುದ್ಧ 2-0 ದಿಂದ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತವಾಗಿತ್ತು. ಕಿರಿಯರ ವಿಶ್ವಕಪ್‌ನಲ್ಲಿ ಇದೇ ಮಾಲಿ ತಂಡದ ಶ್ರೇಷ್ಠ ಸಾಧನೆಯಾಗಿದೆ.