ಹೊಸದಿಲ್ಲಿ: ಆತಿಥೇಯ ಭಾರತವು ಫಿಫಾ ಅಂಡರ್ 17 ವಿಶ್ವಕಪ್‌ನ “ಎ’ ಬಣದ ತನ್ನ ದ್ವಿತೀಯ ಪಂದ್ಯದಲ್ಲಿ ಬಲಿಷ್ಠ ಎದುರಾಳಿ ಕೊಲಂಬಿಯ ತಂಡದ ಸವಾಲನ್ನು ಎದುರಿಸಲು ಸನ್ನದ್ಧವಾಗಿದೆ.
ವಿಶ್ವಕಪ್ ಪಂದ್ಯದಲ್ಲಿ ಮೊದಲ ಬಾರಿ ಆಡುತ್ತಿರುವ ಭಾರತವು ತನ್ನ ಆರಂಭಿಕ ಪಂದ್ಯದಲ್ಲಿ ಅಮೆರಿಕ ವಿರುದ್ಧ 0-3 ಗೋಲುಗಳಿಂದ ಸೋತಿತ್ತು. ಅಮೆರಿಕ ಆಟಗಾರರನ್ನು ಹೋಲಿಸಿದರೆ ಭಾರತದ ಆಟ ಸಾಧಾರಣ ಮಟ್ಟದಲ್ಲಿತ್ತು. ತವರಿನ ಪ್ರೇಕ್ಷಕರ ಬೆಂಬಲದಿಂದ ಭಾರತ ಏನಾದರೂ ಮ್ಯಾಜಿಕ್ ಮಾಡಿದರಷ್ಟೇ ಕೊಲಂಬಿಯ ವಿರುದ್ಧ ಗೆಲುವು ಕಾಣಬಹುದು.
ಅಂತಿಮ ಪಾಸ್‌ನಲ್ಲಿ ಭಾರತದ ಆಟ ಸುಧಾರಿಸಬೇಕಾಗಿದೆ. ಆದರೆ ಈ ವಿಭಾಗದಲ್ಲಿ ಭಾರತ ಸುಧಾರಿಸಿದರೆ ಸಾಕಾಗುವುದಿಲ್ಲ. ಯಾಕೆಂದರೆ ಎದುರಾಳಿ ಫುಟ್‌ಬಾಲ್‌ನ ಪ್ರತಿಯೊಂದು ವಿಭಾಗದಲ್ಲಿಯೂ ಶ್ರೇಷ್ಠ ನಿರ್ವಹಣೆ ನೀಡುವ ತಂಡವಾಗಿದೆ. ಹಾಗಾಗಿ ಭಾರತ ಬಹಳಷ್ಟು ಎಚ್ಚರಿಕೆಯಿಂದ ಆಡುವುದು ಅಗತ್ಯವಾಗಿದೆ.
ವಿಶ್ವಕಪ್‌ಗೆ ಪಾದಾರ್ಪಣೆಗೈದ ನೈಗರ್ ತಂಡದ ಆಟದಿಂದ ಸ್ಫೂರ್ತಿ ಪಡೆಯಬೇಕಾಗಿದೆ. ನೈಗರ್ ತನ್ನ ಮೊದಲ ಪಂದ್ಯದಲ್ಲಿ ಉತ್ತರ ಕೊರಿಯ ವಿರುದ್ಧ ಗೆಲುವು ಸಾಧಿಸಿತ್ತು. ಆಫ್ರಿಕನ್ ರಾಷ್ಟ್ರಕ್ಕೆ ಇದು ಸಾಧ್ಯವಾದರೆ ಭಾರತ ತಂಡಕ್ಕೂ ಗೆಲುವು ಸಾಧಿಸಲು ಸಾಧ್ಯವಿದೆ. ಆದರೆ ಇದು ಹೇಳಲಿಕ್ಕೆ ಮಾತ್ರ ಸುಲಭ.
ಮೊದಲ ಪಂದ್ಯದಲ್ಲಿ ಘಾನಾ ವಿರುದ್ಧ ಸೋತಿದ್ದ ಕೊಲಂಬಿಯ ಅಂಕ ಖಾತೆ ತೆರೆಯಲೇಬೇಕಾಗಿದೆ. ಹಾಗಾಗಿ ಕೊಲಂಬಿಯ ಗೆಲುವು ಸಾಧಿಸಲು ಶಕ್ತಿಮೀರಿ ಪ್ರಯತ್ನಿಸುವುದು ಖಚಿತವಾಗಿದೆ. ಕೊಲಂಬಿಯ ಇಷ್ಟರವರೆಗೆ ಐದು ವಿಶ್ವಕಪ್‌ನಲ್ಲಿ ಆಡಿದ್ದು ಎರಡು ಬಾರಿ ಮೂರನೇ ಸ್ಥಾನ ಪಡೆದ ಸಾಧನೆ ಮಾಡಿದೆ.