Advertisement

ಫ್ರಾನ್ಸ್‌, ಇಂಗ್ಲೆಂಡಿಗೆ ಭರ್ಜರಿ ಜಯ

06:45 AM Oct 09, 2017 | Team Udayavani |

ಗುವಾಹಾಟಿ: ಅಂಡರ್‌ 17 ವಿಶ್ವಕಪ್‌ನ ರವಿವಾರ ನಡೆದ ಮೊದಲ ಎರಡು ಪಂದ್ಯಗಳಲ್ಲಿ ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ಭರ್ಜರಿ ಗೆಲುವು ದಾಖಲಿಸಿದೆ. ಗುವಾಹಾಟಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್‌ ತಂಡವು ಸಾಧಾರಣ ತಂಡವಾದ ನ್ಯೂ ಕ್ಯಾಲೆಡೋನಿಯ ತಂಡವನ್ನು 7-1 ಗೋಲುಗಳಿಂದ ಸೋಲಿಸಿ ಸಂಭ್ರಮಿಸಿದೆ.

Advertisement

“ಇ’ ಬಣದ ಈ ಪಂದ್ಯದಲ್ಲಿ ಕ್ಯಾಲೆಡೋನಿಯದ ಬೆರ್ನಾರ್ಡ್‌ ಐವ ಸ್ವ ಗೋಲು ಹೊಡೆದು ಫ್ರಾನ್ಸ್‌ಗೆ ಮುನ್ನಡೆ ಒದಗಿಸಿದ್ದರು. ಅಮಿನೆ ಗೊಯಿರಿ ಪಂದ್ಯದ 20ನೇ ನಿಮಿಷದಲ್ಲಿ ಗೋಲು ಹೊಡೆದು ಮುನ್ನಡೆಯನ್ನು 2-0ಕ್ಕೇರಿಸಿದರು. ಅಮಿನೆ ಗೊಯರಿ ಎರಡನೇ ಗೋಲು ದಾಖಲಿಸುವ ಮೊದಲು ಕ್ಲಾಡಿಯೊ ಗೋಮ್ಸ್‌ ಫ್ರಾನ್ಸ್‌ ಪರ ಗೋಲು ಹೊಡೆದಿದ್ದರು. ಇದರಿಂದಾಗಿ ಮೊದಲ ಅವಧಿಯಲ್ಲಿಯೇ ಫ್ರಾನ್ಸ್‌ ಮೇಲುಗೈ ಸಾಧಿಸಿತ್ತು.ಮ್ಯಾಕ್ಸೆನ್ಸ್‌ ಕಾಕ್ವೆರೆಟ್‌ ಫ್ರಾನ್ಸ್‌ ಪರ ಐದನೇ ಗೋಲು ಹೊಡೆದರೆ ಕಿಯಮ್‌ ವನೆಸೆ ಸ್ವ ಗೋಲು ಹೊಡೆದು ಫ್ರಾನ್ಸ್‌ ಮುನ್ನಡೆಯನ್ನು 6-0ಕ್ಕೇರಿಸಿದರು. ಮೊದಲ ಅವಧಿಯ ಆಟ ಮುಗಿದಾಗ ಫ್ರಾನ್ಸ್‌ 6-0 ಮುನ್ನಡೆಯಲ್ಲಿತ್ತು.

ದ್ವಿತೀಯ ಅವಧಿಯಲ್ಲಿ ಸಿದ್ರಿ ವಾಡೆನ್‌ಗೆಸ್‌ ಅವರು ಕ್ಯಾಲೆಡೋನಿಯ ತಂಡದ ಏಕೈಕ ಗೋಲನ್ನು ಹೊಡೆದರು. ಈ ಗೋಲು ಹೊಡೆದ ಮುಂದಿನ ನಿಮಿಷದಲ್ಲಿ ವಿಲ್ಸನ್‌ ಇಸಿಡೋರ್‌ ಫ್ರಾನ್ಸ್‌ ಪರ 7ನೇ ಗೋಲು ದಾಖಲಿಸಿದ್ದರು.

ಚಿಲಿಗೆ ಆಘಾತ
ಕೋಲ್ಕತಾದಲ್ಲಿ ನಡೆದ “ಎಫ್’ ಬಣದ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡಿಗೆ 4-0 ಗೋಲುಗಳಿಂದ ಸೋತ ಚಿಲಿ ಆಘಾತಕ್ಕೆ ಒಳಗಾಗಿದೆ. ಅಂಡರ್‌ 17 ದಕ್ಷಿಣ ಅಮೆರಿಕನ್‌ ಕೂಟದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಚಿಲಿ ತಂಡ ಈ ಕೂಟದಲ್ಲಿ ಆಡುವ ಅರ್ಹತೆ ಗಳಿಸಿತ್ತು. ಇದೇ ವೇಳೆ ಇಂಗ್ಲೆಂಡ್‌ ಕೂಡ ಅಂಡರ್‌ 17 ಯುರೋಪಿಯನ್‌ ಕೂಟದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಈ ಕೂಟದಲ್ಲಿ ಭಾಗವಹಿಸಲು ಟಿಕೆಟ್‌ ಪಡೆದಿತ್ತು.

ಪಂದ್ಯ ಆರಂಭವಾದ ಸ್ವಲ್ಪ ಹೊತ್ತಿನಲ್ಲಿಯೆ ಕಲಂ ಹಡ್ಸನ್‌ ಒಡೊಯಿ ಗೋಲನ್ನು ಹೊಡೆದು ಇಂಗ್ಲೆಂಡಿಗೆ ಮುನ್ನಡೆ ಒದಗಿಸಿದರು. ಗೋಲು ಸಮಬಲಗೊಳಿಸಲು ಚಿಲಿ ಶಕ್ತಿಮೀರಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ದ್ವಿತೀಯ ಅವಧಿಯ ಆರಂಭದಲ್ಲಿ ಜಾಡನ್‌ ಸ್ಯಾಂಚೊ ಇಂಗ್ಲೆಂಡಿನ ಮುನ್ನಡೆಯನ್ನು 2-0ಕ್ಕೇರಿಸಿದರು. ಮುಂದಿನ ಕೆಲವು ನಿಮಿಷಗಳಲ್ಲಿ ಸ್ಯಾಂಚೊ ಇನ್ನೊಂದು ಗೋಲು ಹೊಡೆದರೆ ಅದ್ಭುತ ಫ್ರಿ ಕಿಕ್‌ನಲ್ಲಿ ಆ್ಯಂಜೆಲ್‌ ಗೋಮ್ಸ್‌ ಇಂಗ್ಲೆಂಡಿನ ನಾಲ್ಕನೇ ಗೋಲು ಹೊಡೆದು ಸಂಭ್ರಮಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next